Advertisement

ಹಾಡುಗಳು ಅಳಿಸುತ್ತಿವೆ,  ಸಂತೈಸುತ್ತಿವೆ

12:30 AM Jan 01, 2019 | |

ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ.    

Advertisement

“ಕಾಣದ ಕಡಲಿಗೆ ಹಂಬಲಿಸಿದೆ ಮನ’ ಅಂತ ದೊಡ್ಡ ಧ್ವನಿಯಲ್ಲಿ, ಸಿ. ಅಶ್ವಥ್‌ ಅವರನ್ನೇ ಇಮಿಟೇಟ್‌ ಮಾಡುತ್ತಾ ಹಾಡುತ್ತಿದ್ದ ಘಳಿಗೆಯಲ್ಲೇ ಕಂಡವಳು ನೀನು. “ಅದೆಷ್ಟು ತನ್ಮಯತೆಯಿಂದ ಹಾಡ್ತೀರಿ ನೀವು’ ಅಂತ ನೀನು ಬೆನ್ನು ತಟ್ಟಿದ ಮೇಲೆ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಆಗಷ್ಟೇ ಅರಳಿದ ಕುಸುಮದ ಹಾಗೆ, ಮೊಗದ ಮೇಲೆ ತಾಜಾ ನಗು, ಬೆಳದಿಂಗಳಂಥ ಬಣ್ಣ, ನೋಡಿದಷ್ಟೂ ನಿಗೂಢವೆನಿಸುವ, ಏನನ್ನೂ ಬಿಟ್ಟು ಕೊಡದ ಬೊಗಸೆ ಕಣ್ಣುಗಳು, ಹಣೆ ಮೇಲೆ ಕಚಗುಳಿಯಿಡುತ್ತಿದ್ದ ಮುಂಗುರುಳು, ಕೆಂಪು ಚೂಡಿಯ ಮೇಲೆ ಬಿಳಿಯ ವೇಲ್‌ ಧರಿಸಿದ ನಿನ್ನನ್ನು ನೋಡಿದ ಮೇಲೆ, ಯಾವ ಹುಡುಗ ತಾನೆ ಪ್ರೀತಿಯಲ್ಲಿ ಬೀಳದೆ ಇರಬಲ್ಲ ಹೇಳು? ನನಗೂ ಅದೇ ಆಗಿದ್ದು! 

ವಿದ್ಯೆ ತಲೆಗೆ ಹತ್ತದೆ ಇದ್ದಾಗ, ತುತ್ತಿನ ಚೀಲ ತುಂಬಿಸಲು ನೆರವಾದದ್ದೇ ನನ್ನ ದನಿ. ಸ್ಥಳೀಯ ಆರ್ಕೆಸ್ಟ್ರಾದಲ್ಲಿ ಹಾಡುಗಾರನಾಗಿ ಸೇರಿ ಮದುವೆ, ರಿಸೆಪ್ಷನ್‌, ಮನರಂಜನಾ ಕಾರ್ಯಕ್ರಮಗಳಲ್ಲಿ ಹಾಡುತ್ತಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ.

ಅಂದು ನಮ್ಮಿಬ್ಬರ ಮಧ್ಯೆ ನಡೆದ ಮಾತು, ಅಭಿರುಚಿಗಳ ವಿನಿಮಯವೇ ಇಬ್ಬರನ್ನೂ ತೀರಾ ಹತ್ತಿರವಾಗಿಸಿತ್ತು. ಅದಾದ ನಂತರ ಪ್ರತಿ ಕಾರ್ಯಕ್ರಮದಲ್ಲೂ ನಿನ್ನ ಉಪಸ್ಥಿತಿ, ಹಾಡಿಗೆ ಮತ್ತಷ್ಟು ಹುರುಪು ನೀಡುತ್ತಿತ್ತು. “ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ’ ಎಂದು ನಾನು ಹಾಡುವಾಗ ನಿನ್ನ ಕಣ್ಣೊಳಗೆ ಸಣ್ಣಗೆ ಸುಳಿಯುವ ಚಕ್ರತೀರ್ಥ. “ನವಿಲೂರಿನೊಳಗೆಲ್ಲ ನೀನೆ ಬಲು ಚೆಲುವೆ ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ’ ಎಂದು ಹಾಡಿದಾಗ ನಾಚಿ ನೀರಾಗುತ್ತಿದ್ದ ನೀನು ಇನ್ನಷ್ಟು ಅಂದವಾಗಿ ಕಾಣುತ್ತಿದ್ದೆ. ನಾನು ಎದೆತುಂಬಿ ಹಾಡುತ್ತಿದ್ದ ಭಾವಗೀತೆಗಳೇ ನಮ್ಮಿಬ್ಬರ ಹೃದಯಗಳು ಒಂದಾಗಲು ಕಾರಣವಾಗಿದ್ದು ನನಗಿಂದಿಗೂ ಅಚ್ಚರಿ. 

ಕೇರಿಯ ಕೊನೆಯ ತಿರುವಿನಲ್ಲಿ ಈಗಲೋ ಆಗಲೋ ಬೀಳುತ್ತಿದ್ದ ಮುರುಕು ಗುಡಿಸಲಿನ ಹುಡುಗ ನಾನು. ನೀನೋ ಮಹಲಿನ ರಾಣಿ. ಆದರೆ ಪ್ರೀತಿ ಅರಳಲು ಅಂತಸ್ತು ಅಡ್ಡಿಯಾಗಲಿಲ್ಲ. “ನೀನು ಭಾವಗೀತೆಗಳನ್ನೇ ಏಕೆ ಹಾಡುತ್ತೀಯಾ?’ ಎಂದವಳಿಗೆ, “

Advertisement

ನನ್ನ ದುಃಖದ ಕ್ಷಣಗಳಲ್ಲಿ ಆಸರೆಯಾಗಿದ್ದು ಇದೇ ಭಾವಗೀತೆಗಳು. ಬದುಕಿನಿಂದ ಎದ್ದು ನಡೆದು ಬಿಡಬೇಕು ಅಂತ ತೀರಾ ಹತಾಶನಾದಾಗ ಕೈಡಿದು ಬದುಕಿಗೆ ಹುರುಪು ತುಂಬಿದ್ದೂ ಇವೇ ಗೀತೆಗಳು. ಈಗ ನೋಡು ನನಗೀಗ ಅವೇ ಅನ್ನ ಹಾಕುತ್ತಿವೆ’ ಅಂದಾಗ, “ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕಗೊಂಡಿತು ಧಾರಿಣಿ’ ಎನ್ನುವ ಹಾಗೆ ಗಟ್ಟಿಯಾಗಿ ತಬ್ಬಿಕೊಂಡ ನಿನ್ನ ತಲೆ ನೇವರಿಸುತ್ತಿದ್ದೆ.

ಭಾವಗೀತದ ದೋಣಿ ಹಾಯಾಗಿ ಹರಿಸುತ್ತಿದ್ದ ಘಳಿಗೆಯಲ್ಲೇ ಆಕಾಶ ಬಿಕ್ಕುವ ಸದ್ದು ಎದೆ ನಡುಗಿಸಿದ್ದು ಸುಳ್ಳಲ್ಲ. ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು. ಏನೆಲ್ಲಾ ಆಗಿ ಹೋದವು ಆ ವಿಷಮ ಸನ್ನಿವೇಶದಲ್ಲಿ. ಆನಂತರ ಒಮ್ಮೆಯೂ ನಿನ್ನ ಮುಖ ನಾನು ಕಾಣಲೇ ಇಲ್ಲ. ಈಗ ಕೊರಳ ಸೆರೆಯುಬ್ಬಿ “ಹೇಳಿ ಹೋಗು ಕಾರಣ ಹೋಗುವ ಮೊದಲು’ ಅನ್ನುವ ಹಾಡನ್ನಷ್ಟೇ ಹಾಡುತ್ತಿದ್ದೇನೆ. ಸಾಂತ್ವನಗೈಯಲು ಯಾರೂ ಇಲ್ಲ. ನೀನುಳಿಸಿ ಹೋದ ಭಾವಗೀತೆಗಳ ವಿನಹ.  

ನಾಗೇಶ್‌ ಜೆ. ನಾಯಕ, ಉಡಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next