Advertisement

“ಮತಾಂತರದಲ್ಲಿ ಪಾತ್ರವಿಲ್ಲ’ಘೋಷಣೆ ಇನ್ನು ಎನ್‌ಜಿಒ ಸದಸ್ಯರಿಗೆ ಕಡ್ಡಾಯ

08:44 AM Sep 19, 2019 | Team Udayavani |

ನವದೆಹಲಿ: ಇನ್ನು ಮುಂದೆ ವಿದೇಶಿ ದೇಣಿಗೆ ಪಡೆಯುವಂಥ ಎನ್‌ಜಿಒಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಪ್ರಮುಖ ಸಿಬ್ಬಂದಿ, ತಾವು ಯಾವುದೇ ಧಾರ್ಮಿಕ ಮತಾಂತರ ಪ್ರಕರಣಗಳ ಆರೋಪ ಎದುರಿಸುತ್ತಿಲ್ಲ ಎಂದು ಸರ್ಕಾರದ ಮುಂದೆ ಘೋಷಿಸಿಕೊಳ್ಳುವುದು ಕಡ್ಡಾಯ.

Advertisement

ಅಷ್ಟೇ ಅಲ್ಲ, ಕೋಮುಗಲಭೆ ಸೃಷ್ಟಿಸಿರುವ ಅಥವಾ ಸಮಾಜದ ಶಾಂತಿಗೆ ಭಂಗ ತಂದಂಥ ಆರೋಪಗಳೂ ನಮ್ಮ ಮೇಲಿಲ್ಲ, ಅಂಥ ಪ್ರಕರಣಗಳಲ್ಲಿ ವಿಚಾರಣೆಯನ್ನೂ ಎದುರಿಸಿಲ್ಲ ಎಂದೂ ಅವರು ಪ್ರಮಾಣಪತ್ರ ಸಲ್ಲಿಸಬೇಕು. ಎನ್‌ಜಿಒಗಳ ವಿದೇಶಿ ದೇಣಿಗೆ ನಿಯಮಗಳಿಗೆ ಸಂಬಂಧಿಸಿದ ವಿದೇಶಿ ದೇಣಿಗೆ (ನಿಬಂಧನೆ)ನಿಯಮಗಳು, 2011ಕ್ಕೆ ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದ್ದು, ಅದರಂತೆ ಈ ಮೇಲಿನ ನಿಯಮಗಳು ಅನ್ವಯವಾಗಲಿದೆ. ಈ ಹಿಂದಿನ ನಿಯಮದ ಪ್ರಕಾರ, ವಿದೇಶಿ ದೇಣಿಗೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವವರು ಅಥವಾ ಆ ಎನ್‌ಜಿಒದ ನಿರ್ದೇಶಕರು ಮಾತ್ರವೇ ಇಂಥ ಘೋಷಣೆ ಮಾಡಬೇಕಿತ್ತು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು 5 ವರ್ಷಗಳಿಂದಲೂ ವಿದೇಶಿ ದೇಣಿಗೆ ಪಡೆಯುವ ಎನ್‌ಜಿಒಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುತ್ತಾ ಬಂದಿದೆ. ದೇಣಿಗೆ ನಿಯಮ ಉಲ್ಲಂ ಸಿರುವಂಥ ಸುಮಾರು 18 ಸಾವಿರ ಎನ್‌ಜಿಒಗಳಿಗೆ, ವಿದೇಶಿ ದೇಣಿಗೆ ಅನುಮತಿಯನ್ನೂ ಸರ್ಕಾರ ವಾಪಸ್‌ ಪಡೆದಿದೆ.

ಹೊಸ ನಿಯಮದಲ್ಲೇನಿದೆ?
ಒಂದು ಲಕ್ಷ ರೂ.ವರೆಗಿನ ಮೌಲ್ಯದ ವೈಯಕ್ತಿಕ ಉಡುಗೊರೆ ಪಡೆಯುವಂಥ ವ್ಯಕ್ತಿಗಳು ಅದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕಾದ ಅಗತ್ಯವಿಲ್ಲ. ಹಿಂದೆ ಇದಕ್ಕೆ 25 ಸಾವಿರ ರೂ.ಗಳ ಮಿತಿ ಇತ್ತು.

ಎನ್‌ಜಿಒ ಸದಸ್ಯರು ಮತ್ತು ಪದಾಧಿಕಾರಿಗಳು ಕಡ್ಡಾಯವಾಗಿ ತಾವು ಮತಾಂತರ, ಕೋಮುಪ್ರಚೋದನೆಯಂಥ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂಬುದನ್ನು ದೃಢಪಡಿಸುವಂಥ ದಾಖಲೆಗಳನ್ನು ಗೃಹ ಇಲಾಖೆಗೆ ಸಲ್ಲಿಸಬೇಕು.

ವಿದೇಶಿ ದೇಣಿಗೆಯನ್ನು ಬೇರೆಡೆಗೆ ವರ್ಗಾಯಿಸುವ, ದೇಶದ್ರೋಹಕ್ಕೆ ಪ್ರಚಾರ ಕೊಡುವ ಅಥವಾ ಹಿಂಸೆಗೆ ಪ್ರಚೋದಿಸುವಂಥ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ಸಂಸ್ಥೆಯ ಎಲ್ಲ ಸದಸ್ಯರೂ ಅಫಿಡವಿಟ್‌ ಸಲ್ಲಿಸಬೇಕು.

Advertisement

ವಿದೇಶ ಪ್ರವಾಸದ ವೇಳೆ ಎನ್‌ಜಿಒ ಸದಸ್ಯನಿಗೆ ಅನಾರೋಗ್ಯ ಸಮಸ್ಯೆ ಉಂಟಾದರೆ, ಆಸ್ಪತ್ರೆಗೆ ದಾಖಲಾದ ವಿವರವನ್ನು ಒಂದು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next