Advertisement

ನೆರಳು ಪರದೆ ಸಾಮಗ್ರಿಗಳು ಗುಜರಿ ಅಂಗಡಿಗೆ!

03:17 PM Feb 21, 2018 | Team Udayavani |

ಲಿಂಗಸುಗೂರು: ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರೆ ಕೆಲ ರೈತರೇ ದುರುಪಯೋಗ ಮಾಡುತ್ತಿದ್ದಾರೆಂಂಬುದಕ್ಕೆ ಪಟ್ಟಣದ ಗುಜರಿ ಅಂಗಡಿಯಲ್ಲಿ ಕಾಣುವ ನೆರಳು ಪರದೆ ಸಾಮಾಗ್ರಿಗಳೇ ಸಾಕ್ಷಿಯಾಗಿವೆ.

Advertisement

ಕೃಷಿ ಭಾಗ್ಯ ಯೋಜನೆಯನ್ನು ತೋಟಗಾರಿಕೆ ಇಲಾಖೆಗೂ ವಿಸ್ತರಿಸಲಾಗಿದೆ. ಪಾಲಿಹೌಸ್‌ ಮತ್ತು ನೆರಳು ಪರದೆ ಘಟಕ
ನಿರ್ಮಿಸಿಕೊಳ್ಳಲು ರೈತರಿಗೆ ಸಹಾಯಧನ ನೀಡುತ್ತಿದೆ. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.90ರಷ್ಟು ಸಹಾಯಧನ ನೀಡಲಾಗುತ್ತಿದೆ.

ಒಂದು ಎಕರೆ ಜಮೀನಿನಲ್ಲಿ ಪಾಲಿಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗದ ರೈತರಿಗೆ 15.66 ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ 28.18 ಲಕ್ಷ ರೂ., ಅದೇ ರೀತಿ ನೆರಳು ಪರದೆ ಘಟಕ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗದ ರೈತರಿಗೆ 7.68 ಲಕ್ಷ ರೂ., ಎಸ್‌ಸಿ ಮತ್ತು ಎಸ್‌ಟಿ ರೈತರಿಗೆ 13.82 ಲಕ್ಷ ರೂ., ಸಹಾಯಧನ ನೀಡಲಾಗುತ್ತಿದೆ.

ಸರ್ಕಾರದ ಸಹಾಯಧನ ಪಡೆದು ನಿರ್ಮಿಸಿಕೊಂಡ ನೆರಳು ಪರದೆ ಘಟಕ ಅಥವಾ ಪಾಲಿಹೌಸ್‌ನ್ನು ರೈತರು ಕನಿಷ್ಠ ಮೂರು ವರ್ಷಗಳವರೆಗೆ ನಿರ್ವಹಣೆ ಮಾಡಿ ಪ್ರತಿ ವರ್ಷ ಬೆಳೆ ಬೆಳೆಯುವುದು ಕಡ್ಡಾಯವಾಗಿದೆ. ಆದರೆ ಕೆಲ ರೈತರು ಸಹಾಯಧನ ಪಡೆಯಲು ಕಾಟಾಚಾರಕ್ಕೆ ಎಂಬಂತೆ ಘಟಕವನ್ನು ನಿರ್ಮಿಸಿಕೊಂಡು ಒಂದು ವರ್ಷ ಬೆಳೆ ಬೆಳೆದು ನಂತರ ಘಟಕವನ್ನು ತೆಗೆದು ಅದರ ಪೈಪ್‌ಗ್ಳನ್ನು 15 ರೂ.ಗೆ ಕೆಜಿಯಂತೆ ಪಟ್ಟಣದಲ್ಲಿರುವ ಗುಜರಿ ಅಂಗಡಿಗಳಿಗೆ ಮಾರುತ್ತಿದ್ದಾರೆ.

ಗುಜರಿ ಅಂಗಡಿಯವರು ರೈತರಿಂದ ಖರೀದಿಸಿದ ಸಾಮಾಗ್ರಿಗಳನ್ನು 65 ರೂ.ಗೆ ಕೆಜಿಯಂತೆ ಪುನಃ ಅಗತ್ಯವಿರುವ ರೈತರಿಗೆ ಮಾರುತ್ತಿದ್ದಾರೆ. ಪಾಲಿಮನೆ ಮತ್ತು ನೆರಳು ಪರದೆ ಘಟಕದ ಸಾಮಾಗ್ರಿಗಳು ಗುಜರಿ ಅಂಗಡಿಯಲ್ಲಿ ರಾಶಿ ರಾಶಿ ಕಾಣಬಹುದಾಗಿದೆ. ಸರ್ಕಾರದ ಯೋಜನೆಗಳ ಸಾಮಾಗ್ರಿಗಳನ್ನು ಮಾರಾಟ ಅಥವಾ ಖರೀದಿ
ಮಾಡಬಾರದು ಎಂಬ ನಿಯಮವಿದ್ದರೂ ಈ ನಿಯಮಗಳನ್ನು ಗಾಳಿಗೆ ತೋರಿ ಗುಜರಿ ಅಂಗಡಿಯವರು ರಾಜಾರೋಷವಾಗಿ ಮಾರಾಟ ಮತ್ತು ಖರೀದಿ ವ್ಯವಹಾರ ಮಾಡುತ್ತಿದ್ದಾರೆ.

Advertisement

ಗುಜರಿಯಲ್ಲಿ ಘಟಕದ ಸಾಮಾಗ್ರಿಗಳನ್ನು ಖರೀದಿಸಿ ಹೊಸ ಘಟಕಕ್ಕೆ ಬಳಕೆ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಸಹಾಯಧನ ಪಡೆದು ನಿರ್ಮಿಸುವ ಪಾಲಿಮನೆ ಮತ್ತು ನೆರಳುಪರದೆ ಘಟಕಗಳಿಗೆ ತೋಟಗಾರಿಕೆ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ತಾಂತ್ರಿಕ ಸಲಹೆ ನೀಡಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡಬೇಕೆಂಬ ನಿಯಮ ಇದೆ. ಆದರೂ ಸಹ ಇಂತಹ ಯೋಜನೆಗಳ ದುರುಪಯೋಗವಾಗುತ್ತಿದೆ. ಇದರಲ್ಲಿ ಅಧಿಕಾರಿಗಳು, ಖಾಸಗಿ ಕಂಪನಿಗಳು ಶಾಮೀಲಾಗಿರುವ ಆರೋಪಗಳು ಕೇಳಿಬರುತ್ತಿವೆ.

ತನಿಖೆ ನಡೆಸಲಿ: ಪ್ರಾಮಾಣಿಕ ರೈತರಿಗೆ ಈ ಯೋಜನೆ ಸೌಲಭ್ಯ ಸಿಗುವುದಿಲ್ಲ ಎಂಬ ಕೂಗು ಕೇಳಿಬರುತ್ತಿರುವ ನಡುವೆ ಇಂತಹ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥತರು ಹಾಗೂ ಸರಕಾರ ಯೋಜನೆಗಳ ಸಾಮಗ್ರಿಗಳನ್ನು ಖರೀದಿಸಿದ ಗುಜರಿ ಅಂಗಡಿ ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಯೋಜನೆ ಉದ್ದೇಶ ಏನು?
ರೈತರು ಮಳೆ ನೀರನ್ನು ಪರಿಣಾಮಕಾರಿಯಾಗಿ ಕೊಯ್ಲು ಮತ್ತು ಶೇಖರಣೆಗೆ ಕೃಷಿ ಹೊಂಡ ನಿರ್ಮಿಸಿ ಸಂಗ್ರಹವಾದ
ನೀರನ್ನು ಉಪಯೋಗಿಸುವುದು, ಪಾಲಿಮನೆ ಮತ್ತು ನೆರಳು ಪರದೆ ಘಟಕ ನಿರ್ಮಿಸಿ ಅದರಲ್ಲಿ ತರಕಾರಿ, ಹೂ,
ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುವುದು. ಸುಸ್ಥಿರ ಒಣಭೂಮಿ ತೋಟಗಾರಿಕೆಗೆ ಉತ್ತೇಜನ ನೀಡಿ ಎಲ್ಲ ಋತುಮಾನಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು, ರೈತರ ಆದಾಯವನ್ನು ಹೆಚ್ಚಿಸುವುದು ಯೋಜನೆ ಉದ್ದೇಶವಾಗಿದೆ.

ಸರಕಾರ ಒಳ್ಳೆಯ ಉದ್ದೇಶಕ್ಕಾಗಿ ನೆರಳುಪರದೆ-ಪಾಲಿಮನೆ ನಿರ್ಮಿಸಲು ಸಹಾಯಧನ ನೀಡುತ್ತಿದೆ. ಆದರೆ ರೈತರ
ಸೋಗಿನಲ್ಲಿರುವ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ತೋಟಗಾರಿಕೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. 
 ಮೌನೇಶ ರೆಡ್ಡಿ, ರೈತ

ಪಾಲಿಮನೆ ಮತ್ತು ನೆರಳುಪರದೆ ಘಟಕದ ಸಾಮಾಗ್ರಿಗಳನ್ನು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕಿಲ್ಲ. ಈ ಬಗ್ಗೆ ಪರಿಶೀಲಿಸಿ ಸಂಬಂಧಿ ಸಿದವರಿಗೆ ನೋಟಿಸ್‌ ನೀಡಲಾಗುವುದು. 
 ಸುರೇಶ, ಹಿರಿಯ ನಿರ್ದೇಶಕರು ತೋಟಗಾರಿಕೆ ಇಲಾಖೆ

ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next