Advertisement

ಬಸ್‌ ಸ್ಟಾಂಡ್‌ಗಳ ಮೇಲೆ ಸೌರ ವಿದ್ಯುತ್‌ ಉತ್ಪಾದನೆ

12:11 PM Apr 12, 2017 | Team Udayavani |

ಬೆಂಗಳೂರು: ರೈಲ್ವೆ ನಿಲ್ದಾಣಗಳಲ್ಲಿ ಸೋಲಾರ್‌ ಅಳವಡಿಸಿ ವಿದ್ಯುತ್‌ ಉತ್ಪಾದನೆ ಮಾಡುತ್ತಿರುವ ರೀತಿಯಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಬಸ್‌ ನಿಲ್ದಾಣಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದೆ.

Advertisement

ಶಾಂತಿನಗರ, ಮೆಜೆಸ್ಟಿಕ್‌ ಸೇರಿದಂತೆ ನಗರದ 12 ಪ್ರಮುಖ ಬಸ್‌ ನಿಲ್ದಾಣಗಳ ಮೇಲ್ಛಾವಣಿಯಲ್ಲಿ ಲಭ್ಯವಿರುವ ಜಾಗದಲ್ಲಿ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿ, ವಿದ್ಯುತ್‌ ಉತ್ಪಾದನೆ ಮಾಡಲು ಬಿಎಂಟಿಸಿ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಅಂದುಕೊಂಡಂತೆ ಎಲ್ಲವೂ ನಡೆಧಿದರೆ ಮುಂದಿನ ಆರೆಂಟು ತಿಂಗಳಲ್ಲಿ ಬಸ್‌ ನಿಲ್ದಾಣಗಳ ಮೇಲೆ ವಿದ್ಯುತ್‌ ಉತ್ಪಾದನೆ ಶುರುವಾಗಲಿದೆ. 

ಸೋಲಾರ್‌ ವಿದ್ಯುತ್‌ ಪ್ಯಾನೆಲ್‌ ಅಳವಡಿಕೆಗೆ ಗುರುತಿಸಲಾದ ನಾಲ್ಕು ಟಿಟಿಎಂಸಿ ಸೇರಿ 12 ನಿಲ್ದಾಣಗಳ ಮೇಲ್ಚಾವಣಿಯಲ್ಲಿ 17,718.05 ಚದರ ಮೀಟರ್‌ ಜಾಗ ಲಭ್ಯವಿದೆ. ಆಯಾ ನಿಲ್ದಾಣಗಳಲ್ಲಿರುವ ಹೋಟೆಲ್‌, ಮಾಲ್‌, ಸರ್ಕಾರಿ ಅಥವಾ ಖಾಸಗಿ ಕಚೇರಿಗಳು, ಸಂಸ್ಥೆಯ ಕಂಟ್ರೋಲ್‌ ರೂಂ, ಟಿವಿ, ಧ್ವನಿವರ್ಧಕ ಮತ್ತಿತರ ಚಟುವಟಿಕೆಗಳಿಗಾಗಿ ತಿಂಗಳಿಗೆ ಅಂದಾಜು 5,500 ಕಿ.ವಾ. ವಿದ್ಯುತ್‌ ಬಳಸಲಾಗುತ್ತಿದ್ದು, 80 ಲಕ್ಷ ರೂ. ವಿದ್ಯುತ್‌ ಬಿಲ್‌ ಬರುತ್ತಿದೆ. ಈಗ ಸೋಲಾರ್‌ ಮೂಲಕ ಆಯಾ ನಿಲ್ದಾಣಗಳಲ್ಲೇ ಅಗತ್ಯಧಿವಿರುವ  ಅಷ್ಟೇ ಪ್ರಮಾಣದ ವಿದ್ಯುತ್‌ ಉತ್ಪಾದನೆ ಮಾಡಿ, ಬಳಸಲು ಬಿಎಂಟಿಸಿ ಯೋಜನೆ ರೂಪಿಸಿದೆ. 

ದೇಶದ ಮೊದಲ ಸಂಸ್ಥೆ?: ಹೊಸ ಪ್ರಯತ್ನದಿಂದ ದೇಶದ ರಸ್ತೆ ಸಾರಿಗೆ ಸೇವಾ ಸಂಸ್ಥೆಗಳಲ್ಲಿ ಬಸ್‌ ನಿಲ್ದಾಣಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಮುಂದಾಗಿರುವ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೂ ಬಿಎಂಟಿಸಿ ಪಾತ್ರವಾಗಲಿದೆ. ಈ ಸೋಲಾರ್‌ ಪ್ಯಾನೆಲ್‌ಗ‌ಳ ಅಳವಡಿಕೆಯಿಂದ ಎಷ್ಟು ವಿದ್ಯುತ್‌ ಉತ್ಪಾದನೆ ಆಗಬಹುದು ಎಂದು ಇನ್ನೂ ಅಂದಾಜಿಸಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಈ ಯೋಜನೆಯಲ್ಲಿ ಬಸ್‌ ನಿಲ್ದಾಣಗಳ ಮೇಲೆ ಖಾಸಗಿ ಏಜೆನ್ಸಿಯೊಂದು ಲಕ್ಷಾಂತರ ರೂ. ಹೂಡಿ ಸೋಲಾರ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಲಿದೆ. ಅದರಿಂದ ಉತ್ಪಾದನೆಯಾದ ವಿದ್ಯುತ್‌ ಅನ್ನು ಸ್ವತಃ ಬಿಎಂಟಿಸಿ ಪ್ರತಿ ಯೂನಿಟ್‌ಗೆ ಇಂತಿಷ್ಟು ಹಣ ನಿಗದಿಪಡಿಸಿ ಖರೀದಿಸಲಿದೆ. ಈ ಸಂಬಂಧ 25 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಧಿಗುಧಿವುದು. ಪ್ಯಾನೆಲ್‌ ಅಳವಡಿಕೆ, ನಿರ್ವಹಣೆ, ವಿದ್ಯುತ್‌ ಪೂರೈಕೆ ಸೇರಿದಂತೆ ಎಲ್ಲವೂ ಏಜೆನ್ಸಿ ಜವಾಬ್ದಾರಿ ಆಗಿರುತ್ತದೆ. ಬಿಎಂಟಿಸಿಯದ್ದು ಶೂನ್ಯ ಬಂಡವಾಳ.  

Advertisement

ಸದ್ಯ 11ರೂ.ಗೆ ಯೂನಿಟ್‌ ಖರೀದಿ: ಪ್ರಸ್ತುತ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ)ಯಿಂದ ಈ ನಿಲ್ದಾಣಗಳಿಗೆ ವಿದ್ಯುತ್‌ ಪೂರೈಕೆ ಆಗುತ್ತಿದೆ. ಯೂನಿಟ್‌ಗೆ ಸರಾಸರಿ ಸುಮಾರು 11 ರೂ. ನಿಗದಿಪಡಿಸಲಾಗಿದೆ. ಇನ್ನು ಪ್ರತಿ ವರ್ಷ ಈ ದರ ಏರಿಕೆ ಆಗುತ್ತಲೇ ಇರುತ್ತದೆ. ಮಂಗಳವಾರವಷ್ಟೇ ವಿದ್ಯುತ್‌ ದರ ಪರಿಷ್ಕರಣೆ ಆಗಿರುವುದನ್ನು ಇಲ್ಲಿ ಸ್ಮರಿಸಬಹುದು. ಈಗ ನಿಲ್ದಾಣಗಳು, ಟಿಟಿಎಂಸಿಗಳಲ್ಲಿ ಬಾಡಿಗೆ ಪಡೆದಿರುವ ವಾಣಿಜ್ಯ ಮಳಿಗೆಗಳು ಬಳಸುವ ವಿದ್ಯುತ್‌ಗೆ ಪ್ರತಿಯಾಗಿ ಬಿಎಂಟಿಸಿ ಬಿಲ್‌ ಸಂಗ್ರಹ ಮಾಡಿ, ಪ್ರತಿ ತಿಂಗಳು ಬೆಸ್ಕಾಂಗೆ ಪಾವತಿಸುತ್ತಿದೆ. 

ಸೋಲಾರ್‌ ವಿದ್ಯುತ್‌ ಉತ್ಪಾದನೆ ಯೋಜನೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸುವವರಿಗೆ ಗುತ್ತಿಗೆ ನೀಡಲಾಗುವುದು. ಸದ್ಯ ನಿಗಮವು 7 ರೂ. ಯೂನಿಟ್‌ ವಿದ್ಯುತ್‌ ನಿರೀಕ್ಷಿಸಿದೆ. ಇದಕ್ಕಿಂತ ಕಡಿಮೆ ದರದಲ್ಲಿ ಪೂರೈಸಲು ಮುಂದೆ ಬಂದವರಿಗೆ ಗುತ್ತಿಗೆ ಕೊಡಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಮೆಜೆಸ್ಟಿಕ್‌, ಶಾಂತಿನಗರ ಸೇರಿದಂತೆ ನಗರದ ವಿವಿಧ ನಿಲ್ದಾಣಗಳ ಮೇಲ್ಛಾವಣಿಯಲ್ಲಿ ಸಾಕಷ್ಟು ಜಾಗ ಲಭ್ಯವಿದೆ. ಅಲ್ಲಿ ಬಿಎಂಟಿಸಿ ಸೌರವಿದ್ಯುತ್‌ ಉತ್ಪಾದನೆಗೆ ಉದ್ದೇಶಿಸಿದೆ. ಈಗಾಗಲೇ ಟೆಂಡರ್‌ ಕೂಡ ಕರೆಯಲಾಗಿದೆ. ಎಲ್ಲ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ಯೋಜನೆಗೆ ಚಾಲನೆ ದೊರೆಯಲಿದೆ. 
-ಡಾ.ಏಕರೂಪ್‌ ಕೌರ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next