ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕಂಪದಿಂದ ಭಯಗೊಂಡಿರುವ ಗ್ರಾಮಸ್ಥರು ಸರ್ಕಾರಕ್ಕೆ ಶೆಡ್ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಆದರೆ ಸರ್ಕಾರ ಗ್ರಾಮಸ್ಥರ ಬೇಡಿಕೆಗೆ ಇನ್ನೂ ಸ್ಪಂದಿಸದೇ ಇರುವ ಕಾರಣ ಗ್ರಾಮಸ್ಥರೆಲ್ಲ ತಮ್ಮ ಮನೆ ಎದುರಿಗೆ ಅನಿವಾರ್ಯವಾಗಿ ತಾಡಪತ್ರಿಗಳನ್ನು ಹಾಕಿಕೊಂಡು ಮಲಗುತ್ತಿದ್ದಾರೆ.
ಕಳೆದ ಆರು ವರ್ಷಗಳಿಂದ ಗಡಿಕೇಶ್ವಾರ ಗ್ರಾಮದಲ್ಲಿ ಮೇಲಿಂದ ಮೇಲೆ ಲಘು ಭೂಕಂಪ ಆಗುತ್ತಿದ್ದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಗ್ರಾಮಸ್ಥರು ತಮ್ಮ ಮನೆ ಎದುರು ತಾಡಪತ್ರಿ ಹಾಕಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥ ಅರುಣಕುಮಾರ ರಂಗನೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅ.11ರಂದು ರಾತ್ರಿ 9:58ಗಂಟೆಗೆ ಭೂಮಿಯಲ್ಲಿ ಉಂಟಾದ ಭಾರಿ ಶಬ್ದಕ್ಕೆ (4.1 ತೀವ್ರತೆ) ಹೆದರಿ ಅನೇಕರು ಗ್ರಾಮವನ್ನೇ ಬಿಟ್ಟು ತೊಲಗಿದ್ದರು. ಈಗ ಮತ್ತೆ ಗ್ರಾಮದತ್ತ ಮುಖ ಮಾಡಿರುವ ಗ್ರಾಮಸ್ಥರು, ಶೆಡ್ ಇಲ್ಲದೇ ಇದ್ದುದರಿಂದ ಮನೆ ಅಂಗಳದಲ್ಲೇ ಮಲಗುತ್ತಿದ್ದಾರೆ. ಇನ್ನು ಕೆಲವರು ತಾಡಪತ್ರಿಗಳನ್ನು ಹಾಕಿಕೊಂಡಿದ್ದಾರೆ.
ಇದನ್ನೂ ಓದಿ: ಸಾಹಿತ್ಯ ಚರ್ಚೆ-ಪುಸ್ತಕ ಸಂತೆಗೆ ಆದ್ಯತೆ: ನಿರಗುಡಿ
ಹೊಲದಲ್ಲಿ ತೊಗರಿ ಹೂವು ಚೆಳ್ಳಿ ಕಾಯಿ ಆಗುತ್ತಿದೆ. ತೊಗರಿ ಕೀಟಗಳ ಭಾಧೆಗಾಗಿ ಕೀಟ ನಾಶಕ ಸಿಂಪಡಣೆ ಮಾಡಬೇಕು. ಹೊಲದಲ್ಲಿ ಹುಲ್ಲು ಕೀಳಬೇಕು. ಆದರೆ ಸರ್ಕಾರ ಸಹಾಯಹಸ್ತ ಚಾಚುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥ ರೇವಣಸಿದ್ಧ ಅಣಕಲ್. ಗಡಿಕೇಶ್ವಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಆರ್. ಅಶೋಕ, ಸಚಿವ ಮುರುಗೇಶ ನಿರಾಣಿ ಭೇಟಿ ನೀಡಿ ಹೋಗಿದ್ದಾರೆ. ಗ್ರಾಮಸ್ಥರ ಬೇಡಿಕೆಗಳು ಈಡೇರುವ ನಿರೀಕ್ಷೆಯಿದೆ ಎನ್ನುತ್ತಾರೆ ಗ್ರಾಪಂ ಉಪಾಧ್ಯಕ್ಷ ಜಿಶಾನ್ ಅಲಿ ಪಟ್ಟೇದಾರ.