ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಮಾ.4 ರಿಂದ ಆರಂಭಗೊಂಡು 23ಕ್ಕೆ ಕೊನೆಗೊಳ್ಳಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಈ ವರ್ಷ ಜಿಲ್ಲೆಯಲ್ಲಿ ಒಟ್ಟು 11,331 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಈಗಾಗಲೇ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಕ್ತಾಯದ ಹಂತ ತಲುಪಿದ್ದು, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೂ ಪೂರ್ವ ಸಿದ್ಧತಾ ಪರೀಕ್ಷೆ ಪೂರ್ಣಗೊಳಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ವಾರ್ಷಿಕ ಪರೀಕ್ಷೆಗೆ ಸಜ್ಜುಗೊಂಡಿದೆ.
ಜಿಲ್ಲೆಯಲ್ಲಿ ಈ ವರ್ಷ ಹೊಸದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 11,331 ವಿದ್ಯಾರ್ಥಿಗಳು ಬರೆದರೆ, ಖಾಸಗಿಯಾಗಿ 273 ವಿದ್ಯಾರ್ಥಿಗಳು ಹಾಗೂ ಪುನರಾವರ್ತನೆಯ ಒಟ್ಟು 1,613 ವಿದ್ಯಾರ್ಥಿಗಳು ಸೇರಿ ಒಟ್ಟು 13,217 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 6,496 ಬಾಲಕರು ಹಾಗೂ 6,721 ವಿದ್ಯಾರ್ಥಿಗಳು ಬಾಲಕಿಯರು ಸೇರಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 2,166, ವಾಣಿಜ್ಯ ವಿಭಾಗದಲ್ಲಿ 6,374, ವಿಜ್ಞಾನ ವಿಭಾಗದಲ್ಲಿ ಒಟ್ಟು 4,677 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
22 ಪರೀಕ್ಷಾ ಕೇಂದ್ರ: ಜಿಲ್ಲಾದ್ಯಂತ ಪಾರದರ್ಶಕ ಹಾಗೂ ಸುಗಮವಾಗಿ ನಡೆಸಲು ಒಟ್ಟು 22 ಕೇಂದ್ರಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿರುವ ಚಿಕ್ಕಬಳ್ಳಾಪುರ ಹಾಗೂ ಚಿಂತಾಮಣಿಯಲ್ಲಿ ತಲಾ ಆರು ಕೇಂದ್ರಗಳನ್ನು ತೆರೆದಿರುವುದು ಬಿಟ್ಟರೆ ಉಳಿದಂತೆ ಬಾಗೇಪಲ್ಲಿ 3, ಶಿಡ್ಲಘಟ್ಟ 2, ಗೌರಿಬಿದನೂರು 4 ಹಾಗೂ ಗುಡಿಬಂಡೆ ಪಟ್ಟಣದಲ್ಲಿ 1 ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಎಂ.ಸೀತಾರಾಮರೆಡ್ಡಿ ತಿಳಿಸಿದರು.
ಖಾಸಗಿ ಕಾಲೇಜು ವಿದ್ಯಾರ್ಥಿಗಳು ಜಾಸ್ತಿ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ 3,724 ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಅನುದಾನಿತ ಕಾಲೇಜು 927 ಹಾಗೂ ಖಾಸಗಿ ಕಾಲೇಜುಗಳಲ್ಲಿ ಒಟ್ಟು 7,792 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಈಗಾಗಲೇ ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಇರುವಂತೆ ಸೂಚಿಸಲಾಗಿದೆ.
ಇಂದು ಡೀಸಿ ಅಧ್ಯಕ್ಷತೆಯಲ್ಲಿ ಸಭೆ: ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸುವ ಉದ್ದೇಶದಿಂದ ಫೆ.20 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ಆಯೋಜಿಸಿದ್ದಾರೆ. ಜಿಲ್ಲಾಡಳಿತದ ಮಾರ್ಗದರ್ಶನದಂತೆ ಪ್ರಶ್ನೆ ಪತ್ರಿಕೆಗಳ ದಾಸ್ತನು, ಭದ್ರತೆ, ಪರೀಕ್ಷಾ ಕೇಂದ್ರಗಳಿಗೆ ಸಾಗಾಟ, ಪರೀಕ್ಷಾ ಕೇಂದ್ರಗಳಿಗೆ ಅಧೀಕ್ಷಕರ ನೇಮಕ, ಜಾಗೃತ ದಳ ರಚನೆಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಒಟ್ಟು 22 ಪರೀಕ್ಷಾ ಕೇಂದ್ರಗಳು
ತಾಲೂಕು ಪರೀಕ್ಷಾ ಕೇಂದ್ರ
ಚಿಂತಾಮಣಿ 0 6
ಚಿಕ್ಕಬಳ್ಳಾಪುರ 06
ಬಾಗೇಪಲ್ಲಿ 3
ಗೌರಿಬಿದನೂರು 4
ಗುಡಿಬಂಡೆ 1
ಶಿಡ್ಲಘಟ್ಟ 2
ಪರೀಕ್ಷಾ ವೇಳಾ ಪಟ್ಟಿ
ದಿನಾಂಕ ವಿಷಯ
ಮಾ.04 ಇತಿಹಾಸ, ಭೌತಶಾಸ್ತ್ರ
ಮಾ.07 ವಾಣಿಜ್ಯಶಾಸ್ತ್ರ, ಸಮಾಜಶಾಸ್ತ್ರ, ರಾಸಯನಶಾಸ್ತ್ರ
ಮಾ.09 ಪ್ರಾಣಿಶಾಸ್ತ್ರ
ಮಾ.11 ಐಚ್ಛಿಕ ಕನ್ನಡ, ಗಣಿತ, ಲೆಕ್ಕಶಾಸ್ತ್ರ
ಮಾ.12 ಭೂಗೋಳಶಾಸ್ತ್ರ
ಮಾ.16 ಭೂಗರ್ಭಶಾಸ್ತ್ರ
ಮಾ.17 ಅರ್ಥಶಾಸ್ತ್ರ, ಜೀವಶಾಸ್ತ್ರ.
ಮಾ.19 ಕನ್ನಡ
ಮಾ.21 ರಾಜ್ಯಶಾಸ್ತ್ರ
ಮಾ.23 ಇಂಗ್ಲಿಷ್
* ಒಟ್ಟು ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು 13,217
* ಹೊಸದಾಗಿ ಪರೀಕ್ಷೆ ಬರೆಯುವವರು 11,331
* ಖಾಸಗಿಯಾಗಿ ಪರೀಕ್ಷೆ ಬರೆಯುವರು 273
* ಪುನಾರವರ್ತನೆ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 1,613
* ಜಿಲ್ಲೆಯಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳ ಸ್ಥಾಪನೆ
* ಕಾಗತಿ ನಾಗರಾಜಪ್ಪ