Advertisement

ಅಧಿವೇಶನ ದಿನದಂದೇ ಮತ್ತೇ ಎಂಇಎಸ್‌ ಮೇಳಾವ್‌ ಕಿತಾಪತಿ

06:55 AM Dec 09, 2018 | Team Udayavani |

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ಅಧಿವೇಶನದಂದೇ ಮರಾಠಿ ಮಹಾಮೇಳಾವ್‌ ಆಯೋಜಿಸುವ ಮೂಲಕ ಕ್ಯಾತೆ ತೆಗೆಯಲು ಮುಂದಾಗಿದೆ.

Advertisement

ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಗೆ ಬರುತ್ತಿರುವಾಗ ಒಂದಿಲ್ಲೊಂದು ನೆಪ ಮಾಡಿ ಜಗಳವಾಡುವ ಎಂಇಎಸ್‌, ಈ ಸಲವೂ ಮರಾಠಿ ಮಹಾಮೇಳಾವ್‌ಗೆ ಸಿದ್ಧತೆ ಮಾಡಿಕೊಂಡಿದೆ. ಹಳ್ಳಿ ಹಳ್ಳಿಗಳಲ್ಲಿ ಸಭೆ ನಡೆಸಿ ಮುಗ್ಧ ಮರಾಠಿಗರನ್ನು ಪ್ರಚೋದಿಸುವ ಕೆಲಸದಲ್ಲಿ ನಿರತವಾಗಿದೆ.

2006ರಿಂದ ಅಧಿವೇಶನದ ಮೊದಲ ದಿನವೇ ಪ್ರತಿ ವರ್ಷ ಮೇಳಾವ್‌ ನಡೆಸಿ ಕರ್ನಾಟಕ ಸರಕಾರದ ವಿರುದ್ಧ ಎಂಇಎಸ್‌ ಕೆಂಡ ಕಾರುತ್ತಿದೆ. ಅಧಿವೇಶನದಲ್ಲಿ ಕರ್ನಾಟಕ ಸರಕಾರ ಜನರ ಬೇಡಿಕೆಗಳಿಗೆ ಸ್ಪಂದಿಸಿ, ಆಸೆಗಳನ್ನು ಚಿಗುರಿಸುವ ಕೆಲಸ ಮಾಡುತ್ತಿದ್ದರೆ, ಅತ್ತ ಮರಾಠಿ ಮೇಳಾವ್‌ ಮೂಲಕ ಎಂಇಎಸ್‌ ಜನರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ, ಖಾನಾಪುರ ಸೇರಿ ವಿವಿಧ ಭಾಗಗಳಿಂದ ಮೇಳಾವ್‌ಗೆ ಜನ ಆಗಮಿಸುವ ಸಾಧ್ಯತೆ ಇದೆ.

ಮೇಳಾವ್‌ಗೆ ಮಹಾರಾಷ್ಟ್ರ ನಾಯಕರು:
ಮಹಾರಾಷ್ಟ್ರದ ರಾಜಕೀಯ ನಾಯಕರಿಗೆ ಆಹ್ವಾನ ನೀಡಿರುವ ಎಂಇಎಸ್‌ ಮುಖಂಡರು, ಮೇಳಾವ್‌ಗೆ ಬಂದು ಗಡಿ ಜಿಲ್ಲೆಯ ಮರಾಠಿ ಭಾಷಿಕರ ಸಮಸ್ಯೆಗೆ ಸ್ಪಂದಿಸಿ ಕೈ ಜೋಡಿಸಬೇಕು ಎಂದು ಆಹ್ವಾನ ನೀಡಿದ್ದಾರೆ. ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್‌(ಎನ್‌ಸಿಪಿ)ಬೀಡ ಕ್ಷೇತ್ರದ ಶಾಸಕ ಧನಂಜಯ ಮುಂಡೆ, ಕೊಲ್ಲಾಪುರ ಸಂಸದ ಧನಂಜಯ ಮಹಾಡಿಕ್‌, ಕಾಗಲ್‌ ಶಾಸಕ ಹಸನ್‌ ಮುಶ್ರಿಫ್‌, ಚಂದಗಡ ಶಾಸಕಿ ಸಂಧ್ಯಾ ಕುಪ್ಪೇಕರ, ಶಿವಸೇನೆ ರಾಜ್ಯ ಮುಖಂಡರು ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಮಹಾಮೇಳಾವ್‌ಗೆ ಆಹ್ವಾನಿಸಿ ವಿವಿಧ ಪೋಸ್ಟರ್‌, ಬ್ಯಾನರ್‌, ವಿಡಿಯೋ ಕ್ಲಿಪ್‌ಗ್ಳು, ಘೋಷವಾಕ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಜಿಲ್ಲಾಡಳಿತ ಎಂಇಎಸ್‌ ಮುಖಂಡರಿಗೆ ಮಹಾಮೇಳಾವ್‌ ನಡೆಸುವ ಮಾರ್ಗ ಬಗ್ಗೆ ಮಾಹಿತಿ ನೀಡಿದೆ. ತಯಾರಿ ನಡೆಸುವಂತೆ ಪ್ರಾಥಮಿಕವಾಗಿ ಮುನ್ಸೂಚನೆ ನೀಡಿದೆ. ಆದರೆ, ಮೇಳಾವ್‌ಗೆ ಇನ್ನೂ ಅಧಿಕೃತವಾಗಿ ಅನುಮತಿ ನೀಡಿಲ್ಲ. ಬಹುತೇಕ ಭಾನುವಾರ ರಾತ್ರಿವರೆಗೆ ಶರತ್ತುಗಳನ್ನು ವಿಧಿಸಿ ಅನುಮತಿ ನೀಡುವ ಸಾಧ್ಯತೆಯಿದೆ.

Advertisement

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆದೇ ಇದೆ. ಮರಾಠಿ ಭಾಷಿಕರ ವಿರೋಧದ ಮಧ್ಯೆಯೂ ಕರ್ನಾಟಕ ಸರಕಾರ ಅಧಿವೇಶನ ನಡೆಸುತ್ತಿದೆ. ಹೀಗಾಗಿ ಇದಕ್ಕೆ ಪ್ರತಿಯಾಗಿ ಮೇಳಾವ್‌ ನಡೆಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ.
– ಮಾಲೋಜಿರಾವ್‌ ಅಷ್ಟೇಕರ, ಎಂಇಎಸ್‌ ಮುಖಂಡ.

– ಭೈರೋಬಾ ಕಾಂಬಳೆ
 

Advertisement

Udayavani is now on Telegram. Click here to join our channel and stay updated with the latest news.

Next