Advertisement

ವಿವಿ ಕುಲಸಚಿವರ ಕಚೇರಿಗೆ ಮುತ್ತಿಗೆ

11:43 AM Feb 09, 2017 | Team Udayavani |

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಹಾಸ್ಟೆಲ್‌ನಲ್ಲಿ ನೀರು ಬರುತ್ತಿಲ್ಲ, ಇದರಿಂದಾಗಿ ಶೌಚಾಲಯಗಳಿಂದ ದುರ್ನಾತ ಬರಲಾರಂಭಿಸಿದೆ. ಹಾಗಾಗಿ ನಮ್ಮನ್ನು ಬೇರೆ ಹಾಸ್ಟೆಲ್‌ಗೆ ವರ್ಗಾಯಿಸಿ ಎಂದು ಆಗ್ರಹಿಸಿ ಬೆಂಗಳೂರು ವಿವಿಯ “ಪಿಜಿ 2 ಹಾಸ್ಟೆಲ್‌’ನ ಹಲವು ವಿದ್ಯಾರ್ಥಿಗಳು ಕುಲಸಚಿವ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದರು.

Advertisement

ಕುಲಸಚಿವರ ಕಚೇರಿಗೆ ಮುತ್ತಿಗೆ ಹಾಕಿದವರೆಲ್ಲರೂ ಬಹುತೇಕ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇವರನ್ನು ಕೆಲ ತಿಂಗಳ ಹಿಂದಷ್ಟೇ ಹಾಸ್ಟೆಲ್‌ ದುರಸ್ಥಿ ಕಾರ್ಯದ ಹೆಸರಲ್ಲಿ ಪಿಜಿ 5 ಹಾಸ್ಟೆಲ್‌ನಿಂದ ಪಿಜಿ 2 ಹಾಸ್ಟೆಲ್‌ಗೆ ವರ್ಗಾಯಿಸಲಾಗಿತ್ತು. ಇಲ್ಲಿ ತೀವ್ರ ನೀರಿನ ಸಮಸ್ಯೆ, ಬಟ್ಟೆ ಒಗೆಯಲು, ಒಣ ಹಾಕಲು ಜಾಗವಿಲ್ಲ. ಜತೆಗೆ ಆಹಾರವೂ ಗುಣಮಟ್ಟದಿಂದ ಕೂಡಿಲ್ಲ ಹಾಗಾಗಿ ನಮ್ಮನ್ನು ಈ ಹಿಂದೆ ಇದ್ದ ಹಾಸ್ಟೆಲ್‌ಗೇ ವರ್ಗಾಯಿಸುವಂತೆ ಕುಲಸಚಿವ ಪ್ರೊ.ಕೆ.ಎನ್‌.ನಿಂಗೇಗೌಡ ಅವರನ್ನು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕುಲಸಚಿವರು, “ಹಿಂದೆ ಇದ್ದ ಹಾಸ್ಟೆಲ್‌ಗೆ ಮತ್ತೆ ಸ್ಥಳಾಂತರಿಸುವ ಪ್ರಶ್ನೆ ಇಲ್ಲ. ಅದರ ದುರಸ್ಥಿ ಕಾರ್ಯ ಇನ್ನೂ ಆಗಬೇಕಿದೆ. ಈಗಿರುವ ಹಾಸ್ಟೆಲ್‌ ಎಲ್ಲ ಸಮಸ್ಯೆಗಳನ್ನೂ ಪರಿಹಾರಿಸಲಾಗುವುದು,” ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು. ಆದರೆ, ವಿದ್ಯಾರ್ಥಿಗಳು ಮಾತ್ರ ಇದಕ್ಕೆ ಒಪ್ಪಲಿಲ್ಲ. ಇದೇ ವೇಳೆ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ಕುಲಸಚಿವರು ವಿವರಣೆ ಪಡೆದರು.

ಕುಲಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು “ಹಾಸ್ಟೆಲ್‌ನ ಬೋರ್‌ವೆಲ್‌ ನಾಲ್ಕು ದಿನದಿಂದ ಕೆಟ್ಟು ಹೋಗಿದೆ. ಪಿಜಿ 2 ಹೊಸ ಹಾಸ್ಟೆಲ್‌ ಆದ್ದರಿಂದ ಇನ್ನೂ ಕಾವೇರಿ ನೀರಿನ ಸಂಪರ್ಕ ಇಲ್ಲ. ಹಾಗಾಗಿ ಈ ಸಮಸ್ಯೆಯಾಗಿದೆ. ಇದೀಗ ಪಕ್ಕದ ಹಾಸ್ಟೆಲ್‌ನಿಂದ ಕಾವೇರಿ ನೀರನ್ನು ತಾತ್ಕಾಲಿಕವಾಗಿ ಈ ಹಾಸ್ಟೆಲ್‌ಗ‌ೂ ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆ ನಿವಾರಿಸಲಾಗಿದೆ,” ಎಂದು ವಿವರಣೆ ನೀಡಿದರು. 

ಕೂಡಲೇ ಕೆಟ್ಟಿರುವ ಬೋರ್‌ವೆಲ್‌ ಸರಿಪಡಿಸಿ, ಕಾವೇರಿ ನೀರಿನ ಸಂಪರ್ಕ ಪಡೆಯಲು ಕ್ರಮ ಕೈಗೊಳ್ಳುವಂತೆ ಕುಲಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಷ್ಟಾದರೂ ವಿದ್ಯಾರ್ಥಿಗಳು ತಮ್ಮ ಪಟ್ಟು ಸಡಿಲಿಸಲಿಸದಿದ್ದಾಗ ಲಿಖೀತ ಮನವಿ ನೀಡಿ ಕುಲಪತಿ ಗಮನಕ್ಕೆ ತಂದು ಮುಂದಿನ ನಿರ್ಧಾರ ಕೈಗೊಳ್ಳೂವುದಾಗಿ ಹೇಳಿದರು. 

Advertisement

ವಿದ್ಯಾರ್ಥಿಗಳ ದ್ವಂದ್ವ ಹೇಳಿಕೆ
ತಮ್ಮ ಕಚೇರಿಗೆ ಮುತ್ತಿಗೆ ಹಾಕಿದ ಕಾನೂನು ವಿದ್ಯಾರ್ಥಿಗಳು ಪಿಜಿ 2 ಹಾಸ್ಟೆಲ್‌ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂದು ಆರೋಪಿಸಿದ್ದರಿಂದ ಖುದ್ದು ಹಾಸ್ಟೆಲ್‌ಗ‌ೂ ಭೇಟಿ ನೀಡಿ ಕುಲಸಚಿವರು ಪರಿಶೀಲಿಸಿದರು. ಈ ವೇಳೆ ಹಾಸ್ಟೆಲ್‌ನಲ್ಲಿದ್ದ ಹತ್ತಾರು ಕೊಠಡಿಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಂದ ಊಟ ಹೇಗಿದೆ, ಗುಣಮಟ್ಟದ ಆಹಾರ ಸಿಗುತ್ತಿದೆಯಾ ಎಂದು ವಿಚಾರಿಸಿದರು. ಎಲ್ಲರೂ ಉತ್ತಮ ರೀತಿಯ ಆಹಾರ ನೀಡಲಾಗುತ್ತಿದೆ ಎಂದು ಉತ್ತರಿಸಿದರು.

ಈ ವೇಳೆ ಕುಲಸಚಿವರ ಕಚೇರಿಗೆ ಮುತ್ತಿಗೆ ಹಾಕಿದ್ದ ವಿದ್ಯಾರ್ಥಿಗಳು ಹಾಜರಿರಲಿಲ್ಲ. ನಾಲ್ಕು ದಿನಗಳಿಂದ ಹಾಸ್ಟೆಲ್‌ನಲ್ಲಿ ನೀರು ಬಾರದ್ದರಿಂದ ಶೌಚಾಲಯಗಳಿಂದ ವಾಸನೆ ಬರಲಾರಂಭಿಸಿತ್ತು. ಎಲ್ಲ ಶೌಚಾಲಯಗಳನ್ನು ಶುಚಿಗೊಳಿಸಿ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಈ ವೇಳೆ ಹಾಜರಿದ್ದ ಸ್ಟೂಡೆಂಟ್‌ ವೆಲ್ಫೆàರ್‌ ನಿರ್ದೇಶಕ ರಾಮಕೃಷ್ಣಯ್ಯ ಅವರಿಗೆ ಕುಲಸಚಿವರು ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next