ಹೊನ್ನಾಳಿ: ಈ ಹಿಂದೆ ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎನ್ನಲಾಗುತ್ತಿತ್ತು. ಆದರೆ ಈಗ ಆ ಪಕ್ಷ ಸಂಪೂರ್ಣ ಮುಳುಗಿದ ಹಡಗು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಟೀಕಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅನುಭವಿ ರಾಜಕಾರಣಿ. ಅಂತವರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೋರ್ಟ್ ತೀರ್ಪು ನೀಡಿದ್ದರೂ ಹಿಜಾಬ್ ಧರಿಸಲು ಅವಕಾಶ ಕೊಟ್ಟು ಪರೀಕ್ಷೆ ಬರೆಸುವಂತೆ ಒತ್ತಾಯಿಸುತ್ತಿರುವುದು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವ ತಂತ್ರ ಎಂದು ದೂರಿದರು.
ಸಮವಸ್ತ್ರ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದು ರಾಜ್ಯ ಉತ್ಛ ನ್ಯಾಯಾಲಯ ತೀರ್ಪು ನೀಡಿದೆ. ಆದರೆ ಕೆಲ ಕಾಂಗ್ರೆಸ್ ಮುಖಂಡರು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿರುವುದು ಖಂಡನೀಯ. ನ್ಯಾಯಾಲಯ ತೀರ್ಪು ಕೊಟ್ಟ ಮೇಲೂ ಕೆಲ ಸಂಘಟನೆಗಳು ಹಾಗೂ ವಿದ್ಯಾರ್ಥಿನಿಯರು ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯ ಬಂದ್‌ಗೆ ಕರೆ ಕೊಟ್ಟಿದ್ದು ಎಷ್ಟು ಸರಿ? ಕಾಂಗ್ರೆಸ್ ಪಕ್ಷ ಇದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಶಿಕ್ಷಣ ಎಲ್ಲರಿಗೂ ಸಮಾನವಾಗಿ ಸಿಗಬೇಕು. ಅಲ್ಪಸಂಖ್ಯಾತರಿಗೆ ಪ್ರತ್ಯೇಕವಾಗಿ ಮದರಸಾಗಳನ್ನು ಸ್ಥಾಪಿಸಿ ಶಿಕ್ಷಣ ನೀಡುವುದು ಸಲ್ಲದು. ತಕ್ಷಣ ರಾಜ್ಯದಲ್ಲಿ ಮದರಸಾ ಶಿಕ್ಷಣಕ್ಕೆ ತಡೆ ನೀಡಿ ಎಲ್ಲಾ ಅಲ್ಪಸಂಖ್ಯಾತ ಮಕ್ಕಳೂ ಒಂದೇ ಸೂರಿನಡಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವಂತಾಗಬೇಕು ಎಂದರು.
ರಾಜ್ಯದಲ್ಲಿರುವ ಎಲ್ಲಾ ಮಠ-ಮಂದಿರಗಳಲ್ಲಿ ದರ್ಶನ ಪಡೆಯಲು ಸರ್ವ ಸಮುದಾಯದವರಿಗೆ ಅವಕಾಶ ನೀಡಲಾಗಿದೆ. ಆದರೆ ಮಸೀದಿಗಳಲ್ಲಿ ಒಂದು ಧರ್ಮಕ್ಕೆ ಸೀಮಿತವಾದವರಿಗೆ ಮಾತ್ರ ಪ್ರಾರ್ಥನೆ ಮಾಡಲು ಅವಕಾಶ ಇದೆ. ಈ ತಾರತಮ್ಯ ದೇಶದಲ್ಲಿ ಅವಘಡಗಳು ಜರುಗಲು ಕಾರಣವಾಗಿದ್ದು, ಈ ರೀತಿಯ ವ್ಯತ್ಯಾಸ ಹೋಗಬೇಕು ಎಂದು ಪ್ರತಿಪಾದಿಸಿದರು.
ಬಂಜಾರ ನಿಗಮದ ನಿರ್ದೇಶಕ ಮಾರುತಿ ನಾಯ್ಕ, ಭೋವಿ ನಿಗಮದ ನಿರ್ದೇಶಕ ಅಜ್ಜಯ್ಯ, ಬಗರ್‌ಹುಕುಂ ಸಮಿತಿ ಸದಸ್ಯ ಶಾಂತಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಇತರರು ಇದ್ದರು.