ಬೆಂಗಳೂರು: ಕೋವಿಡ್ ಸೋಂಕು ಪ್ರಕರಣಗಳು ನಿರಂತರ ಏರಿಕೆ ಪರಿಣಾಮ ಪ್ರಸ್ತುತ ದೇಶದಲ್ಲಿಯೇ ಅತಿ ಹೆಚ್ಚು ಸೋಂಕಿತರಿರುವ ನಗರಗಳ ಪೈಕಿ ರಾಜಧಾನಿಯ ಬೆಂಗಳೂರು ಎರಡನೇ ಸ್ಥಾನಕ್ಕೇರಿದೆ.
ಸದ್ಯ ಪುಣೆ ಹೊರತು ಪಡಿಸಿದರೆ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು 40,929 ಸೋಂಕಿತರು ಇಂದಿಗೂ ಚಿಕಿತ್ಸೆ ಆರೈಕೆಯಲ್ಲಿದ್ದಾರೆ. ಅಲ್ಲದೆ, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿಯೂ ಪುಣೆ, ದೆಹಲಿ ನಂತರ ಮೂರನೇ ಸ್ಥಾನದಲ್ಲಿ ಬೆಂಗಳೂರಿದೆ.
ರಾಜ್ಯಕ್ಕೆ ಸೋಂಕು ಕಾಲಿಟ್ಟು ಮೂರು ತಿಂಗಳಾದರೂ (ಮಾರ್ಚ್9-ಜೂನ್ 9) ನಗರದ ಸೋಂಕು ಪ್ರಕರಣಗಳು 600 ಇದ್ದವು. ಈ ಮೂಲಕ ದೇಶದ ಇತರೆ ಮಹಾನಗರಗಳಿಗೂ ಬೆಂಗಳೂರು ಮಾದರಿಯಾಗಿತ್ತು. ಆ ಬಳಿಕ ನಗರದಲ್ಲಿ ರ್‍ಯಾಂಡಮ್ ಪರೀಕ್ಷೆ, ಸಮುದಾಯ ಪರೀಕ್ಷೆ ಆರಂಭವಾದವು, ಜತೆಗೆ ಹೊರರಾಜ್ಯ-ಹೊರದೇಶದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಇದರಿಂದ ಸೋಂಕು ಪ್ರಕರಣಗಳು ತೀವ್ರಗೊಂಡಿದ್ದು, ಇಂದಿಗೂ ಏರಿಕೆ ಹಾದಿಯಲ್ಲೆ ಸಾಗಿವೆ. ಜುಲೈ 29 ರಂದು 50 ಸಾವಿರ, ಆ. 21ಕ್ಕೆ ಒಂದು ಲಕ್ಷ, ಸೆ. 7ಕ್ಕೆ ಒಂದೂವರೆ ಲಕ್ಷ ಗಡಿದಾಟಿದವು. ಶನಿವಾರದ ಅಂತ್ಯಕ್ಕೆ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 1.67 ಲಕ್ಷಕ್ಕೆ ಏರಿಕೆಯಾಗಿದೆ.
ಸೋಂಕಿತರ ಸಾವಿನಲ್ಲಿ ಆರನೇ ಸ್ಥಾನ: ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದೆ. ಮೊದಲ ಐದು ಸ್ಥಾನದಲ್ಲಿ ಕ್ರಮವಾಗಿ ಮುಂಬೈ, ಪುಣೆ, ಥಾಣೆ, ದೆಹಲಿ, ಚೆನ್ನೈ ಇದೆ. ಸದ್ಯ ಬೆಂಗಳೂರಿಲ್ಲಿ ಈವರೆಗೂ 2391 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.ಎರಡನೇ ಅತಿ ಹೆಚ್ಚು ಪರೀಕ್ಷೆಗಳು: ದೆಹಲಿ ಹೊರತು ಪಡಿಸಿದರೆ ಅತಿ ಹೆಚ್ಚು ಸೋಂಕು ಪರೀಕ್ಷೆಗಳು ಬೆಂಗಳೂರಿನಲ್ಲಿ ನಡೆದಿವೆ. ದೆಹಲಿಯಲ್ಲಿ 21 ಲಕ್ಷ ,ಬೆಂಗಳೂರಿನಲ್ಲಿ 11.8 ಲಕ್ಷ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ಇನ್ನು ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ 14.09 ರಷ್ಟಿದೆ. ಅಂದರೆ ಸೋಂಕು ಪರೀಕ್ಷೆಗೊಳಗಾದ 100 ಮಂದಿಯಲ್ಲಿ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ನಗರದಲ್ಲಿ 3552 ಮಂದಿಗೆ ಸೋಂಕು : ರಾಜಧಾನಿಯಲ್ಲಿ ಶನಿವಾರ ಹೊಸದಾಗಿ 3,552 ಮಂದಿಗೆ ಸೋಂಕು ತಗುಲಿದ್ದರೆ, 21 ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 3,538 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರಕ್ಕೆ ಸೋಂಕು ಪ್ರಕರಣಗಳು 126 ಪ್ರಕರಣಗಳು ಹೆಚ್ಚಳವಾಗಿವೆ. ಇನ್ನು ಗುಣಮುಖರ ಸಂಖ್ಯೆ ಅರ್ಧದಷ್ಟು ಕುಸಿದಿದೆ. ಅಂತೆಯೇ ಸೋಂಕಿತರ ಸಾವುಕೂಡಾ 9 ಇಳಿಕೆಯಾಗಿದೆ. ಸೋಂಕು ಪರೀಕ್ಷೆಗಳ ಸಂಖ್ಯೆ 24 ಸಾವಿರದಿಂದ 30 ಸಾವಿರಕ್ಕೆ ಏರಿಕೆಯಾಗಿದೆ. ಸದ್ಯ 40,929 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 278 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಮನೆಯಲ್ಲಿ 16 ಸಾವಿರ ಮಂದಿ ಆರೈಕೆಯಲ್ಲಿದ್ದಾರೆ.