Advertisement
ಅಧ್ಯಯನ ಹೆಸರಿನಲ್ಲಿ ಶಾಸನ ರಚನಾ ಸಮಿತಿ ಸದಸ್ಯರಾಗಿರುವ 17 ಶಾಸಕರು, ಸಮಿತಿ ಅಧ್ಯಕ್ಷರಾದ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ಮೇ 9ರಿಂದ 16ರವರೆಗೆ ಕೋಲ್ಕತಾ, ಅಹಮದಾಬಾದ್, ಅಂಡಮಾನ್-ನಿಕೋಬಾರ್, ತಿರುವ ನಂತಪುರಕ್ಕೆ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದರು. ಆರಂಭದಲ್ಲಿ ಇದಕ್ಕೆ ಸ್ಪೀಕರ್ ಅನುಮತಿಯನ್ನೂ ನೀಡಿದ್ದರು.
ದಿನೇಶ್ ಗುಂಡೂರಾವ್, ಎ.ಎಸ್.ಪಾಟೀಲ್ ನಡಹಳ್ಳಿ, ಹಂಪಯ್ಯ ಸಾಹುಕಾರ್ ಬಲ್ಲಟಗಿ, ಎಂ.ಕೆ.ಸೋಮಶೇಖರ್, ಬಿ.ಸುರೇಶ್‌ಗೌಡ, ಬಿ.ಎನ್.ವಿಜಯ್ ಕುಮಾರ್, ಎಲ್.ಎ.ರವಿಸುಬ್ರಹ್ಮಣ್ಯ, ಎಸ್.ರಘು, ಮಲ್ಲಿಕಾರ್ಜುನ ಖೂಬಾ, ಜಮೀರ್ ಅಹಮ್ಮದ್ ಖಾನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ.ಬಿ.ಪ್ರಸನ್ನಕುಮಾರ್, ಕೆ.ಬಿ.ಶಾಣಪ್ಪ, ಸೋಮಣ್ಣ ಬೇವಿನ ಮರದ, ಎಂ.ನಾರಾಯಣಸ್ವಾಮಿ, ಕಾಂತರಾಜ… ಇದ್ದರು. ಬರ ಪರಿಸ್ಥಿತಿ ನಡುವೆಯೇ ಶಾಸಕರು ಅಧ್ಯಯನ ಪ್ರವಾಸ ಹೊರಟಿರುವುದು ಬೆಳಕಿಗೆ ಬರುತ್ತಿದ್ದಂತೆ ಇದಕ್ಕೆ ಬ್ರೇಕ್ ಹಾಕಿರುವ ಸ್ಪೀಕರ್ ಕೆ.ಬಿ.ಕೋಳಿವಾಡ, ರಾಜ್ಯದಲ್ಲಿ ಬರ ಇರುವ ಕಾರಣ ಶಾಸಕರು ಪ್ರವಾಸಕ್ಕೆ ತೆರಳಬಾರದು. ಬರ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಪ್ರವಾಸಕ್ಕೆ ತಡೆ ನೀಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕೋಳಿವಾಡ, ಸದ್ಯಕ್ಕೆ ಶಾಸಕರು ಪ್ರವಾಸ ಕೈಗೊಳ್ಳದಂತೆ ನಿರ್ದೇಶನ ನೀಡಲಾಗಿದೆ. ಜೂನ್ ತಿಂಗಳಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಆ ಬಳಿಕ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.