Advertisement

ಶಿಶು ಆರೈಕೆ ಕೇಂದ್ರಗಳಿಗೆ ಎತ್ತಂಗಡಿ ಭೀತಿ

11:44 AM Jan 23, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಖಾಸಗಿ ಶಿಶು ಆರೈಕೆ ಕೇಂದ್ರಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ವಸತಿ ಪ್ರದೇಶಗಳಲ್ಲಿ ನೆಲೆಯೂರಿರುವ ಕೇಂದ್ರಗಳ ಎತ್ತಂಗಡಿಗೆ ಮುಂದಾಗಿ ನೋಟಿಸ್‌ ಜಾರಿ ಮಾಡಿದೆ. ಈಗಾಗಲೇ ವಸತಿ ಪ್ರದೇಶಗಳಲ್ಲಿರುವ ಶಿಶು ಹಾರೈಕೆ ಕೇಂದ್ರಗಳಿಗೆ ನೋಟಿಸ್‌ ಜಾರಿ ಮಾಡುತ್ತಿರುವ ಪಾಲಿಕೆ, ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಗೆ ಬರುವುದರಿಂದ ಅವುಗಳ ತೆರವಿಗೆ ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.

Advertisement

ಹೈಕೋರ್ಟ್‌ ಆದೇಶದಂತೆ ಜನವಸತಿ ಪ್ರದೇಶಗಳಲ್ಲಿರುವ ಕಾನೂನು ಬಾಹಿರ ವಾಣಿಜ್ಯ ಉದ್ಯಮಗಳ ತೆರವಿಗೆ ಬಿಬಿಎಂಪಿ ನೋಟಿಸ್‌ ಜಾರಿ ಮಾಡುತ್ತಿದ್ದು, ಮಾಸ್ಟರ್‌ಪ್ಲಾನ್‌ 2015ರ ಅನುಸಾರ ಮಾಂಟೆಸ್ಸರಿಗಳು, ಚೈಲ್ಡ್‌ ಡೇ ಕೇರ್‌ ಕೇಂದ್ರಗಳು, ಪ್ರೀ ಸ್ಕೂಲ್‌, ಕಿಡ್ಸ್‌ ಕ್ಯಾಂಪ್‌ಗ್ಳು ಸೇರಿದಂತೆ ಇತರೆ ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಗೆ ಬರುತ್ತವೆ. ಹಾಗಾಗಿ ಈ ಕೇಂದ್ರಗಳನ್ನೂ ಜನವಸತಿ ಪ್ರದೇಶದಿಂದ ತೆರವು ಮಾಡುವಂತೆ ನೋಟಿಸ್‌ ನೀಡಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರದಷ್ಟು ಖಾಸಗಿ ಶಿಶು ಆರೈಕೆ ಕೇಂದ್ರಗಳಿದ್ದು, ಇವುಗಳಲ್ಲಿ ಸುಮಾರು 3.5 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಮಾಡಲಾಗಿದೆ. 7,000ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಹಳಷ್ಟು ಕೇಂದ್ರಗಳು ಜನವಸತಿ ಪ್ರದೇಶಗಳಲ್ಲೇ ತಲೆ ಎತ್ತಿವೆ. ಹಾಗಾಗಿ ನಿಯಮ ಬಾಹಿರವಾದ ಎಲ್ಲ ಶಿಶು ಹಾರೈಕೆ ಕೇಂದ್ರಗಳಿಗೂ ನೋಟಿಸ್‌ ಜಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮಾಹಿತಿ ಪ್ರಕಾರ ಈ ಶಿಶು ಹಾರೈಕೆ ಕೇಂದ್ರಗಳು ಪ್ರತಿ ಮಗುವಿಗೆ ಮಾಸಿಕ 1,000 ರೂ.ನಿಂದ 5,000 ರೂ. ವರೆಗೂ ಶುಲ್ಕ ಪಡೆಯುತ್ತಿವೆ. ಕುಟುಂಬದ ಎಲ್ಲ ಸದಸ್ಯರೂ ಉದ್ಯೋಗದಲ್ಲಿರುವವರು, ಕೆಲ ಶ್ರೀಮಂತ ಕುಟುಂಬಗಳು, ಇನ್ನು ಕೆಲವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಮಗುವಿಗೆ ವಿಶೇಷ ತರಬೇತಿ, ಶಿಕ್ಷಣ ಕೊಡಿಸುವ ಉದ್ದೇಶಕ್ಕಾಗಿ ಇಂತರ ಕೇಂದ್ರಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಮಕ್ಕಳ ಆರೈಕೆ, ಆಟ-ಪಾಠದ ಜವಾಬ್ದಾರಿಯನ್ನು ಈ ಕೇಂದ್ರಗಳು ನಿರ್ವಹಿಸಿ ಪೋಷಕರಿಂದ ನಿಗದಿತ ಸಂಭಾವನೆ ಪಡೆಯುತ್ತವೆ.  

ಬಿಬಿಎಂಪಿ ಶಿಕ್ಷಣ ಇಲಾಖೆ ಅಧಿಕಾರಿ ಶಿವಣ್ಣ ಅವರು ಹೇಳುವ ಪ್ರಕಾರ, ಮಾಸ್ಟರ್‌ ಪ್ಲಾನ್‌ 2015ರ ಪ್ರಕಾರ ಮಾಂಟೆಸ್ಸರಿ, ಪ್ರೀ ಸ್ಕೂಲ್‌, ಕಿಡ್ಸ್‌ ಕ್ಯಾಂಪ್‌, ಚೈಲ್ಡ್‌ ಕೇರ್‌ ಸೆಂಟರ್‌ಗಳು ಸೇರಿದಂತೆ ಬಹುತೇಕ ಖಾಸಗಿ ಶಿಶು ಹಾರೈಕೆ ಕೇಂದ್ರಗಳು ವಾಣಿಜ್ಯ ಉದ್ಯಮಗಳ ವ್ಯಾಪ್ತಿಯಲ್ಲಿ ಬರುತ್ತವೆ. ಕೆಲವು ಕೇಂದ್ರಗಳು ಪ್ರತಿ ಮಗುವಿಗೆ ವಾರ್ಷಿಕ 50 ಸಾವಿರ ರೂ. ವರೆಗೂ ಸಂಭಾವನೆ ಪಡೆಯುತ್ತಿವೆ. ಇದು ಉದ್ಯಮವಲ್ಲದೆ ಇನ್ನೇನು ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

Advertisement

ಮಾಲೀಕರ ಆಕ್ಷೇಪ: ಈಗಾಗಲೇ ನೋಟಿಸ್‌ ತಲುಪಿರುವ ಕೆಲ ಶಿಶು ಹಾರೈಕೆ ಕೇಂದ್ರಗಳ ಮಾಲೀಕರು ಬಿಬಿಎಂಪಿ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಪ್ರದೇಶಗಳಲ್ಲಿ ಶಿಶು ಆರೈಕೆ ಕೇಂದ್ರಗಳನ್ನು ಆರಂಭಿಸಿದೆ ಅಲ್ಲಿ ಮಕ್ಕಳಿಗೆ ಒಳ್ಳೆಯ ವಾತಾವರಣ ಸಿಗಲು ಹೇಗೆ ಸಾಧ್ಯ? ಯಾವ ಪೋಷಕರು ತಾನೆ ಅಂತಹ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ? ಹಾಗಾಗಿ ಶಿಶು ಹಾರೈಕೆ ಕೇಂದ್ರಗಳನ್ನು ವಾಣಿಜ್ಯ ಉದ್ಯಮಗಳ ವ್ಯಾಪ್ತಿಯಿಂದ ಹೊರಗಿಡಬೇಕು. ಬಿಬಿಎಂಪಿ ಕ್ರಮದ ಬಗ್ಗೆ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜರಾಜೇಶ್ವರಿ ನಗರದ ಕಿಡ್ಸ್‌ ಕ್ಯಾಂಪ್‌ ಮಾಲೀಕ ರಘು ಆಗ್ರಹಿಸಿದ್ದಾರೆ.

ಏನಿದು ಮಾಸ್ಟರ್‌ಪ್ಲಾನ್‌?
2015ರ ಮಾಸ್ಟರ್‌ಪ್ಲಾನ್‌ ಪ್ರಕಾರ 40 ಅಡಿಗಿಂತ ಕಡಿಮೆ ವಿಸ್ತೀರ್ಣದ ರಸ್ತೆಗಳಲ್ಲಿನ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. 40 ಅಡಿ ರಸ್ತೆ ಇದ್ದಲ್ಲಿ ನಿವೇಶನದ ಶೇ.20 ರಷ್ಟು ವಾಣಿಜ್ಯ ಬಳಕೆ ಮಾಡಿಕೊಳ್ಳಬಹುದು. 100 ಅಡಿ ರಸ್ತೆ ಇದ್ದರೆ ಸಂಪೂರ್ಣ ಕಟ್ಟಡ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಬಹುದು. ಆದರೆ, ಬಹುತೇಕ ವಸತಿ ಪ್ರದೇಶಗಳಲ್ಲಿ ಸಣ್ಣ ರಸ್ತೆಗಳಿರುವುದರಿಂದ ಸಂಚಾರದಟ್ಟಣೆ ಉಂಟಾಗಿ ಜನಜೀವನದ ನೆಮ್ಮದಿ ಹಾಳಾಗುತ್ತಿದೆ. ಇಂತಹ ಪ್ರದೇಶಗಳಲ್ಲೇ ವಾಣಿಜ್ಯೋದ್ಯಮ ನಡೆಸಲಾಗುತ್ತಿದೆ ಎಂಬುದು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಆರೋಪ. 

ಮಾಸ್ಟರ್‌ ಪ್ಲಾನ್‌ ಪ್ರಕಾರ ಜನವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಕೆಲ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಂದ ನೆಮ್ಮದಿಗೆ ಭಂಗವಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ನೀಡಿರುವ ಆದೇಶದ ಅನುಸಾರ ಖಾಸಗಿ ಶಿಶು ಹಾರೈಕೆ ಕೇಂದ್ರಗಳೂ ಸೇರಿದಂತೆ ನಿಯಮ ಬಾಹಿರ ವಾಣಿಜ್ಯ ಉದ್ಯಮಗಳಿಗೆ ನೋಟಿಸ್‌ ಜಾರಿ ಮಾಡುತ್ತಿದ್ದೇವೆ. 
-ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ಲಿಂಗರಾಜು ಕೋರಾ

Advertisement

Udayavani is now on Telegram. Click here to join our channel and stay updated with the latest news.

Next