Advertisement

ಮುಳುಗಿದ ಬಾರ್ಜ್‌ ರಕ್ಷಣೆಗೆ ಬರಲಿದೆ ಮುಂಬಯಿಯಿಂದ ತಜ್ಞರ ತಂಡ

10:32 AM Jun 05, 2017 | Team Udayavani |

ಉಳ್ಳಾಲ: ಮುಳುಗಡೆಯ ಭೀತಿಯಲ್ಲಿರುವ ಆಂಧ್ರದ ಧರ್ತಿ ಸಂಸ್ಥೆಗೆ ಸೇರಿದ ಬಾರ್ಜ್‌ನ ಸ್ಥಳಾಂತರ ಮತ್ತು ಪ್ರಸ್ತುತ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಲು ಮುಂಬಯಿಯಿಂದ ತಜ್ಞರ ತಂಡ ಸೋಮವಾರ ಮಂಗಳೂರಿಗೆ ಆಗಮಿಸಲಿದೆ.

Advertisement

ಸುಮಾರು 33 ಕೋಟಿ ರೂ. ವೆಚ್ಚದ ಈ ಬಾರ್ಜ್‌ ಸಿಂಗಾಪುರದಲ್ಲಿ ನಿರ್ಮಾಣ ಗೊಂಡಿದ್ದು, ಮುಂಬಯಿಯಿಂದ 9 ತಿಂಗಳ ಹಿಂದೆಯಷ್ಟೇ ಉಳ್ಳಾಲದ ಮೊಗವೀರಪಟ್ಣ ಬಳಿಗೆ ತರಲಾಗಿತ್ತು.

ಜಲಚರಕ್ಕೆ ಅಪಾಯ
ಒಂದೆಡೆ ಬಿರುಸುಗೊಂಡಿರುವ ಸಮುದ್ರ, ಇನ್ನೊಂದೆಡೆ ಅತಂತ್ರ ಸ್ಥಿತಿಯಲ್ಲಿರುವ ಬಾರ್ಜ್‌. ಒಂದು ವೇಳೆ ಬಾರ್ಜ್‌ ಮುಳುಗಿದರೆ ಅದರ ಇಂಧನದಿಂದ ಜಲಚರಗಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಲಿದೆ. ಹೀಗಾಗಿ ತತ್‌ಕ್ಷಣವೇ ಬಾರ್ಜನ್ನು ತೆರವು ಗೊಳಿಸಬೇಕಿದೆ. ಜೂನ್‌ ತಿಂಗಳ ಬಳಿಕ ಮೀನುಗಳು ಮರಿ ಇಡುವ ಸಂದರ್ಭವಾದ್ದರಿಂದ ಬಾರ್ಜ್‌ನ ಇಂಧ‌ನವನ್ನು ಸುರಕ್ಷಿತವಾಗಿ ಮೇಲೆತ್ತಬೇಕು ಎಂದು ಸ್ಥಳೀಯ ಕೌನ್ಸಿಲರ್‌ ಮಹಮ್ಮದ್‌ ಮುಕ್ಕಚ್ಚೇರಿ ಆಗ್ರಹಿಸಿದ್ದಾರೆ.

ರಾತ್ರಿಯಿಡೀ ನಿದ್ದೆ ಮಾಡಿಲ್ಲ
ಶನಿವಾರ ಸಂಜೆಯಿಂದ ರವಿವಾರ ಬೆಳಗ್ಗೆ ವರೆಗೆ ಮಗ ಸುರಕ್ಷಿತವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದು ರಾತ್ರಿಯಿಡೀ ನಿದ್ದೆ ಬರಲಿಲ್ಲ. ಇದು ಮುಳುಗಡೆ ಭೀತಿ ಯಲ್ಲಿದ್ದ ಬಾರ್ಜ್‌ನ ಸಿಬಂದಿಯಾಗಿರುವ ಮಂಗ ಳೂರಿನ ಬೆಂಗ್ರೆಯ ಶೋಬಿತ್‌ ಅವರ ತಂದೆ ಶಾಂತಾರಾಮ್‌ ಬೆಂಗರೆಯ ಅಳಲು ತೋಡಿಕೊಂಡರು. ಶನಿವಾರ ಸಂಜೆಯಿಂದ ಮೊಗವೀರ ಪಟ್ಣ ಬಳಿ ಮಗನ ಸುರಕ್ಷತೆಗಾಗಿ ಆತಂಕ ವ್ಯಕ್ತಪಡಿಸುತ್ತಿದ್ದ ಶಾಂತಾರಾಮ್‌ ಅವರು ರವಿವಾರ ಮಗ ಸಹಿತ ಬಾರ್ಜ್‌ನಲ್ಲಿದ್ದ ಸಿಬಂದಿ ಗಳೆಲ್ಲರೂ ರಕ್ಷಣೆಯಾದಾಗ ನಿಟ್ಟುಸಿರು ಬಿಟ್ಟರು.
 
“ಶೋಭಿತ್‌ ಘಟನೆ ಸಂಭವಿಸಿದಾಗಲೇ ಈಜಿ ದಡ ಸೇರುವ ಸಾಮರ್ಥ್ಯ ಹೊಂದಿದ್ದ. ಆದರೆ ಶಿಪ್ಪಿಂಗ್‌ ಕೋರ್ಸ್‌ ಮಾಡಿದ್ದ ಶೋಭಿತ್‌ 40 ದಿನಗಳ ಹಿಂದೆ ಈ ಬಾರ್ಜ್‌ನಲ್ಲಿ ಕೆಲಸಕ್ಕೆ ಸೇರಿದ್ದ. 40 ದಿನಗಳ ಒಡನಾಟ ಹೊಂದಿದ್ದ ತನ್ನ ಸಹೋದ್ಯೋಗಿಗಳನ್ನು ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದ. ಜತೆಗೆ ಸುಮಾರು 18 ಗಂಟೆಗಳ ಅತಂತ್ರ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಕರಾವಳಿ ರಕ್ಷಣಾ ಪಡೆಗಳ ಅಧಿಕಾರಿಗಳೊಂದಿಗೆ ಘಟನೆಯ ಮಾಹಿತಿ ನೀಡಲು ತನ್ನ ಬಳಿ ಇದ್ದ ಮೊಬೈಲ್‌ ಮೂಲಕ ನೆರವಾಗಿದ್ದ ಎಂದು ತಮ್ಮ ಮಗನ ಬಗ್ಗೆ ಶಾಂತಾರಾಮ್‌ ಹೆಮ್ಮೆ ವ್ಯಕ್ತಪಡಿಸಿದರು.

ರಕ್ಷಣೆಯ ನೈಜ ಹೀರೋಗಳಿವರು
ಬಾರ್ಜ್‌ನಲ್ಲಿ ಸಿಲುಕಿಕೊಂಡವರ ರಕ್ಷಣೆಯಲ್ಲಿ ತಣ್ಣೀರುಬಾವಿಯ ಯೂತ್‌ ಫ್ರೆಂಡ್ಸ್‌ ತಂಡದ ಜೀವ ರಕ್ಷಕ ದಳದ  ಐವರು ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. ತಣ್ಣೀರು ಬಾವಿಯ ಝಾಕಿರ್‌ ಹುಸೇನ್‌, ಜಾವೇದ್‌, ಸಾದಿಕ್‌, ಹಸನ್‌ ಪಿ.ಟಿ. ಮಹಮ್ಮದ್‌ ವಾಸಿಂ ಇವರು ಶನಿವಾರ ಸಂಜೆಯಿಂದ ರವಿವಾರ ಮಧ್ಯಾಹ್ನದವರೆಗೆ ನಿದ್ದೆªಗೆಟ್ಟು ಕಾರ್ಯ ನಿರ್ವಹಿಸಿರುವುದು ಮಾತ್ರವಲ್ಲದೆ ಆಳಸಮುದ್ರದಲ್ಲಿ ಈಜಿಕೊಂಡು ಎಂಟು ಜನರ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

Advertisement

100ಕ್ಕೂ ಹೆಚ್ಚು ಜೀವ ರಕ್ಷಣೆ
ತಣ್ಣೀರು ಬಾವಿಯ ಈ ಯುವಕರ ತಂಡ ಈವರೆಗೆ ಸುಮಾರು 100ಕ್ಕೂ ಹೆಚ್ಚು ಜೀವ ರಕ್ಷಿಸಿದ ದಾಖಲೆ ಇದೆ. ಅದರಲ್ಲೂ ಸಮುದ್ರ, ನದಿ ಸೇರಿದಂತೆ ಆಳದಲ್ಲಿದ್ದ ಮೃತದೇಹಗಳನ್ನು ಎತ್ತುವಲ್ಲಿ ಇವರದ್ದು ಎತ್ತಿದ ಕೈ. ಸುಮಾರು 200ಕ್ಕೂ ಹೆಚ್ಚು ಮೃತ ಶರೀರಗಳನ್ನು ಸಮುದ್ರ ಮತ್ತು ನದಿಯ ಆಳದಿಂದ ಹುಡುಕಿಕೊಡುವಲ್ಲಿ ಇವರ ಪಾತ್ರ ಮಹತ್ವದ್ದು. ಅದರಲ್ಲೂ ಡೆನ್‌ಡೆನ್‌ ಹಡಗು ದುರಂತ, ಮಾಸ್ತಿಗುಡಿ ಸಿನೆಮಾದ ಇಬ್ಬರು ವಿಲನ್‌ಗಳ ಮೃತದೇಹ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಯಾವುದೇ ಕಾರ್ಯಕ್ಕೂ ಹಣ ತೆಗೆದುಕೊಳ್ಳುವುದಿಲ್ಲ. ಆದರೆ ಈ ಯುವಕರಿಗೆ ಪ್ರತಿಯೊಂದು ಕಾರ್ಯಾಚರಣೆ ಸಂದರ್ಭದಲ್ಲಿ ಸಮ್ಮಾನ ಮತ್ತು ದೃಢಪತ್ರ ಮಾತ್ರ ಸಿಕ್ಕಿದ್ದು, ಮೀನುಗಾರಿಕೆ ಸೇರಿದಂತೆ ಕೂಲಿ ಕೆಲಸ ಮಾಡುವ ಇವರಿಗೆ ಸರಕಾರ ಗುರುತಿಸಿ ಕೆಲಸ ನೀಡಿಲ್ಲ.

ರಕ್ಷಣಾ ಕಾರ್ಯದಲ್ಲಿ ಸಚಿವ ಖಾದರ್‌
ಬಾರ್ಜ್‌ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಸಚಿವ ಯು.ಟಿ. ಖಾದರ್‌ ರಕ್ಷಣೆಯ ಬಗ್ಗೆ ಸಂಬಂಧಿತ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಶನಿವಾರ ಮೈಸೂರಿನಲ್ಲಿದ್ದ ಸಚಿವರು ರವಿವಾರ ಮುಂಜಾನೆ 3 ಗಂಟೆಗೆ ಆಗಮಿಸಿ ಉಪವಾಸದ ಕಾರ್ಯ ಮುಗಿದ ಬಳಿಕ 5.30ಕ್ಕೆ ಪಣಂಬೂರಿನಲ್ಲಿರುವ ಕರಾವಳಿ ರಕ್ಷಣಾ ಪಡೆಯ ಕಚೇರಿಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸುಮಾರು ಐದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯದ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡರು.

– ವಸಂತ್‌ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next