Advertisement

ಐಸಿಸ್‌ ಜಾಲ ವಿಸ್ತರಣೆ ಬಗ್ಗೆ ಆಘಾತಕಾರಿ ವಿವರ ಎನ್‌ಐಎ ಭರ್ಜರಿ ಬೇಟೆ

06:00 AM Dec 27, 2018 | Team Udayavani |

ಸಿರಿಯಾ ಮತ್ತು ಇರಾಕ್‌ನಲ್ಲಿ ಸಕ್ರಿಯವಾಗಿರುವ ರಕ್ತಪಿಪಾಸು ಉಗ್ರ ಸಂಘಟನೆ ಐಸಿಸ್‌ ಭಾರತದಲ್ಲಿ ನೆಲೆಯೂರುತ್ತಿದೆ ಎನ್ನುವುದಕ್ಕೆ ಪುಷ್ಟಿಯೇ ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಎಐ) ಉತ್ತರ ಪ್ರದೇಶ ಮತ್ತು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾಚರಣೆ ಸಾಕ್ಷಿ. 

Advertisement

ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಿಂದ ಉಗ್ರ ಸಂಘಟನೆಯಿಂದ ಪ್ರಭಾವಿತರಾದ ಉನ್ನತ ವಿದ್ಯಾಭ್ಯಾಸ ಪಡೆದವರು ಸಿರಿಯಾಗೆ ಕೆಲ ವರ್ಷಗಳಿಂದ ತೆರಳಿದ್ದರು. ಜತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಐಸಿಸ್‌ನ ಧ್ವಜ ಹಿಡಿದದ್ದು ಕಂಡು ಬಂದಿತ್ತು. ಆದರೆ ಎನ್‌ಐಎ ದಾಳಿಯಲ್ಲಿ ಕಂಡು ಬಂದಿರುವ ವಿಚಾರಗಳು ಆಘಾತಕಾರಿಯಾಗಿದೆ. ಐಸಿಸ್‌ ಸಂಘಟನೆಯಿಂದ ಸ್ವಯಂಪ್ರೇರಿತವಾಗಿ ರೂಪಿಸಿಕೊಂಡ ಹರ್ಕತ್‌ ಉಲ್‌ ಹರಬ್‌- ಇ-ಇಸ್ಲಾಂ ಎಂಬ ಸಂಘಟನೆಗೆ ಸೇರಿದವರು ಮಾಡ ಹೊರಟಿದ್ದ ಕುಕೃತ್ಯಗಳು ದಂಗು ಬಡಿಸುವಂತಿದೆ. 

ಆರಂಭಿಕ ತನಿಖೆ ಪ್ರಕಾರ ಸದ್ಯ ಬಂಧಿಸಲಾಗಿರುವ 10 ಮಂದಿ ಸ್ವಯಂ ಪ್ರೇರಿತವಾಗಿ ಉಗ್ರತ್ವಕ್ಕೆ ಶರಣಾದವರು. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಜ್ಬುಲ್‌ ಮುಜಾಹಿದೀನ್‌, ಲಷ್ಕರ್‌-ಎ-ತೊಯ್ಯಬಾ ಮತ್ತು ಇತರ ಉಗ್ರ ಸಂಘಟನೆಗಳು  ಮತ್ತು ಇಂಡಿಯನ್‌ ಮುಜಾಹಿದ್ದೀನ್‌ ಸಂಸ್ಥಾಪಕರಾಗಿರುವ ರಿಯಾಜ್‌ ಭಟ್ಕಳ್‌ ಮತ್ತು ಯಾಸಿನ್‌ ಭಟ್ಕಳ್‌ ಯುವಕರ ಮನಃ ಪರಿವರ್ತನೆ ಮಾಡಿ, ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪ್ರೇರೇಪಿಸುತ್ತಿದ್ದರು. ಆದರೆ ಹಾಲಿ ದಾಳಿಯಲ್ಲಿ ಕಂಡು ಬಂದ ಮಾಹಿತಿಯೇ ಅಚ್ಚರಿ ಮತ್ತು ಆಘಾತಕಾರಿ. ಸ್ವಯಂ ಪ್ರೇರಿತವಾಗಿ ಬಂಧಿತರು ಹೊಸ ಸಂಘಟನೆ ರೂಪಿಸಿಕೊಂಡಿದ್ದರು. ಅವರಿಗೆ ಪ್ರೇರಣೆ ನೀಡಿದ ವ್ಯಕ್ತಿಗಳಾರೂ ಇಲ್ಲ ಎನ್ನುವುದು ಗಮನಾರ್ಹ. ಈ ರೀತಿ ಸ್ವಯಂ ಪ್ರೇರಿತ ಸು#ರಣದಿಂದ ಉಗ್ರತ್ವದೆಡೆಗೆ ಆಕರ್ಷಣೆಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವೇ ಆಗಿದೆ. 

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಬೇಧಿಸಲಾಗಿದ್ದ ಐಸಿಸ್‌ಗೆ ಸಂಪರ್ಕ ಹೊಂದಿರುವ ಜಾಲದಲ್ಲಿ ಈ ಮಾದರಿಯ ಸಂಚು ಇರಲಿಲ್ಲ.  ಜಮ್ಮು ಮತ್ತು ಕಾಶ್ಮೀರದಲ್ಲಿ ಆತ್ಮಹತ್ಯಾ ದಾಳಿ ನಡೆಸುವ ಉಗ್ರರು ಆತ್ಮಹತ್ಯಾ ದಾಳಿಗೆ ಬಳಸುವ ವಸ್ತುಗಳನ್ನು ಕಟ್ಟಿಕೊಂಡು ಬಂದು ಸ್ಫೋಟಿಸುತ್ತಿದ್ದರು. ಆದರೆ ಬಂಧಿತರು ದೇಶದಲ್ಲಿಯೇ ಆತ್ಮಹತ್ಯಾ ಬೆಲ್ಟ್  (ಸುಯಿಸೈಡ್‌ ವೆಸ್ಟ್‌) ಸಿದ್ಧಪಡಿಸಿಕೊಳ್ಳುತ್ತಿದ್ದರು. ಮುಂದಿನ 26ರಂದು ಅವರು ಭಾರಿ ಪ್ರಮಾಣದ ಆತ್ಮಹತ್ಯಾ ದಾಳಿ ನಡೆಸಲು ಯೋಜನೆ ಹಾಕಿದ್ದರೆಂಬ ಮಾಹಿತಿಯೂ ಆಘಾತಕಾರಿಯೇ. 

ಅವರ ಕೈಯಿಂದ ವಶಪಡಿಸಿಕೊಳ್ಳಲಾದ 100ಕ್ಕೂ ಹೆಚ್ಚು ಮೊಬೈಲ್‌, 135ಕ್ಕೂ ಹೆಚ್ಚು ಸಜೀವ ಸಿಮ್‌, ರಿವಾಲ್ವರ್‌ ಮತ್ತು ಇತರ ವಸ್ತುಗಳು ಅವರು ರೂಪಿಸಿದ್ದ ಸಂಚಿನ ಕರಾಳತೆಯನ್ನು ವಿಸ್ತರಿಸುತ್ತಿವೆ. ಈ ಕಾರ್ಯಾಚರಣೆ ಒಂದು ಭರ್ಜರಿ ಬೇಟೆಯೇ ಆಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ದೆಹಲಿ, ಉತ್ತರ ಪ್ರದೇಶ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿಯೇ ಪರಿಗಣಿಸಬೇಕು. ಹಿಂದಿನ ಸಂದರ್ಭಗಳಲ್ಲಿ ಎನ್‌ಐಎ ದಾಳಿ ನಡೆಸಿದ್ದ ವೇಳೆ ಮುಗ್ಧರನ್ನು ವಶಕ್ಕೆ ಪಡೆಯಲಾಗಿತ್ತೆಂಬ ವಾದ ಕೇಳಿ ಬಂದಿತ್ತು. ಪಕ್ಷಗಳೂ ಕೂಡ ತನಿಖಾ ಸಂಸ್ಥೆಗಳ ಜತೆಗೆ ಸಹಕರಿಸಬೇಕಾಗಿದೆ. ಎನ್‌ಐಎ ದಾಳಿ ಭಾರತದಲ್ಲಿ ಐಎಸ್‌ಎಸ್‌ ಸಂಘಟನೆ ಕಬಂಧ ಬಾಹು ವಿಸ್ತರಿಸುತ್ತಿದೆ ಎನ್ನುವುದಕ್ಕೆ  ಹಗಲಿನಷ್ಟೇ ನಿಚ್ಚಳ ಪುರಾವೆ ಒದಗಿಸಿದೆ. ಹೀಗಾಗಿ, ಅದನ್ನು ಮೂಲೋತ್ಪಾಟನೆ ಮಾಡಲು ಎಲ್ಲರ ಸಹಕಾರವೂ ಅಗತ್ಯ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next