ಎಚ್.ಡಿ.ಕೋಟೆ: ಸ್ವಾತಂತ್ರ್ಯ ಬಂದು 80 ದಶಕಕ್ಕೆ ಕಾಲಿಟ್ಟರೂ ಇಂದಿನ ವೈಜ್ಞಾನಿಕ ಯುಗದಲ್ಲೂ ಸಮಾಜದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಸಾರ್ವಜನಿಕ ಬದುಕಿಗೆ ನೆಮ್ಮದಿಗೆ ಭಂಗವುಂಟಾಗುತ್ತಿದ್ದು ಪರಕೀಯ ರಾಗ ದ್ವೇಷಗಳು ಹೆಚ್ಚಾಗುತ್ತಿದೆ. ಸ್ವಾರ್ಥ ಭಾವನೆ ಎಲ್ಲ ಕಡೆ ಬೇರೂರಿದ್ದು ಐಕ್ಯತೆ ಸಾರುವ ಸ್ವಾವಲಂಬಿ ಜೀವನ ದೂರಾಗುತ್ತಿದೆ ಎಂದು ತಹಶೀಲ್ದಾರ್ ಎಂ.ನಂಜುಂಡಯ್ಯ ಕಳವಳ ವ್ಯಕ್ತ ಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 71ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯು ದೇಶ ಕಾಯುವ ಯೋಧರಿಗೆ ಮನೋಧೈರ್ಯ ತುಂಬುವ ನಿಟ್ಟಿನಲ್ಲಿ ಯೋಧ, ತಂದೆ ತಾಯಿಯನ್ನು ಗೌರವಿಸಿ ಎಂದರು.
ನಾ ಆ ಜಾತಿ ಇವನು ಆ ಧರ್ಮ ಎಂಬುದನ್ನು ಬದಿಗೊತ್ತಿ ದೇಶದ ಅಭಿವೃದ್ಧಿ ದೃಷ್ಟಿಯಿಂದ ನನ್ನ ಮನೆ, ನನ್ನ ಜಾತಿ, ಧರ್ಮ ಎನ್ನದೆ, ನನ್ನ ದೇಶ, ನನ್ನ ಭಾಷೆ ಎಂದು ಸಂಕಲ್ಪ ಮಾಡಿ ದೇಶದ ಅಭಿವೃದ್ಧಿಗೆ ಕೈಜೋಡಿಸುವ ನಿಟ್ಟಿನಲ್ಲಿ ಚಿಂತಿಸಿ ರೂಪಿಸಿ ಭವ್ಯ ಭಾರತ ನಿರ್ಮಾಣಕ್ಕೆ ಐಕ್ಯತೆ ಭಾವನೆಯಿಂದ ಮುನ್ನಡೆಯೋಣ ಎಂದು ತಿಳಿಸಿದರು.
ಪಟ್ಟಣ ಆದಿಚುಂಚನಗಿರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸ್ವಾಮಿನಾಯ್ಕ ಮಾತನಾಡಿ, ಇಡೀ ಭಾರತ ದೇಶ ತನ್ನದೆ ಆದ ಬಹು ದೊಡ್ಡ ಪೌರಾಣಿಕ ಇತಿಹಾಸ ಹೊಂದಿದ್ದು, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಂದು ದೇಶದ್ಯಾಂತ ಸಾಕಷ್ಟು ಸಮಸ್ಯೆಗಳಿದ್ದು, ಇನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಾಮಾಜಿಕ ನ್ಯಾಯ ಸಮ್ಮತವಾಗಿ ಬದುಕುವ ಸ್ವಾತಂತ್ರ್ಯ ಸಿಕ್ಕಲ್ಲ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ಯೋಧರಾದ ತಾಲೂಕಿನ ಹಳೆಹೆಗ್ಗುಡಿಲು ಗ್ರಾಮದ ರಾಜೇಶ್, ಚೌಡಳ್ಳಿ ಗ್ರಾಮದ ಜಿ.ಡಿ.ಗೋವಿಂದಯ್ಯ, ಪಟ್ಟಣದ ಧರಣೀಶ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಫರ್ವಿಜ್ ಕರೀಂವುಲ್ಲಾ ಹಾಗೂ ಯಕ್ಷಗಾನ ಕಲಾವಿದ ತಾಲೂಕಿನ ಕೊಳಗಾಲದ ಕೆ.ಪಿ.ಸಿದ್ದಪ್ಪ ಅವರುಗಳನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲೂಕಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳು ದೇಶ ಪ್ರೇಮ ಸಂದೇಶ ಸಾರುವ ಗೀತೆಗಳಿಗೆ ನರ್ತಿಸಿ ಕುಣಿದು ಕುಪ್ಪಳಿಸಿದರು.
ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ, ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಗಿರಿಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಭುಗೌಡ, ಮಾಜಿ ಪ್ರಧಾನ ಎಂ.ಸಿ.ದೊಡ್ಡನಾಯ್ಕ, ನರಸಿಂಹೇಗೌಡ, ತಹಶೀಲ್ದಾರ್ ಎಂ.ನಂಜುಂಡಯ್ಯ, ತಾಪಂ ಇಒ ಶ್ರೀಕಂಠರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕರೀಂವುಲ್ಲಾ, ವೃತ್ತ ನಿರೀಕ್ಷಕ ಹರೀಶ್ ಕುಮಾರ್, ಪಿಎಸೈ ಸುರಶ್ ಕುಮಾರ್, ಅಶೋಕ್ ಇತರರು ಇದ್ದರು.