Advertisement

ರೈತರ ನಿದ್ದೆಗೆಡಿಸಿದ ಸೈನಿಕ

12:11 PM Oct 11, 2017 | |

ಹುಬ್ಬಳ್ಳಿ: ಸುಮಾರು 29 ವರ್ಷಗಳ ನಂತರ ಹೊಲಗಳಿಗೆ ಸಾಮೂಹಿಕ ರೀತಿಯಲ್ಲಿ ಲಗ್ಗೆಯಿಟ್ಟಿರುವ ಸೈನಿಕ ಹುಳು ಅಥವಾ ಲದ್ದಿ ಹುಳುಗಳು ಉತ್ತರ ಹಾಗೂ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿವೆ. ಹುಳುಗಳ ನಿಯಂತ್ರಣಕ್ಕೆ ವಿಷಪಾಷಾಣ, ಕ್ರಿಮಿನಾಶಗಳ ಬಳಕೆ ಕುರಿತಾಗಿ ಕೀಟ ತಜ್ಞರು ಸಲಹೆ ನೀಡಿದ್ದಾರೆ. 

Advertisement

ಉತ್ತರ ಕರ್ನಾಟಕದ ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ಬಳ್ಳಾರಿ, ಉತ್ತರ ಕನ್ನಡ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸೈನಿಕ ಹುಳುಗಳು ಸಾಮೂಹಿಕ ರೀತಿ ಬೆಳೆಗಳಿಗೆ ಲಗ್ಗೆ ಇರಿಸಿವೆ. ಎರಡ್ಮೂರು ವರ್ಷಗಳ ಬರ, ಈ ಬಾರಿಯ ಮುಂಗಾರು ವೈಫ‌ಲ್ಯದಿಂದ ಕಂಗೆಟ್ಟಿದ್ದ ರೈತರಿಗೆ ಬೆಳೆದು ನಿಂತ ಅಷ್ಟಿಷ್ಟು ಬೆಳೆ ಹುಳುಗಳ ಪಾಲಾಗುತ್ತಿರುವುದು ರೈತರನ್ನು ಕೆಂಗೆಡಿಸಿದೆ. 

ಸೈನಿಕ ಅಥವಾ ಲದ್ದಿ ಹುಳ ಉತ್ತರ ಕರ್ನಾಟಕದಲ್ಲಿ 1988-89ರಲ್ಲಿ ಹೆಚ್ಚಿನ ರೀತಿ ದಾಳಿ ಮಾಡಿ ಬೆಳೆ ಹಾನಿ ಮಾಡಿದ್ದವು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಕೊಪ್ಪಳ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಸೈನಿಕ ಹುಳಗಳು ಆ ಜಿಲ್ಲೆಗೆ ಸೀಮಿತವಾಗಿ ಹೆಚ್ಚಿನ ಬೆಳೆ ಹಾನಿ ಮಾಡಿದ್ದವು. 

ಇದೀಗ ಉತ್ತರ ಹಾಗೂ ಮಧ್ಯ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಾಮೂಹಿಕ ರೀತಿಯಲ್ಲಿ ಕಾಣಿಸಿಕೊಂಡಿವೆ. ಕೀಟಶಾಸ್ತ್ರಜ್ಞರ ಪ್ರಕಾರ ಸಾಮಾನ್ಯವಾಗಿ ಸತತ ಬರದ ನಂತರದಲ್ಲಿ ಬಿದ್ದ ಹೆಚ್ಚಿನ ಮಳೆ, ಮಣ್ಣಿನಲ್ಲಿ ಹೆಚ್ಚಾದ ತೇವಾಂಶ ಹಾಗೂ ಪ್ರತಿಕೂಲ ಹವಾಮಾನದಿಂದ ಸೈನಿಕ ಹುಳುಗಳ ಬಾಧೆ ತೀವ್ರವಾಗಲಿದೆ.

ಒಂದು ಪತಂಗ ಸುಮಾರು 600-800 ಮೊಟ್ಟೆಗಳಿಡುತ್ತಿದ್ದು, ಇದು ಹುಳುಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಸೈನಿಕ ಹುಳುಗಳು ಶೇಂಗಾ, ಜೋಳ, ಗೋವಿನಜೋಳ, ಭತ್ತ, ಕಬ್ಬು, ದ್ವಿದಳ ಧಾನ್ಯ ಹಾಗೂ ಸಿರಿಧಾನ್ಯಗಳ ಬೆಳೆಗಳ ಮೇಲೂ ದಾಳಿ ಮಾಡುತ್ತವೆ.

Advertisement

ಸಾಮೂಹಿಕ ಲಗ್ಗೆ: ಹಾವೇರಿ, ರಾಣೆಬೆನ್ನೂರು, ಮುಂಡಗೋಡ, ದಾವಣಗೆರೆ, ಚಿತ್ರದುರ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ಹಗರಿಬೊಮ್ಮನಹಳ್ಳಿ ಇನ್ನಿತರ ಕಡೆಗಳಲ್ಲಿ ಗೋವಿನಜೋಳ, ಜೋಳ, ರಾಗಿ, ಭತ್ತ ಇನ್ನಿತರ ಬೆಳೆಗಳಿಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ.

ಬೆಳಗಿನ ಜಾವ ಮಣ್ಣಿನ ಒಳಗಡೆ ಇರುವ ಹುಳುಗಳು, ಮಬ್ಬುಗತ್ತಲಲ್ಲಿ ಹೊರ ಬಂದು ಬೆಳೆಗಳನ್ನು ತಿನ್ನುತ್ತವೆ. ಒಂದು ಹೊಲದಲ್ಲಿ ಎಲೆಗಳನ್ನು ತಿಂದು ಮುಗಿಸಿದ ಬಳಿಕ ಸಾಮೂಹಿಕ ರೀತಿಯಲ್ಲಿ ಇನ್ನೊಂದು ಹೊಲಕ್ಕೆ ವಲಸೆ ಹೋಗುವುದರಿಂದ ಇವಕ್ಕೆ “ಸೈನಿಕ’ ಹುಳು ಎಂದು ಕರೆಯಲಾಗುತ್ತದೆ.

ನಿಯಂತ್ರಣ ಹೇಗೆ?: ಸೈನಿಕ ಹುಳುಗಳಿಗೆ ರೈತರು ಲದ್ದಿ ಹುಳು ಎಂದೇ ಕರೆಯುತ್ತಾರೆ. ಪತಂಗಗಳ ಲದ್ದಿ ರೂಪದಲ್ಲಿರುವ ಮೊಟ್ಟೆಗಳನ್ನು ರೈತರು ಗುರುತಿಸಿ ನಾಶಪಡಿಸಿದರೆ ಹುಳದ ಬಾಧೆಯ ತೀವ್ರತೆ ತಡೆಯಬಹುದು. ಇದಲ್ಲದೆ ವಿಷ ಪಾಷಾಣ ಹಾಗೂ ಕೆಲವೊಂದು ಕ್ರಿಮಿನಾಶಗಳ ಬಳಕೆ, ಇನ್ನಿತರ ವಿಧಾನಗಳಿಂದಲೂ ಹುಳುಗಳ ಬಾಧೆ ನಿಯಂತ್ರಿಸಬಹುದಾಗಿದೆ ಎಂಬುದು ಧಾರವಾಡ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯಗಳ ಕೀಟಶಾಸ್ತ್ರ ತಜ್ಞರ ಅನಿಸಿಕೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next