ಗೀತರಚನೆಕಾರ ನಾಗೇಂದ್ರ ಪ್ರಸಾದ್ ಸಾವಿರಾರು ಗೀತೆಗಳನ್ನು ರಚಿಸಿದವರು. ಹೊಸಬರು, ಹಳಬರಿಗೂ ಪವರ್‌ಫುಲ್ ಹಾಡು ಬರೆದುಕೊಟ್ಟವರು. ಅಷ್ಟೇ ಅಲ್ಲ, ಬಹುತೇಕ ಸ್ಟಾರ್‌ಗಳ ಇಂಟ್ರಡಕ್ಷನ್ ಸಾಂಗ್ ಬರೆದು ಸೈ ಎನಿಸಿಕೊಂಡವರು. ನಟರಾಗಿಯೂ, ನಿರ್ದೇಶಕ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ನಾಗೇಂದ್ರ ಪ್ರಸಾದ್, ಹೀಗೊಂದು ವಿಭಿನ್ನ ಎನ್ನುವ ಮತ್ತು ಅಷ್ಟೇ ಮನಸ್ಸಿಗೆ ನಾಟುವಂತಹ ಗೀತೆ ರಚಿಸಿದ್ದಾರೆ.
ಹೌದು, ಅವರದೇ ಆದಂತಹ ಮ್ಯೂಸಿಕ್ ಬಜಾರ್ ಯುಟ್ಯೂಬ್ ಚಾನೆಲ್‌ನಲ್ಲಿ “ಕಾಲ ಕಲಿಸಿದ ಪಾಠ’ ಶೀರ್ಷಿಕೆಯಡಿ “ಬಿಡಿಸಿ ಹೇಳಬೇಕೆ ಪಡೆದ ಸುಖಗಳ.. ಗಾಳಿ ಮತ್ತು ಧೂಳು ಕೊಡವಿಕೊಂಡಿದೆ. ನೀರು ತನ್ನ ತಾನೇ ತೊಳೆದುಕೊಂಡಿದೆ. ನಭದ ಕಣ್ಣು ನಗುತ್ತಿದೆ. ಬೆಂಕಿ ದೀಪವಾಗಿದೆ…’ ಎಂಬ ಅರ್ಥಪೂರ್ಣ ಹಾಡು ಬರೆದಿದ್ದು, ಈ ಹಾಡಿಗೆ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ರಾಗ ಸಂಯೋಜಿಸಿ, ಹಾಡಿದ್ದಾರೆ.
ಇತ್ತೀಚೆಗೆ ನಾಗೇಂದ್ರ ಪ್ರಸಾದ್ ಅವರ ಮ್ಯೂಸಿಕ್ ಬಜಾರ್ ಬ್ಯಾನರ್‌ನಲ್ಲೇ ಈ ಹಾಡನ್ನು ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಈ ಹಾಡನ್ನು ಚಿತ್ರೀಕರಿಸಿದ್ದು, ಅದರಲ್ಲಿ ಅನೂಪ್ ಸೀಳಿನ್, ನಾಗೇಂದ್ರ ಪ್ರಸಾದ್ ಹಾಗು ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಈ ಹಾಡು ರಚಿಸಿ, ನಿರ್ದೇಶಿಸಿದ ಕಾರಣದ ಬಗ್ಗೆ ಹೇಳುವ ನಾಗೇಂದ್ರ ಪ್ರಸಾದ್, “ಈ ಕೋವಿಡ್ 19 ಸಂಕಷ್ಟದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಿದರು, ನೋವುಂಡರು. ಜನರ ಬದುಕು ಅತಂತ್ರವಾಯಿತು. ಅಷ್ಟೆಲ್ಲಾ ಅನಾಹುತಗಳ ನಡುವೆ ಪ್ರಕೃತಿ ಮತ್ತು ನಮ್ಮ ಜೀವನ ಶೈಲಿ ನಮಗೆ ಅನೇಕ ಪಾಠ ಹೇಳಿದವು.
ನಿಜವಾದ ಬದುಕು ಮತ್ತು ಅದರ ಸುಖ ಏನೆಂದು ಅರಿತೆವು. ಆ ಪಾಠ ನೆನಪಿಟ್ಟುಕೊಂಡು ಸಾಗುತ್ತೇವಾ? ಅಥವಾ ಮತ್ತದೇ ಧಾವಂತವಾ? ಉತ್ತರ ಜನರಿಗೆ ಬಿಟ್ಟದ್ದು. ಇದನ್ನಿಟ್ಟುಕೊಂಡು ಈ ಗೀತೆ ರಚಿಸಿದ್ದೇನೆ ಎನ್ನುತ್ತಾರೆ ನಾಗೇಂದ್ರ ಪ್ರಸಾದ್. ಈ ವಿಡಿಯೊ ಚಿತ್ರೀಕರಣ ಮಾಡಿದ್ದು ಉಪ್ಪಿ ಮತ್ತು ವೆಸ್ಲಿ ಬ್ರೌನ್. ಪ್ರದೀಪ್ ಬಂಗಾರ್‌ಪೇಟ್ ಸಂಕಲನ ಮಾಡಿದ್ದಾರೆ. ಶ್ರೀನಿವಾಸ್ ಆಚಾರ್ ಗಿಟಾರ್ ನುಡಿಸಿದ್ದಾರೆ. ಸದ್ಯಕ್ಕೆ ಯುಟ್ಯೂಬ್‌ನಲ್ಲಿ ಈ ಹಾಡಿಗೆ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ.