Advertisement
2005ರ ನ. 22-23ರಂದು ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಬಸ್‌ನಲ್ಲಿ ತೆರಳುತ್ತಿದ್ದ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿಯನ್ನು ಮಾರ್ಗ ಮಧ್ಯೆಯೇ ವಶಕ್ಕೆ ಪಡೆದಿದ್ದ ಪೊಲೀಸರ ತಂಡವೊಂದು ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿತ್ತು ಎಂಬ ಆರೋಪ ಹೊರಿಸಲಾಗಿತ್ತು. ಅದಾಗಿ ಮೂರು ದಿನಗಳ ನಂತರ, ಕೌಸರ್ ಬೀ ಅವರು ಗುಜರಾತ್‌ನ ಫಾರ್ಮ್ಹೌಸ್‌ನಲ್ಲಿ ಹತ್ಯೆ ಯಾಗಿದ್ದರು. 2006ರ ಡಿ. 27ರಂದು ಸೊಹ್ರಾಬುದ್ದೀನ್‌ನ ಸಹಚರ ಪ್ರಜಾಪತಿಯನ್ನು ಗುಜರಾತ್-ರಾಜಸ್ಥಾನ ಗಡಿಭಾಗದಲ್ಲಿ ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಎಂಬ ಆರೋಪಗಳೂ ಕೇಳಿ ಬಂದಿದ್ದವು.
ಸಿಬಿಐ ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಸೊಹ್ರಾಬುದ್ದೀನ್ ಎನ್‌ಕೌಂಟರ್ ನಕಲಿಯಲ್ಲ ಎಂದು ನಮ್ಮ ಪಕ್ಷ ಮೊದಲಿನಿಂದಲೂ ಹೇಳುತ್ತಾ ಬಂದಿತ್ತು. ಆದರೆ, ಇದನ್ನು ಕಾಂಗ್ರೆಸ್ ರಾಜಕೀಯಗೊಳಿಸಿತ್ತು. ಸಿಬಿಐನ ಇಂದಿನ ತೀರ್ಪು ಕಾಂಗ್ರೆಸ್‌ನ ಅಸಲಿತನವನ್ನು ಬಯಲುಗೊಳಿಸಿದೆ ಎಂದಿದ್ದಾರೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಮಾತನಾಡಿ, 2007ರ ಗುಜರಾತ್ ಚುನಾವಣೆ ವೇಳೆ ಈ ಪ್ರಕರಣ ಉಲ್ಲೇಖೀಸಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮೋದಿಯವರನ್ನು ಸಾವಿನ ದಲ್ಲಾಳಿ ಎಂದು ಬಣ್ಣಿಸಿ ಮತ ಸೆಳೆಯಲು ಯತ್ನಿಸಿದ್ದರು. ಈಗ ನ್ಯಾಯಾಲಯದ ತೀರ್ಪಿನಿಂದಾಗಿ ಇದು ರಾಜಕೀಯ ಪ್ರೇರಿತ ಪ್ರಕರಣ ಎಂಬುದು ಸಾಬೀತಾಗಿದೆ ಎಂದಿದ್ದಾರೆ.