ಚಿಕ್ಕಬಳ್ಳಾಪುರ: ನರ್ಸ್‌ಗಳ ಸೇವೆ ಶ್ರೇಷ್ಠವಾದದ್ದು. ತನ್ನ ಸಂವೇದನಾಶೀಲ ಶೂಶ್ರೂಷೆಯಿಂದ ತಾಯಿಯಾಗಿ ಧನ್ಯತೆ ಪಡೆಯುತ್ತಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ತಾಲೂಕಿನ ಪೆರೇಸಂದ್ರದ ಗ್ರಾಮದಲ್ಲಿ ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ಆರಂಭವಾಗಿರುವ ಶಾಂತಾ ನರ್ಸಿಂಗ್ ಕಾಲೇಜು ತರಗತಿಗೆ ಚಾಲನೆ ನೀಡಿ ಮಾತನಾಡಿ, ನರ್ಸ್‌ಗಳ ಸೇವೆ ದೇವರ ಪೂಜೆಗಿಂತ ಮಿಗಿಲಾದ್ದು. ಮನುಕುಲದಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಎಂದು ಪರಿಗಣಿಸಲ್ಪಟ್ಟಿದೆ ಎಂದು ಹೇಳಿದರು. ಪ್ರಸ್ತುತ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ನಮ್ಮ ದೇಶದ ನರ್ಸ್‌ಗಳಿಗೆ ತುಂಬಾ ಬೇಡಿಕೆ ಇದೆ.
ಕೊರೊನಾ ಸಂದರ್ಭದಲ್ಲಿ ತಮ್ಮ ಜೀವನದ ಹಂಗು ತೊರೆದು ಸೋಂಕಿತರ ಶೂಶ್ರೂಷೆ ಮಾಡಿರುವ ನರ್ಸ್‌ಗಳಿಗೆ ನಾವು ಸಲಾಮ್ ಹೇಳಬೇಕು ಎಂದರು. ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನ ಸಹಾಯಕ ನಿರ್ದೇಶಕಿ, ಪ್ರಭಾರ ರಿಜಿಸ್ಟ್ರಾರ್ ಉಷಾಬಂಡಾರಿ ಅವರು, ನರ್ಸಿಂಗ್ ವೃತ್ತಿಯ ಹಿರಿಮೆ ಹಾಗೂ ಪ್ರಾಮುಖ್ಯತೆ ಬಗ್ಗೆ ಬೆಳಕು ಚೆಲ್ಲಿದರು. ನರ್ಸ್‌ಗಳಾಗುವವರಿಗೆ ಬುದ್ಧಿಗಿಂತ ಹೆಚ್ಚಿನ ಕೌಶಲ್ಯಗಳು ಹಾಗೂ ಹೃದಯ ಸಂವೇದನೆ ಇರಬೇಕು. ಆಗ ಮಾತ್ರ ಈ ವೃತ್ತಿಗೆ ಧನ್ಯತೆ ಬರುತ್ತದೆ ಎಂದರು.
ನಿಮ್ಮ ಸಹನಾಶೀಲ ಶುಶ್ರೂಷೆಯಿಂದ ರೋಗಿಗಳು ಬದುಕುಳಿಯುತ್ತಾರೆ. ಅಂತಹ ಭರವಸೆ ಹುಟ್ಟಿಸುವ ಕಾರ್ಯ ನಿಮ್ಮದಾಗಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಹಾಗೂ ಶೈಕ್ಷಣಿಕ ಸಲಹೆಗಾರ ಡಾ.ಕೋಡಿರಂಗಪ್ಪ, ಪ್ರೊ.ಹನುಮಂತರೆಡ್ಡಿ, ಸಿ.ನಾಗರಾಜ್, ದೀಪಕ್ ಮ್ಯಾಥ್ರೂ, ಪ್ರಾಂಶುಪಾಲ ನವೀನ್, ವಿದ್ಯಾರ್ಥಿಗಳು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.