Advertisement

ಪ್ರಗತಿಗೆ ಸಮಾಜವಾದಿ ವ್ಯವಸ್ಥೆ ಅನಿವಾರ್ಯ

03:13 PM Feb 21, 2017 | |

ಶಹಾಬಾದ: ರಷ್ಯಾ ದೇಶ ಸಾಧನೆ ಮಾಡಿದ್ದನ್ನು ಭಾರತ ಸಾಧಿಸಬೇಕಾದರೆ ಸಮಾಜವಾದಿ ವ್ಯವಸ್ಥೆ ಅನಿವಾರ್ಯ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಹೆಚ್‌.ವಿ. ದಿವಾಕರ್‌ ಹೇಳಿದರು. ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್‌ ಹಾಗೂ ಪ್ರೇರಣಾ ಸಾಂಸ್ಕೃತಿಕ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಷ್ಯಾದ ನವೆಂಬರ್‌ ಮಹಾಕ್ರಾಂತಿಗೆ ಸಮರ್ಪಿತ ಶಹಾಬಾದನ 7ನೇ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. 

Advertisement

ಸಿನಿಮಾ, ಸಾಹಿತ್ಯ, ಟಿವಿ ಹಾಗೂ ಇತರೆ ಮಾಧ್ಯಮಗಳಿಂದ ಹರಡುತ್ತಿರುವ ಅಶ್ಲೀಲ, ಕ್ರೌರ್ಯ, ಅನೈತಿಕತೆಗಳ ವಿರುದ್ಧ ಹೋರಾಡಲು ಹೊಸ ಸಂಸ್ಕೃತಿ, ಕಲೆ, ಸಾಹಿತ್ಯದ ಅಗತ್ಯತೆ ಇದೆ ಎಂದು ಹೇಳಿದರು. ಸಮಾಜವಾದಿ ವ್ಯವಸ್ಥೆ ಇರುವವರೆಗೂ ರಷ್ಯಾದಲ್ಲಿ ನಿರುದ್ಯೋಗ, ಬಡತನ, ಅನಕ್ಷರತೆ, ಬಾಲ ಕಾರ್ಮಿಕರ ಪದ್ಧತಿಯಂತಹ ಅನಿಷ್ಠ ಕುರುಹುಗಳು ಸಿಗಲಿಲ್ಲ.  

ಬದಲಿಗೆ ಅಲ್ಲಿ ಎಲ್ಲರೂ ಸಹಬಾಳ್ವೆಯನ್ನು ಸಮಾನವಾಗಿ ನಡೆಸುತ್ತಿದ್ದರು. ಅದರಿಂದಾಗಿ ಆ ದೇಶ ಕೆಲವೇ ಕೆಲವು ವರ್ಷಗಳಲ್ಲಿ ಇಡೀ ಪ್ರಪಂಚವನ್ನೇ ಬೆರಗುಗೊಳಿಸುವಂತೆ  ಸಾಧಿಸಿ ತೋರಿಸಿತು ಎಂದು ಹೇಳಿದರು. ಮನಸ್ಸಿನಲ್ಲಿ ಸದಭಿರುಚಿ ಹಾಗೂ ಕೊಳೆತ ವ್ಯವಸ್ಥೆ ವಿರುದ್ಧ ಹೋರಾಡುವ ಮನೋಭಾವ ಬೆಳೆಸುವಂತಹ ಕಲೆ, ಸಾಹಿತ್ಯ, ನಾಟಕ,  ಹಾಡು, ಕವನಗಳು ಸಮಾಜದಲ್ಲಿ ಬರಬೇಕು ಎಂದು ಹೇಳಿದರು. 

ಎಸ್‌.ಎಸ್‌. ಮರಗೋಳ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಸೂರ್ಯಕಾಂತ ಬಿ.  ಬಿರಾಜದಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಕೂಡಲಸಂಗಮ ಶಿಕ್ಷಣ ಸಂಸ್ಥೆ ಪ್ರಾಧ್ಯಾಪಕ ಪೀರಪಾಶಾ ಎಂ. ಹೊನಗುಂಟಿಕರ್‌, ಎಐಎಂಎಸ್‌ ಎಸ್‌ ಅಧ್ಯಕ್ಷ ಗುಂಡಮ್ಮ ಮಡಿವಾಳ ಮಾತನಾಡಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ನಿಂಗಣ್ಣ ಜಂಬಗಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಸಮಾರಂಭದ ನಂತರ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next