Advertisement

ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ

12:01 PM Dec 23, 2017 | |

ಮೂಡಬಿದಿರೆ: ತೆಂಕ ಮಿಜಾರು ಗ್ರಾ.ಪಂ.ನ ಪೂಮಾವರ- ಪೈಯ್ನಾರ ಬೆಟ್ಟು ಪ್ರದೇಶದಲ್ಲಿ 1 ಎಕ್ರೆ ಪ್ರದೇಶದಲ್ಲಿ 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶಾಸಕ ಕೆ.ಅಭಯಚಂದ್ರ ಶುಕ್ರವಾರ ಉದ್ಘಾಟಿಸಿದರು.

Advertisement

ರಸ್ತೆ, ನೀರು ಮೊದಲಾದ ಮೂಲ ಸೌಕರ್ಯಗಳ ಜತೆಗೆ ಸ್ವಚ್ಛತೆ ಕಾಪಾಡಿ ಕೊಂಡು, ಹಿಂದೂ ರುದ್ರಭೂಮಿಗಳ ರಚನೆ ಮತ್ತು ಆಶ್ರಯ ಯೋಜನೆಯ ಸಮರ್ಪಕ ಅನುಷ್ಠಾನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳ ಮೂಲಕ ತೆಂಕಮಿಜಾರು ಪಂಚಾಯತ್‌ ಮಂಗಳೂರು ತಾಲೂಕಿನಲ್ಲಿಯೇ ಅತೀ ವೇಗದಲ್ಲಿ ಬೆಳೆಯುತ್ತಿರುವ ಪಂಚಾಯತ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅಭಿವೃದ್ಧಿಗೆ ಪಂಚಾಯತ್‌ ಅಧ್ಯಕ್ಷರು ಮತ್ತು ಪಿಡಿಒ ಅವರ ಪರಿಶ್ರಮವಿದೆ ಎಂದರು.

ಗ್ರಾಮ ಸ್ವಚ್ಛವಾಗಿಡಿ
ಈಗ ಈ ಪಂಚಾಯತ್‌ ಅನ್ನು ಗ್ರಾಮ ವಿಕಾಸ ಯೋಜನೆಗೆ ಸೇರ್ಪಡೆಗೊಳಿಸಲಾಗಿದ್ದು, ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರೆಯಲಿದೆ. ಗ್ರಾಮವನ್ನು ಸ್ವಚ್ಛವಾಗಿರಿಸಲು ಎಲ್ಲರೂ ಮನಸ್ಸು ಮಾಡಬೇಕು ಎಂದರು. ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೂಳೂರು, ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಗ್ರಾ.ಪಂ. ಸದಸ್ಯ ರಮೇಶ್‌ ಶೆಟ್ಟಿ ಮರಿಯಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಡಗಮಿಜಾರು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಉಮೇಶ್‌ ಶೆಟ್ಟಿ ಉಪಸ್ಥಿತರಿದ್ದರು.

ಅಭಿವೃದ್ಧಿ ಅಧಿಕಾರಿ ಸಾಯೀಶ ಚೌಟ ಸ್ವಾಗತಿಸಿ, ಪ್ರಸ್ತಾವನೆಗೈದರು. ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದು, ಈಗ ನಿರ್ಮಾಣವಾಗಿದೆ. ಈಗಾಗಲೇ 510 ಕುಟುಂಬಗಳಿಂದ ಕಸ ಸಂಗ್ರಹಿಸಲು ನಿರ್ಧರಿಸಲಾಗಿದೆ. ಹಸಿ ಮತ್ತು ಒಣ ಕಸವನ್ನು ಮನೆಯಲ್ಲಿಯೇ ಬೇರ್ಪಡಿಸಿ ವಾಹನಗಳಿಗೆ ನೀಡಬೇಕು ಎಂದರು. ರಾಕೇಶ್‌ ಭಟ್‌ ನಿರೂಪಿಸಿದರು.

ವಿವಿಧ ನೆರವು ವಿತರಣೆ
ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಲ್ಕು ಕುಟುಂಬಗಳ ಮನೆ ದುರಸ್ತಿಗೆ ತಲಾ ರೂ. 25 ಸಾವಿರ ಮತ್ತು 12 ಮಂದಿ ಅಂಗವಿಕಲರಿಗೆ ತಲಾ 5 ಸಾವಿರ ರೂ.ಗಳ ಚೆಕ್‌ಗಳನ್ನು ಹಾಗೂ 100 ಫಲಾನುಭವಿಗಳಿಗೆ ಡಸ್ಟ್‌ ಬಿನ್‌ ಗಳನ್ನು ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next