ಹುಬ್ಬಳ್ಳಿ: ತುಷ್ಟೀಕರಣದ ರಾಜಕೀಯ ದೇಶವನ್ನು ಒಡೆದರೆ, ಪುಷ್ಟೀಕರಣದ ರಾಜಕೀಯ ದೇಶವನ್ನು ಜೋಡಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಹೇಳಿದರು. ಗೋಕುಲ ರಸ್ತೆಯ ಗೋಕುಲ ಗಾರ್ಡನ್ ನಲ್ಲಿ ಬಿಜೆಪಿ ಧಾರವಾಡ ಲೋಕಸಭಾ ಕ್ಷೇತ್ರದ ವತಿಯಿಂದ ಗುರುವಾರ ಆಯೋಜಿಸಿದ್ದ “ಸಂಕಲ್ಪ್ ಸೇ ಸಿದ್ಧಿ’ ಆಂದೋಲನದ ಉದ್ಘಾಟನೆ ಹಾಗೂ ತಿರಂಗಾ ಯಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು.
ಪುಷ್ಟೀಕರಣದ ರಾಜಕೀಯದ ಉದ್ದೇಶಕ್ಕಾಗಿಯೇ ಜನಸಂಘ ಆರಂಭಗೊಂಡಿತು. ಶಾಮಪ್ರಸಾದ ಮುಖರ್ಜಿ ಸದುದ್ದೇಶದೊಂದಿಗೆ ಪಕ್ಷ ಆರಂಭಗೊಂಡಿತು. ಯಾವುದೇ ವ್ಯಕ್ತಿ ಕೇಂದ್ರಿತ ಪಕ್ಷ ಇದಾಗಿರಲಿಲ್ಲ. ಪ್ರಧಾನಿಯಾಗುವ ಉದ್ದೇಶದಿಂದ, ರಾಜಕೀಯದ ಲಾಲಸೆಯಿಂದ ಹುಟ್ಟಿದ ಪಕ್ಷ ಇದಾಗಿರಲಿಲ್ಲ ಎಂದರು.
ರಾಜಕೀಯ ಘೋಷಣೆಗಳಿಗೂ ಮಂತ್ರಗಳಿಗೂ ಅಜಗಜಾಂತರವಿದೆ. ಗರೀಬಿ ಹಟಾವೊ ಎಂಬುದು ರಾಜಕೀಯ ಘೋಷಣೆ. ಆದರೆ ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂಬುದು ಮಂತ್ರಗಳು. ರಾಜಕೀಯ ಘೋಷಣೆಗಳನ್ನು ಜನರು ಬೇಗ ಮರೆತು ಬಿಡುತ್ತಾರೆ. ಆದರೆ ಒಂದೇ ಮಾತರಂ ಎಂದಾಗ ಈಗಲೂ ರೋಮಾಂಚನವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮೂರು ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 2020ರ ವೇಳೆಗೆ ಹುಬ್ಬಳ್ಳಿ- ಬೆಂಗಳೂರು ಮಧ್ಯೆ ರೈಲ್ವೆ ಡಬ್ಲಿಂಗ್ ಮಾಡುವ ಯೋಜನೆಯಿದೆ. ನಂತರ ಕೇವಲ 5 ಗಂಟೆಗಳಲ್ಲಿ ಹೈ ಸ್ಪೀಡ್ ರೈಲುಗಳ ಮೂಲಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪ್ರಯಾಣಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ “ವರುಷ ಮೂರು ಸಾಧನೆ ನೂರಾರು’ ಕಿರು ಹೊತ್ತಿಗೆಯನ್ನು ಸು.ರಾಮಣ್ಣ ಲೋಕಾರ್ಪಣೆ ಮಾಡಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ, ಶಾಸಕರಾದ ಅರವಿಂದ ಬೆಲ್ಲದ, ಬಸವರಾಜ ಬೊಮ್ಮಾಯಿ, ಪ್ರದೀಪ ಶೆಟ್ಟರ, ಮುಖಂಡರಾದ ಮಾ. ನಾಗರಾಜ, ಈರಣ್ಣ ಜಡಿ, ಮಹಾಪೌರ ಡಿ.ಕೆ. ಚವ್ಹಾಣ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಇದ್ದರು.