ಶಹಾಬಾದ: ಪ್ರಥಮವಾಗಿ ಮಾರ್ಕ್ಸ್ವಾದ ತತ್ವಶಾಸ್ತ್ರದ ಆಧಾರದ ಮೇಲೆ ಸಮಾಜವಾದಿ ಸಮಾಜ ನಿರ್ಮಿಸಿದ ಮಹಾನ್ ನಾಯಕ ವಿ. ಐ. ಲೆನಿನ್ ಎಂದು ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಎಸ್. ಇಬ್ರಾಹಿಂಪುರ ಹೇಳಿದರು.
ಎಸ್‌ಯುಸಿಐ (ಸಿ) ಪಕ್ಷದ ಸ್ಥಳೀಯ ಸಮಿತಿಯಿಂದ ಆಯೋಜಿಸಲಾಗಿದ್ದ ರಷ್ಯಾದ ಸಮಾಜವಾದಿ ಕ್ರಾಂತಿಯ ಶಿಲ್ಪಿಯಾದ ಲೆನಿನ್‌ರ 98ನೇ ಸ್ಮಾರಕ ಸಭೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಯುರೋಪಿನ ರೋಗಗ್ರಸ್ಥ ರಾಷ್ಟ್ರವಾದ ರಷ್ಯಾ ಕಾರ್ಲ್ ಮಾರ್ಕ್ಸ್ ವಿಚಾರಧಾರೆ ಆಧಾರದ ಮೇಲೆ ಕ್ರಾಂತಿ ನಡೆಸಿ ನೂತನ ಸಮಾಜಕ್ಕೆ ನಾಂದಿ ಹಾಡಿದರು. ಬಡತನ, ನಿರುದ್ಯೋಗ, ಹಸಿವು, ಭಿಕ್ಷಾಟನೆ, ಮಹಿಳೆಯರ ಮೇಲಿನ ದೌರ್ಜನ್ಯದಂತ ಸಾಮಾಜಿಕ ಸಮಸ್ಯಗಳಿಲ್ಲದ ಮಾನವನಿಂದ ಮಾನವ ಶೋಷಣೆ ರಹಿತ ಸಮಾಜವನ್ನು ಕಟ್ಟಿದರು ಎಂದು ಹೇಳಿದರು.
ಎಸ್‌ಯುಸಿಐ (ಸಿ) ಪಕ್ಷದ ಸ್ಥಳೀಯ ಕಾರ್ಯದರ್ಶಿ ಗಣಪತರಾವ್ ಕೆ.ಮಾನೆ ಮಾತನಾಡಿ, ಭಾರತದಲ್ಲಿಯೂ ಮಾರ್ಕ್ಸ್ ವಾದದ ಆಧಾರದ ಮೇಲೆ ದುಡಿಯುವ ವರ್ಗದ ವಿಮುಕ್ತಿಗಾಗಿ ಬಂಡವಾಳ ಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಕೈಗೊಳ್ಳಲು ಸಜ್ಜಾಗಬೇಕು ಎಂದು ಹೇಳಿದರು.
ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾದ ರಾಘವೇಂದ್ರ ಎಂ.ಜಿ ಕಾರ್ಯಕ್ರಮ ನಡೆಸಿಕೊಟ್ಟರು. ಪಕ್ಷದ ಸದಸ್ಯರಾದ ಜಗನ್ನಾಥ ಎಸ್.ಎಚ್. ರಾಜೇಂದ್ರ ಅತನೂರು, ಗುಂಡಮ್ಮಾ ಮಡಿವಾಳ, ಸಿದ್ದು ಚೌಧರಿ, ತುಳಜಾರಾಮ ಎನ್.ಕೆ. ನೀಲಕಂಠ ಹುಲಿ, ತಿಮ್ಮಯ್ಯ ಬಿ. ಮಾನೆ, ರಘು ಪವರ್, ಶ್ರೀನಿವಾಸ ರಮೇಶ ಡಿ. ಹಾಗೂ ಕಾರ್ಯಕರ್ತರು ಇದ್ದರು.