ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ರಾಜನಮಟ್ಟಿಯಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 6ನೇ ಚಿರತೆ ಮಂಗಳವಾರ ಬೆಳಗಿನ ಜಾವ ಸೆರೆಯಾಗಿದ್ದು, ಗ್ರಾಮಸ್ಥರಲ್ಲಿದ್ದ ಆತಂಕ ದೂರ ಮಾಡಿದಂತಾಗಿದೆ.
ದೇವಲಾಪುರದ ಕಾನಮಟ್ಟಿ, ಕರೆಗುಡ್ಡ, ರಾಜನಮಟ್ಟಿ, ಸೋಮಲಾಪುರದ ಎರ್ರದಮಟ್ಟಿ, ದರೋಜಿ, ಮೆಟ್ರಿ ಪ್ರದೇಶದಲ್ಲಿ ಚಿರತೆಗಳು ಜನರ ಕಣ್ಣಿಗೆ ಬಿದ್ದಿದರಿಂದ ಹಾಗೂ ನಾಯಿ, ಮೇಕೆ, ಕಾಡು ಬೆಕ್ಕು ಸೇರಿ ಇತರೆ ಪ್ರಾಣಿ ತಿಂದು ಹಾಕಿದ ಚಿರತೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿಸಿದ ಹಿನ್ನ್ನೆಲೆ ಗ್ರಾಮದ ರಾಜನಮಟ್ಟಿಯ ರುದ್ರ ಭೂಮಿಯಲ್ಲಿ ಇಟ್ಟಿದ್ದ ಬೋನ್‌ಗೆ ಇಂದು ಬೆಳಗ್ಗೆ 6.20ಗಂಟೆಗೆ 6 ವರ್ಷದ ಹಾಗೂ ಎರಡು ಮುಕ್ಕಾಲು ಅಡಿ ಎತ್ತರ, 4 ಅಡಿ ಉದ್ದವಿರುವ ಗಂಡು ಚಿರತೆ ಸೆರೆಯಾಗಿದೆ. ಬೋನ್‌ನಲ್ಲಿ ಸೆರೆಯಾದ ಚಿರತೆ ಹೊರ ಬರಲು ಪ್ರಯತ್ನಿಸಿ ಮುಖದ ತುಂಬ ಗಾಯ ಮಾಡಿಕೊಂಡಿದೆ.
ಬಹಿರ್ದೆಸೆಗೆ ಬಂದ ಜನರು ಚಿರತೆ ಬೋನ್‌ಗೆ ಬಿದ್ದಿರುವುದನ್ನು ನೋಡಿದ್ದಾರೆ. ನಂತರ ದೇವಲಾಪುರ ಗ್ರಾಮದ ಜನತೆಗೆ ಚಿರತೆ ಸೆರೆ ಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆ ಜನರು ತಂಡೋಪ ತಂಡವಾಗಿ ಬಂದು ಚಿರತೆ ನೋಡಲು ಮುಗಿ ಬಿದ್ದಿದ್ದರು. ಇದರಿಂದ ಈ ಭಾಗದ ಜನರ ಆತಂಕ ಸ್ವಲ್ಪ ಮಟ್ಟಿಗೆ ದೂರವಾದರೂ, ಇನ್ನೆರಡು ಚಿರತೆಗಳಿರುವ ಭಯ ಜನರನ್ನು ಕಾಡುತ್ತಿದೆ. ಬಲೆಗೆ ಬಿದ್ದ ಚಿರತೆಯನ್ನು ಕಮಲಾಪುರಕ್ಕೆ ತೆಗೆದುಕೊಂಡು ಹೋಗಲಾಯಿತು.
ಕಳೆದ ಒಂದು ತಿಂಗಳಲ್ಲಿ 5 ಚಿರತೆಗಳು ಸೆರೆ ಸಿಕ್ಕಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಸಿಕ್ಕ ಚಿರತೆಗಳನ್ನು ಬೇರೆ ಕಡೆಗೆ ಸಾಗಿಸದೆ, ಮತ್ತೆ ಈ ಭಾಗದ ಗುಡ್ಡಗಾಡು ಪ್ರದೇಶಗಳಿಗೆ ಬಿಡುವುದರಿಂದ ಚಿರತೆಗಳು ಕಾಣಿಸುವಂತಾಗಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.
2018ರ ಡಿ.11 ಮತ್ತು 25ರಂದು ನರಭಕ್ಷಕ ಚಿರತೆಗಳು ಇಬ್ಬರು ಮಕ್ಕಳನ್ನು ಬಲಿ ಪಡೆದು, ಈ ಭಾಗದ ಜನರ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದವು. ಚಿರತೆ ದಾಳಿಗೆ ಮಕ್ಕಳು ಸೇರಿದಂತೆ ಜನರು ಓಡಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಒತ್ತಡ ಹೆಚ್ಚಾದಂತೆ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿ ಡಿಸೆಂಬರ್‌ನಲ್ಲಿ ಮೂರು, ಜ.3ರಂದು ಒಂದು ಸೇರಿ ಒಟ್ಟು ನಾಲ್ಕು ಚಿರತೆ ಸೆರೆ ಹಿಡಿಯಲಾಗಿತ್ತು.
ಈ ಸಂದರ್ಭದಲ್ಲಿ ದರೋಜಿ ಕರಿಡಿಧಾಮದ ವಲಯ ಅಧಿಕಾರಿ ಟಿ.ಭಾಸ್ಕರ್, ವಿನೋದಕುಮಾರ್, ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎನ್.ಬಸವರಾಜ ಹಾಗೂ ಸಿಬ್ಬಂದಿ ಇದ್ದರು.