Advertisement

ಪಾತಕಿ ಕರಿಚಿರತೆ ಎನ್‌ಕೌಂಟರ್‌

02:29 PM Aug 02, 2017 | Team Udayavani |

ಕಲಬುರಗಿ: ಕೊಲೆ, ಸುಲಿಗೆ, ದರೋಡೆ ಮತ್ತಿತರ ದುಷ್ಕೃತ್ಯಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿದ್ದ ಕೋಕಾ ಕಾಯ್ದೆಯಡಿ ಬಂಧನಕ್ಕೆ ಒಳಗಾಗಬೇಕಿದ್ದ ಕುಖ್ಯಾತ ರೌಡಿ ನಂದೂರ ಗ್ರಾಮದ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಶಿವಾನಂದ ಬಡಿಗೇರ (21) ಮಂಗಳವಾರ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

Advertisement

ಸೋಮವಾರ ಸಂಜೆಯಿಂದ ರಾತ್ರಿ ವರೆಗಿನ ಅವಧಿಯಲ್ಲಿ ಸ್ವಗ್ರಾಮ ನಂದೂರ ಆಸುಪಾಸಿನಲ್ಲಿ ಮಲ್ಲಿಕಾರ್ಜುನ ಸೇರಿ ನಾಲ್ವರು ಒಟ್ಟು ಮೂರು ಪ್ರಯಾಣಿಕರ ಕತ್ತಿಗೆ ಮಾರಕಾಸ್ತ್ರಗಳನ್ನು ಹಚ್ಚಿ ಬೆದರಿಸಿ, ಹಣ ಹಾಗೂ ಮೊಬೈಲ್‌ ದೋಚಿದ್ದರು. ಮಂಗಳವಾರ ಬೆಳಗ್ಗೆ ನಗರದ ಹೊರ ವಲಯ ಕೆಸರಟಗಿ ಸೀಮಾಂತರದಲ್ಲಿ ಕರಿಚಿರತೆ ತನ್ನ ಸಹಚರರೊಂದಿಗೆ ಮೂರು ಬೈಕ್‌ಗಳಲ್ಲಿ ತಿರುಗಾಡುತ್ತಿದ್ದಾನೆ ಎನ್ನುವ ಮಾಹಿತಿ ಮೇರೆಗೆ ಗ್ರಾಮೀಣ ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರ ನೇತೃತ್ವದಲ್ಲಿ ಬಂಧಿಸಲು ಹೋದಾಗ ಎರಡು ಬೈಕ್‌ಗಳಲ್ಲಿ ಮೂವರು ಪರಾರಿಯಾಗಿದ್ದರು. ಆದರೆ ಕರಿಚಿರತೆ ಬೈಕ್‌ ಸ್ಕಿಡ್‌ ಆಗಿ ಬಿದ್ದಿದ್ದರಿಂದ ಆತನನ್ನು ಸುತ್ತುವರಿದು ಹಿಡಿಯಲು ಪೊಲೀಸರು ಮುಂದಾಗಿದ್ದರು. ಆದರೆ ಕರಿಚಿರತೆ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆಯೇ ಗುಂಡು ಹಾರಿಸಿದ. ಒಂದು ಗುಂಡು ಡಿವೈಎಸ್ಪಿ ಹುಲ್ಲೂರ ಅವರ ಎದೆಯ ಮಗ್ಗುಲಿಗೆ ಬಡಿದು ಕೈಗೆ ತಗುಲಿದೆ. ಪ್ರತಿಯಾಗಿ ಮಹಾತ್ಮಾ ಬಸವೇಶ್ವರ ಠಾಣೆ ಸಿಪಿಐ ಶಾಂತಿನಾಥ ಕರಿಚಿರತೆ ಮೇಲೆ ಗುಂಡು ಹಾರಿಸಿದ್ದಾರೆ. ಆತ ಸ್ಥಳದಲ್ಲಿಯೇ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ದಾಳಿಯಲ್ಲಿ ಪೇದೆಗಳಾದ ಶ್ರೀಶೈಲ, ಆನಂದ ಎಂಬುವರೂ ಗಾಯಗೊಂಡಿದ್ದಾರೆ. ಹುಲ್ಲೂರ ಹಾಗೂ ಪೇದೆಗಳಿಬ್ಬರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

12 ಪ್ರಕರಣಗಳು: ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಕುಖ್ಯಾತ ರೌಡಿ ಮಾರ್ಕೇಟ್‌ ಸತೀಶನ ಸಹಚರ. ಕರಿಚಿರತೆ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಸೇರಿ ಒಟ್ಟು 11 ಅಪರಾಧ ಪ್ರಕರಣಗಳಿವೆ. ಜುಲೈ 7ರಂದು ನಂದೂರ ಗ್ರಾಮದ ಲಕ್ಷ್ಮೀಕಾಂತ ಕರದಳ್ಳಿ ಎಂಬುವರನ್ನು ಹಾಡಹಗಲೇ ಮನೆಯಿಂದ ಅಪಹರಿಸಿ, 10 ಲಕ್ಷ ರೂ. ನೀಡುವಂತೆ ಹೆದರಿಸಿದ್ದ. ಹಣ ನೀಡದೇ ಇದ್ದಾಗ ಮಾರಾಕಾಸ್ತ್ರಗಳಿಂದ ಭೀಕರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಕೊಲೆ ಸಂಬಂಧ 9 ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಕರಿಚಿರತೆ ಮಾತ್ರ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. 

ಜೀವ ಉಳಿಸಿದ ಬುಲೆಟ್‌ ಫ್ರೂಪ್‌: ಡಿವೈಎಸ್ಪಿ ಹುಲ್ಲೂರ, ಸಿಪಿಐ ಶಾಂತಿನಾಥ ಮತ್ತು ಸಿಬ್ಬಂದಿ ಸನ್ನದ್ಧರಾಗಿ ದಾಳಿ ನಡೆಸಿದ್ದಾರೆ. ಒಂದು ವೇಳೆ ಹುಲ್ಲೂರ ಅವರು ಬುಲೆಟ್‌ ಫ್ರೂಪ್‌ (ಗುಂಡು ನಿರೋಧಕ ಕವಚ) ಧರಿಸದಿದ್ದರೆ ಜೀವಕ್ಕೆ ಅಪಾಯ ಎದುರಾಗುತ್ತಿತ್ತು. ರೌಡಿ ಹಾರಿಸಿದ ಗುಂಡು ಎದೆ ಮಗ್ಗುಲಿಗೆ ತಾಗಿಸ ಕೈಗೆ ಬಡಿದಿದೆ ಎಂದು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ವಿವರಿಸಿದರು.

ಮಾರ್ಕೆಟ್‌ ಸತೀಶ ಜೈಲಿಗೆ ಹೋದ ಮೇಲೆ ಆತನ ಅಣತಿ ಮೇರೆಗೆ ಕರಿಚಿರತೆ ಅಪರಾಧ ಚಟುವಟಿಕೆ ಎಸಗುತ್ತಿದ್ದ. ಜುಲೈ 7ರಂದು ಲಕ್ಷ್ಮೀಕಾಂತ ಕರದಳ್ಳಿ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಲ್ಲದೆ, ಅವರ ಮನೆಗೆ ಹೋಗಿ, ದೂರು ಕೊಟ್ಟರೆ ನಿಮ್ಮನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಭದ್ರತೆ ಕಲ್ಪಿಸಲಾಗಿತ್ತು. ಅದೇ ರೀತಿ ಹಣ ತರುವಂತೆ ವಾರದ ಹಿಂದೆ ಗುತ್ತಿಗೆದಾರರೊಬ್ಬರಿಗೆ ಬೆದರಿಕೆ ಹಾಕಿದ್ದ. ಸೋಮವಾರ ಮೂವರನ್ನು ಹೆದರಿಸಿ ಹಣ ದೋಚಿದ್ದಾನೆ ಎಂದರು.

Advertisement

ಸುಪ್ರಿಂ ಕೋರ್ಟ್‌ ಆದೇಶದ ಪ್ರಕಾರ ಎನ್‌ಕೌಂಟರ್‌ ತನಿಖೆಯನ್ನು ಬೀದರ ಜಿಲ್ಲೆಯ ಹೆಚ್ಚುವರಿ ಎಸ್ಪಿ ಅವರಿಗೆ ವಹಿಸಲಾಗಿದೆ. ಮರಣೋತ್ತರ ಪರೀಕ್ಷೆಯನ್ನು ಸಹಾಯಕ ಆಯುಕ್ತರ ಹಾಗೂ ವೈದ್ಯರಿಬ್ಬರ ಸಮ್ಮುಖದಲ್ಲಿ ನೆರವೇರಿಸಲಾಗುತ್ತಿದೆ. ಮಾರ್ಕೆಟ್‌ ಸತೀಶ, ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಸೇರಿದಂತೆ ಐವರ ವಿರುದ್ಧ ಕೋಕಾ ಕಾಯ್ದೆ ಜಾರಿಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಐಜಿ ಆಲೋಕಕುಮಾರ ವಿವರಿಸಿದರು. 

ಸಚಿವರ ಭೇಟಿ: ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ, ರೌಡಿ ದಾಳಿಗೆ ಗುಂಡು ತಗುಲಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಡಿವೈಎಸ್ಪಿ ಹುಲ್ಲೂರ ಹಾಗೂ ಪೇದೆಗಳಿಬ್ಬರ ಆರೋಗ್ಯ ವಿಚಾರಿಸಿದರು. ಸಾರ್ವಜನಿಕರ ಶಾಂತಿಗೆ ಭಂಗ ತಂದರೆ, ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಪೊಲೀಸರು ಬಹಳ ಹೊಣೆಗಾರಿಕೆ ಹೊತ್ತು ದಾಳಿ ನಡೆಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಸಚಿವರಿಗೆ ದಾಳಿ ಕುರಿತು ವಿವರಣೆ ನೀಡಿದರು.

2000-01ರಲ್ಲೂ ನಡೆದಿತ್ತು ಇಂತಹದ್ದೇ ರಕ್ತಚರಿತ್ರೆ
ಕಲಬುರಗಿ:
ಕುಖ್ಯಾತ ರೌಡಿ ಚಂದಪ್ಪ ಹರಿಜನ ಎನ್‌ಕೌಂಟರ್‌ ಜೂನ್‌ 2000ನೇ ಇಸ್ವಿಯಲ್ಲಿ ಆದ ನಂತರ 2001ರಲ್ಲಿ ಮೂವರು ಕುಖ್ಯಾತ ರೌಡಿಗಳ ಎನ್‌ಕೌಂಟರ್‌ ಆಗಿದ್ದವು. ಇದಾದ ಬಳಿಕ ಮಂಗಳವಾರ ನಗರದ ಹೊರವಲಯದ ಕೆಸರಟಗಿ ಸೀಮಾಂತರದಲ್ಲಿ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಎನ್‌ಕೌಂಟರ್‌ ನಡೆದಿದೆ. 

ಜನರು ಚಂದಪ್ಪ ಹರಿಜನ ಅಪರಾಧ ಪ್ರಕರಣಗಳಿಂದ ರೋಸಿಹೋಗಿದ್ದರು. ಪೊಲೀಸ್‌ರು ಮಾಹಿತಿ ಪಡೆದು ದಾಳಿ ನಡೆಸಲು ಹೋಗಿದ್ದರೆ ಕೂದಲೆಳೆ ಅಂತರದಲ್ಲಿ ಪರಾರಿಯಾಗುತ್ತಿದ್ದ. ಆದರೆ 2000ನೇ ಇಸ್ವಿಯ ಜೂನ್‌ ತಿಂಗಳಲ್ಲಿ ಅಂದಿನ ಖಡಕ್‌ ಎಸ್ಪಿ ಪ್ರತಾಪರೆಡ್ಡಿ ವ್ಯವಸ್ಥಿತ ಪೊಲೀಸ್‌ ತಂಡ ರೂಪಿಸಿ ಮಹಾರಾಷ್ಟ್ರದ ಧೋತ್ರೆ ಹಳ್ಳಿಯಲ್ಲಿ ಚಂದಪ್ಪ ಹರಿಜನ ಇದ್ದಾನೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿಗೆ ಸೂಚನೆ ನೀಡಿದ್ದರು. ಆದರೆ ಚಂದಪ್ಪ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರಿಂದ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದರು. ಇದರಿಂದ ಎನ್‌ಕೌಂಟರ್‌ ನಡೆದು ಚಂದಪ್ಪ ಸ್ಥಳದಲ್ಲಿಯೇ ಪ್ರಾಣ ಬಿಟ್ಟ. ಈ ಪ್ರಕರಣ ರಾಜ್ಯದಲ್ಲಿಯೇ ಹೆಚ್ಚು ಸದ್ದು ಮಾಡಿತ್ತು.  ಅದಾದ ಬಳಿಕ 2001ರಲ್ಲಿ ಕಲಬುರಗಿ ಎಸ್ಪಿಯಾಗಿ ಬಂದ ಈಗಿನ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಮುಂದಾಗಿದ್ದರು. ಅನಿಲ ಚವ್ಹಾಣ ಹಾಗೂ ಮುಂಬೈನ ಅಶೋಕ ತುಕಾರಾಂ ಪಾಟೀಲ ಎನ್ನುವ ಕುಖ್ಯಾತರ ಕಳ್ಳತನ, ದರೋಡೆ  ಪ್ರಕರಣಗಳು ಎಲ್ಲೇ ಮೀರಿದ್ದವು. ಹೇಗಾದರೂ ಮಾಡಿ
ಇವರನ್ನು ಹಿಡಿಯಬೇಕೆಂದು ಹಲವು ಸಲ ಯತ್ನಿಸಿದರೂ ಸಿಕ್ಕಿರಲಿಲ್ಲ. ಒಮ್ಮೆ ಲಾರಿಯೊಂದರಲ್ಲಿ ಅನಿಲ ಹಾಗೂ ಅಶೋಕ ಬರುತ್ತಿದ್ದರು. ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಲಾರಿ ತಡೆಯಲು ಕೈ ಮಾಡಿದಾಗ, ಅವರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಿದ್ದರು. ತಕ್ಷಣವೇ ಆಗಿನ ಎಸ್ಪಿ ಅಲೋಕಕುಮಾರ ಮಾರ್ಗದರ್ಶನದಲ್ಲಿ ತಂಡವೊಂದು ರಚನೆಗೊಂಡು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿತ್ತು. ಸಣ್ಣೂರ ಕ್ರಾಸ್‌ ಬಳಿಯ ಹೊಲವೊಂದರಲ್ಲಿ ಆರೋಪಿಗಳು ಅಡಗಿ ಕುಳಿತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.  ಆದರೆ ಇಬ್ಬರು ರೌಡಿಗಳು ಪೊಲೀಸರ
ಮೇಲೆಯೇ ದಾಳಿ ನಡೆಸಿದರು. ಪರಿಸ್ಥಿತಿ ಕೈ ಮೀರಿದ ಮೇಲೆ ಪೊಲೀಸರು ಗುಂಡು ಹಾರಿಸಿದರು. ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಯಿತು. ತದನಂತರ ಅದೇ ವರ್ಷ ಅಫಜಲಪುರದ ನಾಗಪ್ಪ ನಿಂಬಾಳ ಎನ್ನುವ ಕುಖ್ಯಾತನ ಎನ್‌ ಕೌಂಟರ್‌ ನಡೆಯಿತು. 

ಈ ನಡುವೆ 2013ರ ಜನವರಿ 8ರಂದು ನಗರದಲ್ಲಿ ಕುಖ್ಯಾತ ರೌಡಿ ಭೂಗತ ಪಾತಕಿ ಮುನ್ನಾ ಹಾಗೂ ಪೊಲೀಸರ ನಡುವೆ ಶೂಟೌಟ್‌ ನಡೆದಿತ್ತು. ಇದರಲ್ಲಿ ಮುನ್ನಾ ಸಾವನ್ನಪ್ಪಿದರೆ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ವಾರದ ನಂತರ ಆಸ್ಪತ್ರೆಯಲ್ಲಿ ಹುತಾತ್ಮರಾದರು. ತದನಂತರ ಜಿಲ್ಲೆಯಲ್ಲಿ ರೌಡಿಗಳನ್ನು ಬಂಧಿಸಲು ಹೋದಾಗ ಪೊಲೀಸರು ಅನೇಕ ಸಲ ಗುಂಡಿನ ದಾಳಿ ನಡೆಸಿದ್ದಾರೆ. ಆಗ ರೌಡಿಗಳ ಕೈ-ಕಾಲು ಮುರಿದಿದ್ದವು. ಈಗ ಜಿಲ್ಲೆಯಲ್ಲಿ ಮಗದೊಂದು 2000 ಹಾಗೂ 2001ರ ಸಾಲಿನ ಎನ್‌ಕೌಂಟರ್‌ಗಳನ್ನು ನೆನಪಿಸುವಂತೆ 2017ರ ಆಗಸ್ಟ್‌ 1ರ ಬೆಳಗ್ಗೆ ಕೆಸರಟಗಿ ಸೀಮಾಂತರದಲ್ಲಿ ಎನ್‌ಕೌಂಟರ್‌ ನಡೆದಿದೆ. ಅದುವೇ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಎನ್‌ಕೌಂಟರ್‌. ಡಿಎಸ್ಪಿ ಎಸ್‌.ಎಸ್‌. ಹುಲ್ಲೂರ ಪ್ರಾಣ ರಕ್ಷಕ ಕವಚ ಹಾಕಿಕೊಳ್ಳದಿದ್ದಲ್ಲಿ ಅವರ ಪ್ರಾಣಕ್ಕೆ ಕುತ್ತು ಎದುರಾಗುವ ಸಾಧ್ಯತೆಗಳಿದ್ದವು. 

ಹೆಚ್ಚಿದ ಅಪರಾಧ: ಕಳೆದ ಎರಡೂರು ವರ್ಷಗಳಿಂದ ಜಿಲ್ಲೆಯಲ್ಲಿ ಅದರಲ್ಲೂ ನಗರದಲ್ಲಿ ಅಪರಾಧ ಪ್ರಕರಣಗಳು  ಹೆಚ್ಚಿದ್ದವು. ರೌಡಿಗಳು ತಮ್ಮ ಕೈ ಚಳಕ ತೋರಿಸಲು ತಂಡ ರಚಿಸಿಕೊಂಡರು. ಈ ನಡುವೆ ಕೊಲೆ, ಕೊಲೆಗೆಯತ್ನ, ಸುಲಿಗೆ ನಡೆದವು. ಇದನ್ನು ಹತ್ತಿಕ್ಕಲು ಪೊಲೀಸರು ಹಲವು ಸಲ ಕಾರ್ಯಾಚರಣೆ ನಡೆಸಿದರು. ಕುಖ್ಯಾತ ರೌಡಿ ಮಾರ್ಕೆಟ್‌ ಸತೀಶ ಹಾಗೂ ಆತನ ಸಹಚರರ ಕಾರ್ಯ ವಿಸ್ತಾರಗೊಂಡಿತು. ಅದರಲ್ಲಿ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಕೂಡಾ ಒಬ್ಟಾತ. ಮಾರ್ಕೆಟ್‌ ಸತೀಶ ಜೈಲಿನಲ್ಲಿದ್ದರೂ ಕರಿಚಿರತೆ ಮೂಲಕ ಅಪರಾಧ ಪ್ರಕರಣಗಳಿಗೆ ಕುಮ್ಮಕ್ಕು ನೀಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರಿಗೆ ಕರಿಚಿರತೆಯನ್ನು ಬಂಧಿಸುವುದು ಅನಿವಾರ್ಯವಾಗಿತ್ತು.

ಆತಂಕದಲ್ಲಿದ್ದ ನಂದೂರ  ಗ್ರಾಮ: ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆ ಉಪಟಳದಿಂದ ನಂದೂರ ಗ್ರಾಮಸ್ಥರು ರೋಸಿ ಹೋಗಿದ್ದರು. ಯಾವಾಗ ತಮ್ಮ ಮೇಲೆ ಕಣ್ಣು ಬೀಳುತ್ತದೆ ಎನ್ನುವ ಆತಂಕಕ್ಕೆ ಒಳಗಾಗಿದ್ದರು. ಕಳೆದ 15 ದಿನಗಳಿಂದ ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿಯೇ ಡಿಎಆರ್‌ ವ್ಯಾನ್‌ನ್ನು ಇಡಲಾಗಿತ್ತು.

ಕರಿಚಿರತೆ ಮೇಲಿರುವ ಪ್ರಕರಣಗಳು 
2015ರ ಮೇ 12ರಂದು ಕಲಬುರಗಿ ಕೋರ್ಟ್‌ ಆವರಣದಲ್ಲಿಯೇ ಕೈಲಾಸ ನಗರದ ಕೃಷ್ಣಾ ಎನ್ನುವರು ಆಸ್ತಿ ವಿವಾದದ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಿ ವಾಪಸ್ಸು ಬರುವಾಗ ಕರಿಚಿರತೆ ಹಾಗೂ ಇತರರು ಜೀವ ಬೆದರಿಕೆ ಹಾಕಿದ್ದರು. 2015ರ ಜುಲೈ 12ರಂದು ನಗರದ ಸರ್ಕಾರಿ
ಪಾಲಿಟೆಕ್ನಿಕ್‌ ಕಾಲೇಜು ಬಳಿ ಮಾರ್ಕೆಟ್‌ ಸತೀಶನೊಂದಿಗೆ ಕರಿಚಿರತೆ ಕೃಷ್ಣಾರೆಡ್ಡಿ ಎನ್ನುವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದ. ಕಳೆದ ಮಾರ್ಚ್‌ ತಿಂಗಳಲ್ಲಿ ಶೆಟ್ಟಿ ಕಾಂಪ್ಲೆಕ್ಸ್‌ ಬಳಿ ಶ್ರೀಕಾಂತ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದ. ಕಳೆದ ಜುಲೈ 7ರಂದು ನಂದೂರ ಗ್ರಾಮದ ಲಕ್ಷ್ಮೀಕಾಂತ ಎನ್ನುವರನ್ನು ಅಪಹರಿಸಿ ಕೊಲೆ ಮಾಡಿದ್ದ. ಸೋಮವಾರ ನಂದೂರ ಗ್ರಾಮದ ದೇವಿಂದ್ರ ಸುತಾರ, ನಾಗಪ್ಪ ನಾಯಿಕೋಡಿ ಹಾಗೂ ಮೊಹ್ಮದ ಆಸೀಪ್‌ ಎನ್ನುವರಿಗೆ ಬೆದರಿಸಿ ಹಣ, ಮೊಬೈಲ್‌ ದೋಚಿದ್ದ. ಹೀಗೆ ಅನೇಕ ಕೊಲೆ, ಸುಲಿಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ

ಶೀಘ್ರ ಬಂಧಿಸುವುದಾಗಿ ಹೇಳಿದ್ದರು ಐಜಿ 
ಕೊಲೆ, ಸುಲಿಗೆ ಎಸಗುತ್ತಿರುವ ಕುಖ್ಯಾತ ರೌಡಿ ಮಲ್ಲಿಕಾರ್ಜುನ ಅಲಿಯಾಸ್‌ ಕರಿಚಿರತೆಯನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಕಳೆದ ಜುಲೈ 18ರಂದು ಪೊಲೀಸ್‌ ಭವನದಲ್ಲಿ ಕರೆಯಲಾಗಿದ್ದ ಪತ್ರಿ ಕಾಗೋಷ್ಠಿಯಲ್ಲಿ ತಿಳಿಸಿದ್ದರು. ಕರಿಚಿರತೆ ತನ್ನ ಮೊಬೈಲ್‌ ಒಂದು ಕಡೆ ಕಳುಹಿಸಿ ಮತ್ತೂಂದು ಕಡೆ ಹೋಗುತ್ತಿದ್ದಾನೆ. ಎಲ್ಲೇ ಇದ್ದರೂ ಬಂಧಿಸಲಾಗುವುದು. ಹದ್ದಿನ ಕಣ್ಣು ಇಡಲಾಗಿದೆ ಎಂದಿದ್ದರು. 13 ದಿನದೊಳಗೆ ಎನ್‌ಕೌಂಟರ್‌ ಗೆ ಬಲಿಯಾಗುತ್ತಾನೆಂದು ಯಾರೂ ಊಹಿಸಿರಲಿಲ್ಲ

ಕಾನೂನು ಕ್ರಮ ನಿಶ್ಚಿತ
ಸಮಾಜದಲ್ಲಿ ಯಾರೇ ಅಶಾಂತಿಗೆ ಮೂಡಿಸಲು ಮುಂದಾದರೆ ಹಾಗೂ ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತದೆ. ಮಂಗಳವಾರ ಪೊಲೀಸರು ತುಂಬಾ ಹೊಣೆ ಹೊತ್ತು ದಾಳಿ ನಡೆಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಪ್ರತಿಕ್ರಿಯಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್‌ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಆರೋಗ್ಯ ವಿಚಾರಿಸಿದ ನಂತರ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next