Advertisement

ಪಡುಪೆರಾರ: ನೀರಿಗೆ ಕಿಂಡಿ ಅಣೆಕಟ್ಟುಗಳೇ ಆಸರೆ

01:10 AM Mar 10, 2020 | Sriram |

ಬಜಪೆ: ಪಡುಪೆರಾರ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಮತ್ತು ಕುಡಿಯುವ ನೀರಿಗೆ ಅಣೆಕಟ್ಟುಗಳನ್ನೇ ಆಶ್ರಯಿಸಲಾಗಿದೆ. ಪರಿಸರದಲ್ಲಿ ಅಣೆಕಟ್ಟುಗಳು ಅಂತರ್ಜಲ ವೃದ್ಧಿಗೆ ಅನು ಕೂಲವಾಗಿದ್ದು ಸಮೃದ್ಧ ಕೃಷಿಗೆ ಆಸರೆ ಯಾಗಿವೆ. ಈ ನಿಟ್ಟಿನಲ್ಲಿ ಶಿಥಿಲಾ ವಸ್ಥೆಯಲ್ಲಿರುವ ಕುಡುಂಬುದು ಅಣೆಕಟ್ಟಿಗೆ ಸುಮಾರು 18 ವರ್ಷಗಳಿಂದಲೂ ಹಲಗೆಯೇ ಹಾಕಿಲ್ಲ. ಈ ಬಗ್ಗೆ ಜಲಸಂಪನ್ಮೂಲ ಸಣ್ಣ ನೀರಾವರಿ ಇಲಾಖೆ ಮತ್ತು ಗ್ರಾ.ಪಂ. ಗಮನಹರಿಸಬೇಕಿದೆ.

Advertisement

ಕುಡುಂಬುದು ಅಣೆಕಟ್ಟಿನಲ್ಲಿ ಶೇಖರಣೆಯಾದ ನೀರು ಸುಮಾರು 6 ಕಿ.ಮೀ. ದೂರದ ಕಬೆತಿಗುತ್ತಿನ ತನಕ ಹರಿಯುತ್ತದೆ. ಮೂರು ವರ್ಷಗಳ ಹಿಂದೆ ಇಲ್ಲಿನ ನಾಗಬ್ರಹ್ಮ ಯುವಕ ಮಂಡಲದವರು ಮಣ್ಣಿನಿಂದ ಕಟ್ಟ ಕಟ್ಟಿ ನೀರು ಸಂಗ್ರಹಣೆಗೆ ಸಹಕರಿಸಿದ್ದರು. ಪಚ್ಚಾರ್‌, ಕಿನ್ನಿಪಚ್ಚಾರ್‌, ಪರಾರಿ ಪ್ರದೇಶಗಳಿಗೆ ಈ ಕಿಂಡಿ ಅಣೆಕಟ್ಟು ಮೂಲಾಧಾರವಾಗಿದೆ.

ಗಂಜಿಮಠದಿಂದ ಹರಿಯುವ ಪ್ರಮುಖ ತೋಡಿಗೆ ಮೂಡುಪೆರಾರದಲ್ಲಿ ಎರಡು, ಪಡುಪೆರಾರದಲ್ಲಿ ಮೂರು ಕಿಂಡಿ ಅಣೆಕಟ್ಟು ಕಟ್ಟಲಾಗಿದೆ. ಬಾಕಿ ಮಾರ್‌, ಗುರುಂಪೆ, ಶೆಟ್ಟಿ ಬೆಟ್ಟು, ಪರಾರಿ, ಮುಂಡ ಬೆಟ್ಟು ಈ ಐದು ಕಿಂಡಿ ಅಣೆ  ಕಟ್ಟುಗಳು ಪರಿಸರದ ಜನ ಕೃಷಿ ಮತ್ತು ಕುಡಿಯುವ ನೀರಿಗೆ ಪ್ರಮುಖ ಆಶ್ರಯವಾಗಿವೆ.

ಒಂದು ತೋಡಿಗೆ ನಿರ್ಮಿಸಿರುವ ಐದು ಕಿಂಡಿ ಅಣೆಕಟ್ಟುಗಳು ಒಂದಕ್ಕೊಂದು ಸಂಪರ್ಕ ವನ್ನು ಹೊಂದಿವೆ. ಪಡುಪೆರಾರದ ಬಾಕಿಮಾರ್‌ ಕಿಂಡಿ ಅಣೆಕಟ್ಟು ಕಲ್ಲಟ್ಟ, ಬಾಕಿಮಾರ್‌, ಪೆಜತ್ತಾಯ ಬೆಟ್ಟು, ಪುಂಗರ ಬೆಟ್ಟು, ಸುಂದಡ್ಕ ಪ್ರದೇಶಗಳಿಗೆ, ಗುರುಂಪೆ ಕಿಂಡಿ ಅಣೆಕಟ್ಟು ಕಡಲ್‌ತ್ತಾಯ, ಪಡ್ಡಾಯಿಬೈಲು, ಕಬೆತಿಗುತ್ತು ಕೆಳ ಪ್ರದೇಶ ಸಹಿತ ಇನ್ನಿತರ ಪ್ರದೇಶಗಳಿಗೆ ನೀರಿನ ಅಶ್ರಯವಾದರೆ ಶೆಟ್ಟಿ ಬೆಟ್ಟು ಕಿಂಡಿ ಅಣೆಕಟ್ಟು ಶೆಟ್ಟಿ ಬೆಟ್ಟು ಬೈಲು, ಕಟಿಂಜಗಳಿಗೆ ಮೂಡುಪೆರಾರದ ಪರಕಟ್ಟ ಕಿಂಡಿ ಅಣೆಕಟ್ಟು ಪರಾರಿ, ಮುಂಡಬೆಟ್ಟು ಪ್ರದೇಶಗಳಿಗೆ, ಮುಂಡಬೆಟ್ಟು ಕಿಂಡಿ ಅಣೆಕಟ್ಟು ಮುಂಡಬೆಟ್ಟು ಮತ್ತು ತಿದ್ಯ ಮುಂಡಬೆಟ್ಟು ಪ್ರದೇಶಗಳಿಗೆ ನೀರಿನ ಆಸರೆಯಾಗಿದೆ.

ಗ್ರಾಮಸ್ಥರಿಂದ ನಿರ್ವಹಣೆ
ಪರಿಸರದ ಕಿಂಡಿ ಅಣೆಕಟ್ಟುಗಳನ್ನು ಇಲ್ಲಿನ ಗ್ರಾಮಸ್ಥರೇ ನಿರ್ವಹಿಸುತ್ತಿದ್ದಾರೆ. ಬಾಕಿಮಾರ್‌ ಕಿಂಡಿ ಅಣೆಕಟ್ಟಿಗೆ ಗ್ರಾಮಸ್ಥರೇ ಹಲಗೆ ಹಾಕಿದರೆ, ಕೃಷಿಕ ಹೇಮಾನಾಥ ಶೆಟ್ಟಿ ಗುರುಂಪೆ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿ ನಿಭಾಯಿಸುತ್ತಿದ್ದಾರೆ. ಶೆಟ್ಟಿ ಬೆಟ್ಟು ಕಿಂಡಿ ಅಣೆಕಟ್ಟಿಗೆ ಕೃಷಿಕರು ಹಾಗೂ ನಾಗಬ್ರಹ್ಮ ಯುವಕ ಮಂಡಲದ ಸದಸ್ಯರು ಸೇರಿ ಹಲಗೆ ಹಾಕಿದ್ದಾರೆ. ಅಂತೆಯೇ ಪರಾರಿ ಕಿಂಡಿ ಅಣೆಕಟ್ಟಿಗೆ ಗ್ರಾಮಸ್ಥರು ಮತ್ತು ಮುಂಡಬೆಟ್ಟು ಕಿಂಡಿ ಅಣೆಕಟ್ಟಿಗೆ ಗಿಲ್ಬರ್ಟ್‌ ಸಹಿತ ಗ್ರಾಮಸ್ಥರು ಸೇರಿ ಹಲಗೆ ಹಾಕಿದ್ದಾರೆ. ಸಣ್ಣ ನೀರಾವರಿ ಇಲಾಖೆ ಕೆಲವು ಬಾರಿ ಮಾತ್ರ ಅಲ್ಪ ಧನ ಸಹಾಯ ನೀಡಿ ಕೈತೊಳೆದುಕೊಂಡಿದೆ.

Advertisement

ಪಂಚಾಯತ್‌ ಸಹಾಯ ನೀಡಿಲ್ಲ
ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ಕಡಿಮೆಯಾಗಲು ಈ ಕಿಂಡಿ ಅಣೆಕಟ್ಟು ಪ್ರಮುಖವಾಗಿದೆ. ಈ ಕಿಂಡಿ ಅಣೆಕಟ್ಟುಗಳ ನಿರ್ವಹಣೆಗೆ ಪಂಚಾಯತ್‌ ಯಾವುದೇ ಅನುದಾನ ನೀಡದಿರುವುದರ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಬಹುಪಯೋಗಿ ಗುರುಂಪೆ ಕಿಂಡಿ ಅಣೆಕಟ್ಟು
ಏಳು ವರ್ಷದ ಹಿಂದೆ ನಿರ್ಮಿಸಲಾದ ಗುರುಂಪೆ ಅಣೆಕಟ್ಟಿನಿಂದಾಗಿ ಪರಿಸರದಲ್ಲಿ ನೀರಿನ ಸಮಸ್ಯೆ ತಲೆದೋರಿಲ್ಲ.

ಈ ಅಣೆಕಟ್ಟನ್ನು ಸ್ಥಳೀಯ ಪ್ರಗತಿಪರ ಕೃಷಿಕ ಹೇಮನಾಥ ಶೆಟ್ಟಿ ಅವರೇ ಖುದ್ದಾಗಿ ಹಲಗೆ ಹಾಕಿ ನೀರು ಶೇಖರಣೆ ಮಾಡುತ್ತಿದ್ದು, ಇದರ ಖರ್ಚನ್ನು ನಿಭಾಯಿಸುತ್ತಿದ್ದಾರೆ. ಪರಿಸರದ ಸುಮಾರು 300 ಎಕ್ರೆ ಕೃಷಿ ಭೂಮಿಗೆ ಈ ಅಣೆಕಟ್ಟು ಆಶ್ರಿತವಾಗಿದ್ದು ಹಿಂಗಾರು ಬೆಳೆ, ತರಕಾರಿ, ತೆಂಗು, ಕಂಗು ತೋಟಗಳಿಗೆ ಪ್ರಮುಖ ನೀರಿನ ಆಸರೆಯಾಗಿದೆ.
ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ 50ಲಕ್ಷ ರೂ. ಅನುದಾನದಲ್ಲಿ 2012ರಲ್ಲಿ ನಿರ್ಮಿಸಲಾಗಿದ್ದ ಶೆಟ್ಟಿ ಬೆಟ್ಟು ಕಿಂಡಿ ಅಣೆಕಟ್ಟನ್ನು ಪರಿಸರದ ಕೃಷಿಕರು ಹಾಗೂ ನಾಗಬ್ರಹ್ಮ ಯುವಕ ಮಂಡಲದ ಸದಸ್ಯರು ಸೇರಿ ಹಲಗೆ ಹಾಕಿ ನೀರು ಶೇಖರಣೆ ಮಾಡುತ್ತಿದ್ದಾರೆ. ಇದರಿಂದ ಪರಿಸರದ ಸುಮಾರು 200 ಎಕ್ರೆ ಕೃಷಿಗೆ ನೆರವಾಗಿದೆ ಎನ್ನುತ್ತಾರೆ ಕೃಷಿಕ ಭೋಜ ಸಫಲಿಗ.

ಅಂತರ್ಜಲ ಮಟ್ಟ ಏರಿಕೆ
ಪಡುಪೆರಾರ ಗ್ರಾ. ಪಂ.ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ನೀರು ಹರಿ ಯುವ ಪ್ರಮುಖ ತೋಡಿಗೆ ಕಿಂಡಿ ಅಣೆಕಟ್ಟು ಕಟ್ಟುವ ಮೂಲಕ ಇಲ್ಲಿನ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕುಡಿ ಯುವ ನೀರನ್ನು ಕೊಳವೆ ಬಾವಿಗಳಿಂದಲೇ ನೀಡಲಾ ಗುತ್ತದೆ. ಗುರು ಕಂಬಳದಲ್ಲಿ ನೀರಿನ ಸಮಸ್ಯೆ ಬಂದಿತ್ತು. ಅದನ್ನು ಈಗ ಸರಿಪಡಿಸಲಾಗಿದೆ.
 - ಶಾಂತಾ ಎಂ.,
ಪಡುಪೆರಾರ ಗ್ರಾ. ಪಂ. ಅಧ್ಯಕ್ಷೆ

ನೀರಿನ ಸಮಸ್ಯೆ ಬಂದಿಲ್ಲ
ಕೃಷಿಗೆ, ಕುಡಿಯುವ ನೀರಿಗೆ ಈ ಕಿಂಡಿ ಅಣೆಕಟ್ಟಿನಿಂದ ಉಪಯೋಗವಾಗಿದೆ. ಅಂತರ್ಜಲ ಮಟ್ಟ ಏರಿಕೆಯಾದ ಕಾರಣ ಫೆಬ್ರವರಿ ತನಕ ತೋಟಗಳಿಗೆ ನೀರು ಬಿಡಬೇಕಾಗಿಲ್ಲ. ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಜಾಸ್ತಿಯಾದ ಕಾರಣ ಇಲ್ಲಿ ನೀರಿನ ಸಮಸ್ಯೆ ಬಂದಿಲ್ಲ. ಪ್ರತಿ ಬಾರಿ ಈ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕಾರ್ಯ ಕೃಷಿಕರು ಹಾಗೂ ಊರಿನವರು ಸೇರಿ ಮಾಡುತ್ತಿದ್ದೇವೆ. ಕೆರೆ, ನದಿಗಳಿಲ್ಲದೆ ತೋಡಿನ ನೀರು ಶೇಖರಣೆಯೇ ಇಲ್ಲಿ ನೀರಿನ ಸಂಪನ್ಮೂಲ.
 -ಭೋಜ ಸಫಲಿಗ,ಕೃಷಿಕ

-  ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next