ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಕುರಿತು ಅವಹೇಳಕನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ವಿಶ್ವ ಮಾನ ಸಾಂಸ್ಕೃತಿಕ ಪ್ರತಿಷ್ಠಾನದ 5ನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಸಮಾಜ ಸೇವಕ ಡಾ.ಎ.ಎಚ್.ಬಸವರಾಜು ಅವರಿಗೆ “ವಿಶ್ವ ಮಾನವ ಪ್ರತಿಷ್ಠಾನ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಅವರ ನೇತೃತ್ವದಲ್ಲಿ ಲಕ್ಷಾಂತರ ಮಂದಿ ತಮ್ಮ ಮನೆಮಠ ತೊರೆದು ಪಾಲ್ಗೊಂಡಿದ್ದರು. ಮಹಾತ್ಮಗಾಂಧಿಯನ್ನು ಹತ್ಯೆಗೈದ ಸಂಘ ಪರಿವಾರದ ಕೂಸು ಗೋಡ್ಸೆಗೆ ದೇವಸ್ಥಾನ ನಿರ್ಮಿಸಿ, ಪೂಜೆ ಮಾಡಲು ಹೊರಟಿದ್ದಾರೆ. ಅದೇ ಪರಿವಾರದಲ್ಲಿ ಬೆಳೆದ ಅಮಿತ್ ಶಾ ಇಂದು ಗಾಂಧಿ ಬಗ್ಗೆ ಜಾತಿ ಹೆಸರಿನಲ್ಲಿ ಅವಹೇಳನ ಮಾಡಿರುವುದು ಖಂಡನೀಯ ಎಂದು ಟೀಕಿಸಿದರು.
ಸಮಾಜದಲ್ಲಿ ಕೆಟ್ಟವರ ಸಂಖ್ಯೆ ಹೆಚ್ಚಾಗುತ್ತಿದೆ. ಒಳ್ಳೆಯವರು ಹುಡುಕಿದರೂ ಸಿಗುತ್ತಿಲ್ಲ. ದೇಶಕ್ಕಾಗಿ ತ್ಯಾಗ ಮಾಡಿದ ನಾಯಕರ ಬಗ್ಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜಮುಖೀ ಜನರನ್ನು ನೆನೆಯುವುದು ಕಷ್ಟ. ಸಮಾಜದಲ್ಲಿ ಒಳ್ಳೆಯದನ್ನು ಮಾಡುತ್ತಿರುವವರನ್ನು ಗುರುತಿಸಬೇಕು. ಸಮಾಜಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ನಮ್ಮ ಮುಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿ ಕೆಲವರು ಪ್ರಚಾರ ಪಡೆಯಲು ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಯಾರಿಂದಲೂ ಗಾಂಧೀಜಿ ಅವರ ಗೌರವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ. ಕೆಲವರಿಗೆ ಗಾಂಧೀಜಿ ಅವರ ಹೆಸರು ಹೇಳಲು ಕೂಡ ಯೋಗ್ಯತೆ ಇಲ್ಲ. ಇಂತಹ ಕಲುಷಿತ ಸಮಾಜದಲ್ಲಿ ಒಳ್ಳೆಯತನವನ್ನು ಗುರುತಿಸಿ ಗೌರವಿಸಬೇಕು ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಸಮಾಜದಲ್ಲಿ ಯುವಜನರನ್ನು ದಾರಿ ತಪ್ಪಿಸುವವರ ಸಂಖ್ಯೆ ಹೆಚ್ಚುತ್ತಿದೆ. ಯುವ ಸಮುದಾಯವನ್ನು ಸಂಘಟಿಸಿ ಸಮಾಜವನ್ನು ಅರ್ಥ ಮಾಡಿಸಬೇಕು. ಸಾಯುವುದರೊಳಗೆ ಏನಾದರೂ ಸಮಾಜಮುಖೀ ಕೆಲಸ ಮಾಡಬೇಕು ಎಂಬ ಮನೋಭಾವವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂದರು.
ರಂಗ ಗೌರವ: ಡಾ.ಆರ್.ನಾಗೇಶ್, ರಾಜೀವ್ ಬೀಜಾಡಿ, ಆರ್.ಮಂಜುನಾಥ್, ಆರ್.ಶ್ವೇತ, ಶ್ರೀನಾಥರಾವ್, ಅನಿತಾ ಅಡಿಗ ಅವರಿಗೆ ಈ ಸಂದರ್ಭದಲ್ಲಿ ರಂಗ ಗೌರವ ಸಲ್ಲಿಸಲಾಯಿತು.
ಪ್ರತಿಭಾ ಪುರಸ್ಕಾರ: ಇದೇ ವೇಳೆ ಮಾನಸಿ ಆರ್.ಕೌಶಿಕ್, ಸಚಿನ್ ಶಂಕರ್‌ಭಟ್, ಎಚ್.ಎಸ್.ಶ್ವೇತಾ, ಎಸ್.ಚಿನ್ಮಯಿ, ನಾಗರಂಜಿನಿ, ಎಸ್.ಮನೋಜ್‌ಕುಮಾರ್, ಎಸ್.ಶರಣ್ಯ, ಬಿಪಿನ್ ಕುಮಾರ್, ಪ್ರತೀಕ್ಷಾ, ಸಿ.ಸಿರಿ ಅವರಿಗೆ ವಿಶ್ವಮಾನವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.