Advertisement

ಐಎಂಎ ಕಚೇರಿ ಮುಂದೆ ಉದ್ವಿಗ್ನ ಸ್ಥಿತಿ

12:46 AM Nov 18, 2019 | mahesh |

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯಿಂದ ವಂಚನೆಗೊಳಗಾದ ನೂರಾರು ಹೂಡಿಕೆದಾರರು ಏಕಾಏಕಿ ಭಾನುವಾರ ಸಂಜೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಸಭೆ ನಡೆಸಿದ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು.

Advertisement

ಕೆಲವು ಕಿಡಿಗೇಡಿಗಳು ಐಎಂಎ ಕಚೇರಿ ಮುಂದೆ ಭಾನುವಾರ ಸಂಜೆ ಸಭೆ ನಡೆಯಲಿದೆ ಎಂದು ವಾಟ್ಸ್‌ಆ್ಯಪ್‌ ಮೂಲಕ ವದಂತಿ ಹಬ್ಬಿಸಿದ್ದಾರೆ. ಇದರಿಂದಾಗಿ ಜನ ಏಕಾಏಕಿ ಸೇರಿದ್ದರು. ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಸಭೆ, ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟಿಲ್ಲ. ಈ ಬಗ್ಗೆ ಜನರಿಗೆ ತಿಳಿಹೇಳಿ ಕಳುಹಿಸಲಾಗಿದೆ. ವದಂತಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ. ಶರಣಪ್ಪ ಹೇಳಿದರು.

ಮಹಿಳೆಯರು ಸೇರಿದಂತೆ ಏಕಾಏಕಿ ಇನ್ನೂರಕ್ಕೂ ಅಧಿಕ ಮಂದಿ ಐಎಂಎ ಕಚೇರಿ ಬಳಿ ಜಮಾಯಿಸಿದ್ದರು. ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸರು ಹಾಗೂ ಪುಲಕೇಶಿನಗರ ಪೊಲೀಸರು, ವಿಧಾನಸಭಾ ಉಪಚುನಾವಣೆ ನೀತಿ ಸಂಹಿತಿ ಜಾರಿಯಲ್ಲಿದ್ದು, ಪ್ರತಿಭಟನೆ ನಡೆಸದಂತೆ ತಿಳಿಸಿದರು.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೇ ಹಲ್ಲೆಗೆ ಮುಂದಾಗುವ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಲಘು ಲಾಠಿ ಪ್ರವಾಹ ನಡೆಸಿ ಪರಿಸ್ಥಿತಿ ಹತೋಟಿಗೆ ತಂದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next