Advertisement

ಸೀರೆ ನೇಯುವ ನೀರೆಯ ನಗು

12:30 AM Mar 13, 2019 | |

ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು ಪುಟ್ಟ ಕೂಸಿನಂತೆ ಕೈಯಲ್ಲಿ ಹಿಡಿಯುವಾಗ, ಆಗುವ ಪುಳಕವೇ ಬೇರೆ…   

Advertisement

ಆಧುನಿಕತೆಯ ಅಬ್ಬರದಿಂದ ನಮ್ಮೆಲ್ಲರ ಜೀವನಶೈಲಿ ಬದಲಾಗಿದೆ. ಉಡುಗೆ- ತೊಡುಗೆಗಳಲ್ಲಿ ಹೊಸತನ ಕಂಡಿದೆ. ಆದರೂ, ಇನ್ನೂ ಕೆಲವೆಡೆ ನೇಕಾರಿಕೆಯಂಥ ಹಳೆಯ ಕಸುಬು ಉಸಿರಾಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಬಹುತೇಕ ಮಹಿಳೆಯರು ನೇಕಾರಿಕೆಯನ್ನೇ ನಂಬಿ, ಬದುಕನ್ನು ನೇಯುತ್ತಿದ್ದಾರೆ. 

ಬೆಳಗ್ಗೆ ಗಂಡಂದಿರು ಹೊಲ, ಗದ್ದೆ ಕೆಲಸಕ್ಕೆ ಹೋದರೆ, ಹೆಂಡತಿಯರು ಮನೆಗೆಲಸ ಮುಗಿಸಿ, ಕಣಿಕೆ ಸುತ್ತಿ ಬಟ್ಟೆ ನೇಯಲು ಮುಂದಾಗುತ್ತಾರೆ. ಕೈಮಗ್ಗ ಇದ್ದರೆ ದಿನಕ್ಕೆ 2 ಸೀರೆ ನೇಯುವ ಮಹಿಳೆಯರು, ಪವರ್‌ಲೂಮ್‌ ಮಗ್ಗದಿಂದ 5 ಸೀರೆ ನೇಯಬಲ್ಲರು. ಸೀರೆಯನ್ನಷ್ಟೇ ಅಲ್ಲ, ಶಾಲಾ ಸಮವಸ್ತ್ರ, ಪಂಚೆ, ರೇಷ್ಮೆ, ಜರಿ, ಕಾಟನ್‌, ಇಳಕಲ್‌, ಸ್ಪನ್‌ ಬಟ್ಟೆ, ಕಚ್ಚಾ ಕಾಟನ್‌ ಹೀಗೆ ವಿವಿಧ ಬಟ್ಟೆಗಳಿಂದ ವಸ್ತ್ರ ತಯಾರಿಸುತ್ತಾರೆ. 
ಕೈಮಗ್ಗಗಳ ಕಾರ್ಯವೈಖರಿ ನಿಧಾನವಾದ್ದರಿಂದ ಮಹಿಳೆಯರು ವಿದ್ಯುತ್‌ ಚಾಲಿತ ಪವರ್‌ ಲೂಮ್‌ ಮಗ್ಗಗಳನ್ನು ಬಳಸುತ್ತಿದ್ದಾರೆ. ಆದರೆ, ಚಿಮ್ಮಡ ಗ್ರಾಮದಲ್ಲಿ ಲೋಡ್‌ ಶೆಡ್ಡಿಂಗ್‌ನಿಂದಾಗಿ ಹಗಲು 2-3 ಗಂಟೆ ವಿದ್ಯುತ್‌ ಇರುವುದಿಲ್ಲ. ಇದರಿಂದಾಗಿ ನೇಯ್ಗೆಗೆ ಅಡಚಣೆಯಾಗುತ್ತಿದೆ ಅನ್ನೋದು ಇವರ ಅಳಲು. ಒಂದು ಸೀರೆ ನೇಯ್ದರೆ ಸಿಗುವುದು 50-100 ರೂಪಾಯಿ ಮಾತ್ರ. ಆದರೆ, ಹೆಚ್ಚಿನ ಲಾಭ ಮಧ್ಯವರ್ತಿಗಳ ಕೈ ಸೇರುತ್ತಿದೆ. 
ಪರಿಶ್ರಮಕ್ಕೆ ತಕ್ಕ ಫ‌ಲ ಸಿಗದೇ ಇರುವ ನೋವು, ಇವರನ್ನು ಸೋಮಾರಿಗಳನ್ನಾಗಿಸಿಲ್ಲ. ಬದಲಿಗೆ, ಹೆಚ್ಚೆಚ್ಚು ನೇಯುವ ಛಲವನ್ನು ತುಂಬಿದೆ. ಸೊಸೆಯಂದಿರು ನೇಯಲು ಕುಳಿತರೆ, ವಯಸ್ಸಾದ ಅತ್ತೆಯರು ಮಡಿಕೆ (ಲಡಿ) ತೋಡುತ್ತ, ಜರಿ ಬಿಡಿಸುತ್ತಾ ಅವರಿಗೆ ನೆರವಾಗುತ್ತಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾ, ಮನೆಗೆಲಸ ಮಾಡುತ್ತಾ, ಯಾವ ಉದ್ಯೋಗಸ್ಥ ಮಹಿಳೆಯರಿಗಿಂತ ಕಮ್ಮಿಯಿಲ್ಲ ಎಂದು ನಿರೂಪಿಸಿದ್ದಾರೆ. 

ನಾವು ಎಷ್ಟೇ ದುಡಿದರೂ, ಸಿಗೋದು ಸ್ವಲ್ಪ ಹಣ ಮಾತ್ರ. ಟೆಂಡರ್‌ ಕೊಟ್ಟವರಿಗೆ ಹೆಚ್ಚು ಲಾಭ ಸಿಗುತ್ತದೆ. ಕೆಲವು ಸಲ ತುಂಬಾ ಸಿಟ್ಟು ಬರುತ್ತೆ. ಆದ್ರೆ, ಏನು ಮಾಡೋಕಾಗುತ್ತೆ ಹೇಳಿ? ಇನ್ನು ಈ ಲೋಡ್‌ಶೆಡ್ಡಿಂಗ್‌ನಿಂದ ಕೆಲಸ ಅರ್ಧಕ್ಕೆ ನಿಂತು, ದುಡಿಮೆಗೆ ದೊಡ್ಡ ಪೆಟ್ಟು ಬೀಳುತ್ತದೆ. 
 ಗೀತಾ ಪಂಕಿ, ನೇಕಾರ ಮಹಿಳೆ

ವಿದ್ಯುತ್ತನ್ನೇ ನಂಬಿಕೊಂಡಿರುವ ನಮ್ಮ ಕೆಲಸಕ್ಕೆ ಲೋಡ್‌ಶೆಡ್ಡಿಂಗ್‌ನಿಂದ ತುಂಬಾ ತೊಂದರೆಯಾಗುತ್ತಿದೆ. ಎಷ್ಟೇ ಕಷ್ಟಪಟ್ಟರೂ ದಿನದಲ್ಲಿ 2-4 ಸೀರೆಗಿಂತ ಹೆಚ್ಚು ನೇಯಲು ಸಾಧ್ಯವೇ ಇಲ್ಲ.
ಬಸಮ್ಮ ಯಂಕಂಚಿ, ನೇಕಾರ ಮಹಿಳೆ

Advertisement

– ಐಶ್ವರ್ಯ ಬ. ಚಿಮ್ಮಲಗಿ

Advertisement

Udayavani is now on Telegram. Click here to join our channel and stay updated with the latest news.

Next