ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಲು ಬಯಸಿದ ಸದಸ್ಯರಿಗೆ ಅವಕಾಶ ನೀಡಿದರು. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮೌನವಾಗಿ ಕುಳಿತಿದ್ದರು. ಆಗ ಮಧ್ಯಪ್ರವೇಶಿದ ಸ್ಪೀಕರ್ ರಮೇಶ್ ಕುಮಾರ್, ತಾವೇ ಸಿದ್ದರಾಮಯ್ಯ ಅವರಿಗೆ ತಮ್ಮ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುವಂತೆ ಮನವಿ ಮಾಡಿದರು.
ಸರ್ಕಾರ ರಚನೆಯಾದಾಗ ಸಭಾಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದ್ದೀರಿ, ಈಗ ನನ್ನ ಮೇಲೆ ಆರೋಪ ಕೇಳಿ ಬಂದಿದೆ. ನೀವು ಸುಮ್ಮನೆ ಕುಳಿತುಕೊಂಡರೆ,ನನ್ನ ಮೇಲೆ ಸಂಶಯ ಇದೆ ಎನಿಸುತ್ತದೆ. ನೀವೂ ನನ್ನ ಬಗ್ಗೆ ಮಾತನಾಡಿ ಎಂದು ಚಟಾಕಿ ಹಾರಿಸಿದರು.
ಆಗ ಎದ್ದು ನಿಂತ ಸಿದ್ದರಾಮಯ್ಯ, ನಿಮ್ಮ ಮೇಲೆ ನನಗೆ ಅಪಾರ ಗೌರವ ಇದೆ. ನಲವತ್ತು ವರ್ಷದಿಂದ ನಿಮ್ಮನ್ನು ವೈಯಕ್ತಿಕವಾಗಿ ನೋಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಇತಿಶ್ರೀ ಹಾಡಬೇಕು. ಸದನ ನಿಮ್ಮನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ. 225 ಸದಸ್ಯರ ಹಿತ ಕಾಯುವುದು ನಿಮ್ಮ ಜವಾಬ್ದಾರಿ. ಇದು ಭಾವನಾತ್ಮಕ ವಿಷಯವಲ್ಲ. ಗಂಭೀರ ವಿಷಯ. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕು.
ಕಳೆದ ಆರು ತಿಂಗಳಿನಿಂದ ಏನೇನು ನಡೆಯುತ್ತಿದೆ ಎನ್ನುವುದನ್ನು ನೋಡಿದ್ದೇವೆ. ಆಡಿಯೋದಲ್ಲಿರುವ ಎಲ್ಲ ಸಂಭಾಷಣೆ ಬಗ್ಗೆಯೂ ತನಿಖೆಯಾಗಬೇಕು. ಯಾರು ಮಾತನಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಇಡೀ ದೇಶವೇ ಗಮನಿಸುತ್ತಿದೆ. ನಮ್ಮ ಸದನ ಕೈಗೊಳ್ಳುವ ತೀರ್ಮಾನ ಇಡೀ ದೇಶದ ಜನತೆಗೆ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.