Advertisement

ಪರಿಹಾರ ಕಾಮಗಾರಿ ಮತ್ತಷ್ಟು ಚುರುಕಾಗಲಿ

06:10 AM Aug 21, 2018 | |

ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ನೆರವಾಗಲು ಬಿಜೆಪಿಯ ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ತಮ್ಮ ಒಂದು ತಿಂಗಳ ವೇತನ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.

Advertisement

ಬಿಜೆಪಿಯ ಶಾಸಕರು ಹಾಗೂ ಸಂಸದರ ಒಂದು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗುವುದು. ಸಾರ್ವಜನಿಕರು ಸಹ  ಉದಾರವಾಗಿ ಧನ ಸಹಾಯ ಮಾಡಬೇಕು ಎಂದು ಪ್ರತಿಪಕ್ಷ ನಾಯಕರ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಊಹೆಗೂ ನಿಲುಕದಷ್ಟು ಹಾನಿಯುಂಟಾಗಿದ್ದು ಜಿಲ್ಲೆಯ ಜನರು ತಮ್ಮ ಸಹಜ ಜೀವನಕ್ಕೆ ಮರಳಲು ಹೆಣಗಾಡುತ್ತಿದ್ದಾರೆ. ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡಿರುವ ಜನರಿಗೆ ನೆರವಿಗೆ ಧಾವಿಸುವುದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಸದ್ಯಕ್ಕೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಮರೋಪಾದಿಯಲ್ಲಿ ಶಾಶ್ವತ ನೆಲೆಯನ್ನು ಒದಗಿಸಬೇಕಾಗದ ಅಗತ್ಯವಿದೆ.  ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತಷ್ಟು ಚುರುಕಾಗಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ  ಒತ್ತಾಯಿಸಿದ್ದಾರೆ.

ಪುನರ್ವಸತಿ ಕೇಂದ್ರಗಳಲ್ಲಿರುವ ಸಂತ್ರಸ್ತರನ್ನು ನಾನು ಖುದ್ದಾಗಿ ಭೇಟಿ ಮಾಡಿದ್ದೇನೆ. ಸರ್ವಸ್ವವನ್ನೂ ಕಳೆದುಕೊಂಡಿರುವ ಜನರಿಗೆ ಶಾಶ್ವತ ಪುನರ್ವಸತಿ ಒದಗಿಸಲು ಕೇಂದ್ರ ಸರ್ಕಾರದಿಂದಲೂ ನೆರವು ಕಲ್ಪಿಸಲು ಪ್ರಯತ್ನಿಸಲಾಗುವುದು. ರಾಜ್ಯ ಸರ್ಕಾರ  ಈ ಸಂಬಂಧ ತಕ್ಷಣವೇ ಯೋಜನೆ ರೂಪಿಸಿ ಅನುಷ್ಟಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಪಾಲಿಕೆ ಸದಸ್ಯರ ಎರಡು ತಿಂಗಳ ವೇತನ
ಈಮಧ್ಯೆ, ಬಿಬಿಎಂಪಿಯಲ್ಲಿರುವ ಬಿಜೆಪಿಯ 99 ಪಾಲಿಕೆ ಸದಸ್ಯರು ಎರಡು ತಿಂಗಳ ವೇತನ ಪರಿಹಾರ ನಿಧಿಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.

Advertisement

ಸಂತ್ರಸ್ತರಿಗೆ ನೆರವು ಕೊಡಿ
“ಕೊಡಗು ಜಿಲ್ಲೆಯಲ್ಲಿ ಮಳೆಯಬ್ಬರದಿಂದ ಪರಿಸ್ಥಿತಿ ಕೈ ಮೀರಿದೆ. ಜನ ಜೀವನ ಸಹಜ ಸ್ಥಿತಿಗೆ ಬರಲು ತಿಂಗಳುಗಳೇ ಬೇಕು. ಅಲ್ಲಿನ ಸಂತ್ರಸ್ತರಿಗೆ ನನ್ನ ಕೈಲಾದಷ್ಟು ನೆರವು ನೀಡಿದ್ದೇನೆ.ರಾಜ್ಯದ ಸಹೃದಯಿಗಳು ಮಾನವೀಯತೆಯ ದೃಷ್ಟಿಯಿಂದ ಕೈಲಾದಷ್ಟು ನೆರವು ನೀಡಬೇಕು’ಎಂದು ನಟ ಪುನೀತ್‌ ರಾಜಕುಮಾರ್‌ ಬಾಗಲಕೋಟೆಯಲ್ಲಿ ಮನವಿ ಮಾಡಿದರು.

ಹಾಲಿನ ಪುಡಿ ರವಾನೆ
ಮಂಡ್ಯ:
ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದಿಂದ ನೆಲೆ ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ಜಿಲ್ಲಾ ಹಾಲು ಒಕ್ಕೂಟ 10 ಲಕ್ಷ ರೂ. ಮೌಲ್ಯದ ಹಾಲು ಮತ್ತು ಹಾಲಿನ ಪುಡಿಯನ್ನು ಸೋಮವಾರ ರವಾನಿಸಿತು. ಮನ್‌ ಮುಲ್‌ನಿಂದ ಎರಡು ಲಾರಿಗಳಲ್ಲಿ 1 ಕೆ.ಜಿ. ಪ್ಯಾಕೆಟ್‌ ನ 2,000 ಪ್ಯಾಕೆಟ್‌ಗಳು ಹಾಗೂ 500 ಎಂಎಲ್‌ನ 30 ಸಾವಿರ ಯುಎಚ್‌ಟಿ ಗುಡ್‌ಲೈಫ್ ಹಾಲಿನ ಪ್ಯಾಕೆಟ್‌ಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next