Advertisement
ಕುದುರೆಮುಖದ ಮಳೆಕಾಡುಗಳಲ್ಲಿ ಆಗಷ್ಟೇ ಮಳೆ ನಿಂತು ಎಳೆ ಬಿಸಿಲು, ಬೆಟ್ಟಗಳ ಮೇಲೆ ಚಾರಣ ಮಾಡಿತ್ತು. ಮಂಜೆಲ್ಲಾ ರಸ್ತೆಯಲ್ಲಿ ಚೆಲ್ಲಿ, ಬಿಸಿಲು ಚುರುಕಾದಂತೆಲ್ಲಾ ಬೆಣ್ಣೆಯ ತುಂಡಿನಂತೆ ಕರಗುತ್ತಿತ್ತು. ಅಲ್ಲೇ ಎಳೆಬಿಸಿಲಿನಿಂದ ಲಕ ಲಕ ಹೊಳೆಯುತ್ತಿದ್ದ ಮರವೊಂದರ ಕೆಳಗೆ ಮಂಜಿನಂತೆ ತಣ್ಣಗೆ ಕೂತಿದ್ದಳು ಚಂದ್ರಮ್ಮ. ಅವಳು ಕೂತಿದ್ದ ಉದ್ದನೆ ಕಲ್ಲು ಬೆಂಚಿನ ಮೇಲೆಲ್ಲಾ ತುಂಬಿದ್ದ ಕಾಡು ಪೇರಳೆಗಳು ಅವಳ ಸಖ್ಯದಲ್ಲಿ ಅಷ್ಟೊತ್ತು ಸುಖೀಯಾಗಿದ್ದರೂ, “ನಾವಿವತ್ತು ಯಾರ ಬಾಯಿಗೆ ಸೇರುವೆವೋ, ಪ್ರೀತಿಯ ಚಂದ್ರಮ್ಮನನ್ನು ಬಿಟ್ಹೋಗಬೇಕಲ್ಲಾ?’ ಅಂತ ದುಃಖದಿಂದಲೇ ಘಮಘಮಿಸುತ್ತಿದ್ದವು.
Related Articles
Advertisement
ಗತದ ವೈಭೋಗಳನ್ನೆಲ್ಲಾ ಕಳಚಿಕೊಂಡು ಬರೀ ಕಾಡೇ ಆಗಿಹೋಗಿರುವ ಕುದುರೆಮುಖದ ಬಸ್‌ಸ್ಟಾಪಿನ ಪಕ್ಕದಲ್ಲಿರುವ ಕಲ್ಲು ಬೆಂಚಿನ ಮೇಲೆ ಅವಳೀಗ ಕುಳಿತಿದ್ದಾಳೆ. ಪೇರಳೆಯ ರುಚಿ ಮಾತ್ರವಲ್ಲ, ಬಾಯ್ತುಂಬಾ ಸಿಹಿಮಾತುಗಳನ್ನೂ ಹಂಚುತ್ತಾಳೆ, ಚಂದ್ರಮ್ಮ. 10 ರೂ.ಗೆ ಒಂದರಂತೆ ಪೇರಳೆ ಪರರ ಪಾಲಾಗುತ್ತಿವೆ. ದಿನಕ್ಕೆ ಇನ್ನೂರೋ, ಮುನ್ನೂರೋ ಕಾಸು. ಯಾರೂ ಕೊಳ್ಳಲು ಬಂದಿಲ್ಲವೆಂದರೆ, ಶಬರಿಯಂತೆ ಕಾಯುವುದೇ ಲೇಸು. ಪುಡಿಗಾಸಿಲ್ಲದೆ, ಹಸಿವು ಎಂದು ಬಂದವರಿಗೆ, ಪೇರಳೆ ಕೊಟ್ಟು ಸಂತೈಸುವ ಈ ಅಮ್ಮ, ಆ ಹೊತ್ತಿನಲ್ಲಿ ಮುಖ ಬಾಡಿಸಿಕೊಳ್ಳುವುದನ್ನು ಸುತ್ತಲಿನವರಾರೂ ಕಂಡಿಲ್ಲ.
ಒಂದಿನ ಯಾರೋ ಪುಣ್ಯಾತ್ಮ ಕಾರು ನಿಲ್ಲಿಸಿ, “ಎಲ್ಲ ಪೇರಳೆ ಕೊಟ್ಟು ಬಿಡಿ’ ಎಂದ. ಈಕೆ ಇದ್ದಬದ್ದ ಪೇರಳೆಗಳನ್ನೆಲ್ಲ ಆ ವ್ಯಕ್ತಿಯ ಚೀಲಕ್ಕೆ ತುಂಬಿದಳು. “500 ಆಯ್ತು’ ಅಂದಳು. “ಏನ್ ಸಾಮಿ, ನೀವೇನಾದ್ರೂ ಪೇರಳೆ ವ್ಯಾಪಾರ ಮಾಡ್ತೀರಾ? ಇಷ್ಟೊಂದೆಲ್ಲಾ ಪೇರಳೆ ಎಂತಕ್ಕೆ?’ ಅಂತ ಕೇಳಿದಾಗ ಆ ವ್ಯಕ್ತಿ, “ಅಮ್ಮಾ… ನಾನು ಆಯುರ್ವೇದಿಕ್ ಡಾಕುó. ಈ ಪೇರಳೆ ಕೆಲವು ಕಾಯಿಲೆಗಳಿಗೆ ಮದ್ದೂ ಹೌದು. ಇದನ್ನು ಪೌಡರ್ ಮಾಡಿದ್ರೆ ಬೆಸ್ಟ್ ಮೆಡಿಸಿನ್ ಆಗುತ್ತೆ’ ಅಂತ ಅಂದರಂತೆ. ಅದನ್ನು ಕೇಳಿ, ಚಂದ್ರಮ್ಮ ಉಬ್ಬಿ ಹೋಗಿದ್ದಳು.
ಗಂಡ ಕ್ಯಾನ್ಸರ್‌ನಿಂದ ಅದಾಗಲೇ ತೀರಿ ಹೋಗಿದ್ದಾನೆ. ಮಗ ಮೇಸ್ತ್ರಿ ಕೆಲಸ ಹಿಡಿದಿದ್ದಾನೆ. ಕಾಡಿನ ಚುಮುಗುಡುವ ಚಳಿಯಲ್ಲಿ ಚಂದ್ರಮ್ಮ, ತಾಜಾ ಪೇರಳೆಗಳನ್ನು ಆಯ್ದು ಕುದುರೆಮುಖದ ಬೆಟ್ಟಗಳನ್ನು ನೋಡುತ್ತ, ವ್ಯಾಪಾರಕ್ಕೆ ಕೂತಿದ್ದಾಳೆ. ಹಾಗೆ ಕುಳಿತಾಗಲೆಲ್ಲ, ಅವಳಿಗೆ ಒಂದಾನೊಂದು ಕಾಲದ ಕುದುರೆಮುಖ ಅನ್ನೋ ಮಾಯಾಲೋಕ ಕಣ್ಣ ಮುಂದೆ ಬಂದಂತಾಗುತ್ತದೆ. ಗಣಿ ಕಾರ್ಮಿಕರು ಕೂಗು ಹಾಕಿದಂತೆ, ದೊಡ್ಡ ದೊಡ್ಡ ಮಶೀನುಗಳು ಕಿರುಚಿದಂತೆ, ಸೈರನ್ನು ಪ್ರತಿಧ್ವನಿಸಿದಂತೆ, ತೀರಿಹೋದ ಗಂಡ ಕೆಲಸ ಮುಗಿಸಿ ದಣಿದು ಬಂದಂತೆ, ತಾನು ಗಣಿಕಾಲನಿಯ ಕಸ ಗುಡಿಸಿದಂತೆ, ಸಕಲ ಚಿತ್ರಗಳು ಆ ಟಾರು ರೋಡಿನಲ್ಲಿ ಸಾಲಾಗಿ ಹೊರಟಂತೆ ಅನ್ನಿಸುತ್ತದೆ.
ಅಷ್ಟೊತ್ತಿಗೆ “ಪೇರಳೆ ಕೊಡಿ ಅಮ್ಮಾ…’ ಅನ್ನೋ ಧ್ವನಿ ಕಿವಿಗೆ ಬೀಳುತ್ತೆ. ಮನಸ್ಸು, ಮಾತು ಪೇರಳೆಯಂತೆ ಸಿಹಿಯಾಗುತ್ತೆ. ಸಂಜೆ ಕರಗುತ್ತೆ. ಕಾಡು ಕಪ್ಪಾಗುತ್ತೆ. ಕಾಡು ಕೋಣಗಳ ಸದ್ದು ಸುತ್ತೆಲ್ಲಾ ಕೇಳಿಸುತ್ತೆ. ಚಿರತೆಗಳು ಇಲ್ಲೇ ಬಂದಿವೆಯೆಂಬ ಸುದ್ದಿ ಕಿವಿಗೆ ಬಿದ್ದರೂ, ಚಂದ್ರಮ್ಮ ಕಂಪಿಸುವುದಿಲ್ಲ. ಇದು ತಾನು ನಂಬಿಕೊಂಡು ಬಂದ ಕಾಡು. 29 ವರ್ಷಗಳಿಂದ ತನ್ನೊಳಗೆ ಉಸಿರಾಡುತ್ತಿರುವ ಕಾಡು, ಯಾವ ಕಾಡುಪ್ರಾಣಿಗಳ ಭಯವೇಕೆ?- ಎಂದುಕೊಂಡು ಧೈರ್ಯದಿಂದ ಉಸಿರುಬಿಡುತ್ತಾಳೆ. ಆ ದಿನದ ಉಳಿದ ಪೇರಳೆಗಳನ್ನು ಗಂಟು ಕಟ್ಟುತ್ತಾ, ಕಳಸದಿಂದ ಬರುವ ಬಸ್ಸಿಗೆ ಕೈಯೊಡ್ಡುತ್ತ, ಬಸ್ಸನ್ನೇರಿ, ಮನೆಯ ದಾರಿ ಹಿಡಿಯುತ್ತಾಳೆ.
ಕುದುರೆಮುಖ ಅನ್ನೋ ಮಾಯಾಸ್ವರ್ಗ, ಹೀಗೆ ಅಸಂಖ್ಯ ಬಡಮುಖಗಳನ್ನು, ಕಾರ್ಮಿಕರನ್ನು ಬದುಕಿಸಿದೆ, ನಡುಕಾಡಿನಲ್ಲೇ ನಿರ್ದಯವಾಗಿ ಮುಳುಗಿಸಿದೆ. ಚಿಂತೆಗಳನ್ನೆಲ್ಲ ಕರಗಿಸಿ, ಬದುಕುವ ಪಾಠಗಳನೂ ಹೇಳಿಕೊಟ್ಟಿದೆ. ಕಾಡಿನ ಆ ವಿದ್ಯಾರ್ಥಿಗಳಲ್ಲಿ, ಒಬ್ಬಳು ನಮ್ಮ ಚಂದ್ರಮ್ಮ.
* ಪ್ರಸಾದ್ ಶೆಣೈ ಆರ್.ಕೆ.