ಅದೊಂದು ದಿನ ಮಧ್ಯರಾತ್ರಿ ಸರಿಯಾಗಿ 12.30ಕ್ಕೆ ಮೆಸೇಜ್ ಬಂದ ಸದ್ದಾಯಿತು. ನಿದ್ದೆಗಣ್ಣಿನಲ್ಲೇ ಮೊಬೈಲ್ ನೋಡಿದರೆ ನಿನ್ನದೇ ಸಂದೇಶ. ನನಗೆ ಜಗತ್ತನ್ನೇ ಗೆದ್ದಷ್ಟು ಸಂತಸವಾಗಿತ್ತು…
ನೀನು ಹೇಗಿದ್ದೀಯಾ? ಎಲ್ಲಿದ್ದೀಯಾ? ಏನೊಂದೂ ನನಗೆ ಗೊತ್ತಿಲ್ಲ. ಹಿಂದೆ ಹೀಗಿರಲಿಲ್ಲ. ನಿನ್ನ ಕುರಿತ ಪ್ರತಿಯೊಂದು ವಿಚಾರವನ್ನೂ ನೀನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದೆ. ನಿನ್ನನ್ನು ಕಾಲೇಜಿನಲ್ಲಿ ನೋಡಿದ ಮೊದಲ ದಿನವೇ ನನ್ನ ಹೃದಯವನ್ನು ನೀನು ಆಕ್ರಮಿಸಿಕೊಂಡುಬಿಟ್ಟೆ. ನಿನ್ನ ನೋಟ, ಆ ನಿನ್ನ ಮುದ್ದು ಮುಖ ನನಗೆ ತುಂಬಾ ಇಷ್ಟವಾಯಿತು. ಮೊದ ಮೊದಲು ನಿನ್ನನ್ನು ವಾರೆಗಣ್ಣಿನಿಂದಲೇ ಕಳ್ಳ ಬೆಕ್ಕಿನಂತೆ ನೋಡುತ್ತಿದ್ದೆ. ಅದು ನಿನಗೆ ಗೊತ್ತಾಗಿ ನಕ್ಕುಬಿಟ್ಟಿದ್ದೆ. ಆಮೇಲೆ ನಾನು ನೋಡುವಾಗಲೆಲ್ಲಾ ನೀನೂ ನನ್ನನ್ನು ನೋಡಿ ನಗುತ್ತಿದ್ದೆಯಲ್ಲ. ನನಗೆ ಎಷ್ಟು ಖುಷಿಯಾಗುತ್ತಿತ್ತು, ಗೊತ್ತಾ?
ನಿನ್ನನ್ನು ಹೇಗಾದರೂ ಮಾತಾಡಿಸಲೇಬೇಕೆಂಬ ಆಸೆಯಿದ್ದರೂ, ಏನೆಂದು ಮಾತಾಡಿಸೋಣ ಅಂತ ಗೊತ್ತಾಗುತ್ತಿರಲಿಲ್ಲ. ವಿಷಯಗಳೇ ಸಿಗುತ್ತಿರಲಿಲ್ಲ. ಕಡೆಗೆ ಕಾಲೇಜಿನ ವಾರ್ಷಿಕೋತ್ಸವದ ಸಮಯದಲ್ಲಿ ನಿನ್ನ ಜೊತೆ ಮಾತಾಡಬೇಕು ನಿರ್ಧರಿಸಿದೆ. ಆದರೂ ಹಿಂಜರಿಕೆ ಮತ್ತು ನಾಚಿಕೆ. ಅದಕ್ಕೇ ನನಗೆ ಸಹಾಯ ಮಾಡುವಂತೆ ಗೆಳೆಯನೊಬ್ಬನನ್ನು ಕೇಳಿಕೊಂಡೆ. ನಾನು ನಿನ್ನನ್ನು ಮಾತಾಡಿಸಲು ಎಷ್ಟು ಹೆದರಿಕೊಂಡಿದ್ದೆನೆಂದರೆ ಅವನೇ ನಿನ್ನ ಬಳಿಗೆ ಬಂದು “ನನ್ನ ಜೀವದ ಗೆಳೆಯ ನಿಮ್ಮನ್ನು ತುಂಬಾ ಇಷ್ಟ ಪಡುತ್ತಿದ್ದಾನೆ.’ ಎಂದು ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟಿದ್ದ. ನಿನಗಿಂತ ಹೆಚ್ಚಾಗಿ ನಾನೇ ನಾಚಿಕೊಂಡಿದ್ದೆ. ನಾಲ್ಕೈದು ದಿನಗಳ ಕಾಲ ನಿನ್ನ ಕರೆಗಾಗಿ ಕಾದೆ. ಬರಲೇ ಇಲ್ಲ. ಅದೊಂದು ದಿನ ಮಧ್ಯರಾತ್ರಿ ಸರಿಯಾಗಿ 12.30ಕ್ಕೆ ಮೆಸೇಜ್ ಬಂದ ಸದ್ದಾಯಿತು. ನಿದ್ದೆಗಣ್ಣಿನಲ್ಲೇ ಮೊಬೈಲ್ ನೋಡಿದರೆ ನಿನ್ನದೇ ಸಂದೇಶ. ನನಗೆ ಜಗತ್ತನ್ನೇ ಗೆದ್ದಷ್ಟು ಸಂತಸವಾಗಿತ್ತು.
ಬಹಳ ಬೇಗ ನಾವಿಬ್ಬರೂ ತುಂಬಾ ಆತ್ಮೀಯರಾಗಿಬಿಟ್ಟಿದ್ದೆವು. ನಿನ್ನನ್ನು ಬಿಟ್ಟಿರಲಾರದಷ್ಟು ಹಚ್ಚಿಕೊಂಡುಬಿಟ್ಟಿದ್ದೆ. ಯಾವತ್ತೂ ನೀನು ದೂರ ಹೋಗುತ್ತೀಯಾ ಅಂತ ಅಂದುಕೊಂಡಿರಲೇ ಇಲ್ಲ. ಕಾಲೇಜು ಮುಗಿದ ಮೇಲೂ ನಾವಿಬ್ಬರೂ ಜೊತೆಯಾಗಿರೋಣ ಅಂತ ಮಾತಾಡಿಕೊಂಡದ್ದು ನೆನಪಿದೆಯಾ ನಿನಗೆ? ಅದೇ ಕೊನೆ ಮಾತಾಯಿತು. ಆವತ್ತು ದೂರಾದ ನೀನು ನನಗೆ ಮತ್ತೆ ಸಿಗಲೇ ಇಲ್ಲ. ಮೊಬೈಲ್‌ಗೆ ಕರೆ ಮಾಡಿದರೆ, ಸ್ವಿಚ್‌ಆಫ್ ಎಂಬ ಸಂದೇಶ ಬರುತ್ತಿತ್ತು. ಆದರೆ, ಕಾಯುವುದನ್ನು ಮಾತ್ರ ನಾನು ಬಿಟ್ಟಿಲ್ಲ. ನಮ್ಮ ಬಾಂಧವ್ಯವನ್ನು ನೆನೆದು ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಜಿನುಗಿದರೆ ಅದೇ ನೀನು ನನ್ನ ಪ್ರೀತಿಗೆ ಕೊಡುವ ಕಾಣಿಕೆ…
ಐ ಮಿಸ್ ಯು…
– ಲಿಂಗರಾಜ ಗಿ. ತಳ್ಳಿಹಾಳ, ಗದಗ