Advertisement

ನೃಪತುಂಗ ರಸ್ತೆ ಟ್ರಾಫಿಕ್‌ ಬೇರೆಡೆಗೆ ಶಿಫ್ಟ್‌

12:32 PM Feb 28, 2017 | Team Udayavani |

ಬೆಂಗಳೂರು: ಟೆಂಡರ್‌ ಶ್ಯೂರ್‌ ಯೋಜನೆ ಅಡಿ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ನೃಪತುಂಗ ರಸ್ತೆಯಲ್ಲಿ ಸೋಮವಾರ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಂಡಿದ್ದು, ಮಂಗಳವಾರ ಬೆಳಿಗ್ಗೆಯಿಂದ ಇದರ ಬಿಸಿ ಈ ಮಾರ್ಗದ ವಾಹನ ಸವಾರರಿಗೆ ತಟ್ಟಲಿದೆ. 

Advertisement

“ಪೀಕ್‌ ಅವರ್‌’ನಲ್ಲಿ ಪ್ರತಿ ಗಂಟೆಗೆ ನೃಪತುಂಗ ರಸ್ತೆಯಲ್ಲಿ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಮಂಗಳವಾರದಿಂದ ಆ ವಾಹನಗಳ ಓಟಕ್ಕೆ ಬಹುತೇಕ ಬ್ರೇಕ್‌ ಬೀಳಲಿದೆ. ಇದರಿಂದ ವಾಹನದಟ್ಟಣೆ ಈಗ ಪಕ್ಕದ ಕಬ್ಬನ್‌ ಉದ್ಯಾನಕ್ಕೆ ಸ್ಥಳಾಂತರಗೊಳ್ಳಲಿದೆ. ಮುಂದಿನ ಸುಮಾರು ಎರಡು ತಿಂಗಳ ಕಾಲ ಈ ಮಾರ್ಗದಲ್ಲಿನ ವಾಹನಸವಾರರು ಎಂದಿಗಿಂತ ತುಸು ಹೆಚ್ಚು ಟ್ರಾಫಿಕ್‌ ಸಮಸ್ಯೆ ಅನುಭವಿಸಲಿದ್ದಾರೆ. 

ನೃಪತುಂಗ ರಸ್ತೆಯಲ್ಲಿ ರಾತ್ರಿಯಿಂದಲೇ ಬ್ಯಾರಿಕೇಡ್‌ಗಳನ್ನು ಹಾಕಿ, ವಾಹನ ಸವಾರರಿಗೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗದ ಸೂಚನಾ ಫ‌ಲಕಗಳನ್ನು ಅಳವಡಿಕೆ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 14 ಮೀ. ರಸ್ತೆಯಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ 7 ಮೀ.ನಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು, ಭಾರಿ ವಾಹನಗಳು ಹಾಗೂ ಈ ಮಾರ್ಗದಲ್ಲಿರುವ ಕಚೇರಿ ಸಿಬ್ಬಂದಿ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. 

ಕಚೇರಿ ವಾಹನಗಳಿಗೆ ಅವಕಾಶ ಬೆಸ್ಕಾಂ ಕಚೇರಿ, ಮಾರ್ಥಾಸ್‌ ಆಸ್ಪತ್ರೆ, ಕಾಲೇಜು, ಮಿಥಿಕ್‌ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಆರ್‌ಬಿಐ ಕಚೇರಿ, ಪೊಲೀಸ್‌ ಮಹಾನಿರ್ದೇಶಕ ಕಚೇರಿಗಳು ಈ ಮಾರ್ಗದಲ್ಲಿವೆ. ಅಲ್ಲಿಗೆ ಸ್ವಂತ ವಾಹನಗಳಲ್ಲಿ ಬರುವವರು ದೂರದಲ್ಲೇ ನಿಲುಗಡೆ ಮಾಡಿ, ಬರುವುದು ಅನಿವಾರ್ಯ. ಆಸ್ಪತ್ರೆಗೆ ಬರುವ ರೋಗಿಗಳಿಗೆ ನಿಯಮದಲ್ಲಿ ತುಸು ಸಡಿಲಿಕೆ ಆಗಬಹುದು.  

ಕೆ.ಆರ್‌. ರಸ್ತೆ ಕಡೆಯಿಂದ ಬರುವವರು ನೃಪತುಂಗ ರಸ್ತೆಗೆ ಪರ್ಯಾಯವಾಗಿ ಕಬ್ಬನ್‌ ಉದ್ಯಾನದೊಳಗೆ ತೆರಳಿ, ಸೆಂಚುರಿ ಕ್ಲಬ್‌ ಮುಂದೆ ಹಾದು, ಕೇಂದ್ರ ಗ್ರಂಥಾಲಯದ ಮೂಲಕ ಹಡ್ಸನ್‌ ವೃತ್ತ ಸೇರಬೇಕಾಗುತ್ತದೆ. ಕಸ್ತೂರ ಬಾ ರಸ್ತೆಯ ಸಿದ್ದಲಿಂಗಯ್ಯ ವೃತ್ತದ ಮುಖಾಂತರ ಕಬ್ಬನ್‌ ಪಾರ್ಕ್‌ನ ನಗರ ಕೇಂದ್ರ ಗ್ರಂಥಾಲಯಕ್ಕೆ ಸಂಚರಿಸಬಹುದು. ಕಬ್ಬನ್‌ ಪಾರ್ಕ್‌ ರಸ್ತೆಯಲ್ಲಿ ಜೆ.ಎಂ.ಎಂ ನ್ಯಾಯಲಯಕ್ಕೆ ಬರುವ ವಾಹನಗಳ ನಿಲುಗಡೆ ಮಾಡುತ್ತಿದ್ದು, ಇದನ್ನು ತಾತ್ಕಾಲಿಕವಾಗಿ ಕೆ.ಜಿ. ರಸ್ತೆಯ ಬನ್ನಪ್ಪ ಪಾರ್ಕ್‌ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Advertisement

ರಾತ್ರಿ 10ರವರೆಗೆ ಮಾತ್ರ ಸಂಚಾರ?
ನೃಪತುಂಗ ರಸ್ತೆಗೆ ಪರ್ಯಾಯ ಮಾರ್ಗ ಕಬ್ಬನ್‌ ಉದ್ಯಾನದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ನಾಲ್ಕು ವಾರಗಳ ಮಟ್ಟಿಗೆ ಲಘುವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಆಯುಕ್ತ ಪಿ.ಸಿ. ರೇ ಸ್ಪಷ್ಟಪಡಿಸಿದ್ದಾರೆ. ಬೆಳಿಗ್ಗೆ 8ರಿಂದ ರಾತ್ರಿ 10ರವರೆಗೆ ಈ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದು. ಇನ್ನು ಉದ್ಯಾನದಲ್ಲಿ ನಿಲುಗಡೆ ಆಗುತ್ತಿರುವ ಜೆಎಂಎಂ ನ್ಯಾಯಾಲಯದ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು.

ಭಾನುವಾರ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ನಾಲ್ಕು ವಾರಗಳ ನಂತರ ಕಾಮಗಾರಿ ಮುಂದುವರಿದಿದ್ದರೆ, ಅಗತ್ಯತೆಯನ್ನು ನೋಡಿಕೊಂಡು ಅವಕಾಶ ಕಲ್ಪಿಸಲಾಗುವುದು ಎಂದು ರೇ ತಿಳಿಸಿದ್ದಾರೆ. ರಾತ್ರಿ 10ರ ನಂತರವೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದರೆ, ಉದ್ಯಾನದಲ್ಲಿರುವ ಪಕ್ಷಿಗಳಿಗೆ, ಗಿಡಗಳ ಉಸಿರಾಟ  ಕ್ರಿಯೆಗೆ ತೊಂದರೆ ಆಗುತ್ತದೆ.

ಅಲ್ಲದೆ, ರಾತ್ರಿ ಅಕ್ರಮ ಚಟುವಟಿಕೆಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ 10ರ ನಂತರ ಉದ್ಯಾನದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಬಿಬಿಎಂಪಿ ಪ್ರಕಟಣೆಯಲ್ಲಿ 24 ಗಂಟೆಗಳೂ ಉದ್ಯಾನದಲ್ಲಿ ಸಂಚರಿಸಬಹುದು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next