Advertisement

ತುಂಗಭದ್ರಾ ಜಲಾಶಯದಲ್ಲಿ ತುಂಬಿದೆ ಹೂಳು, ಬರಿದಾಗಿದೆ ಒಡಲು

11:26 PM May 11, 2019 | Lakshmi GovindaRaj |

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರೆಯ ಒಡಲು ದಿನೇದಿನೆ ಬರಿದಾಗುತ್ತಿದೆ. ಕಳೆದ ಎರಡು ದಶಕಗಳಲ್ಲಿ ಬಹುತೇಕ ವರ್ಷ ಹಿಂಗಾರು ಬೆಳೆಗೆ ಜಲಾಶಯದಿಂದ ನೀರು ಸಿಕ್ಕಿಲ್ಲ. ಈ ಬಾರಿಯೂ ಜೂನ್‌ ಮಧ್ಯದೊಳಗೆ ಸಮರ್ಪಕ ಮಳೆಯಾಗದಿದ್ದರೆ ರೈತರು ಸಂಕಷ್ಟ ಎದುರಿಸೋದು ಗ್ಯಾರಂಟಿ. ಜಲಾಶಯವನ್ನೇ ನಂಬಿರುವ ಜಿಲ್ಲೆಗಳಲ್ಲಿ ಕುಡಿವ ನೀರಿಗೂ ಹಾಹಾಕಾರ ಉಂಟಾದರೂ ಆಶ್ಚರ್ಯವಿಲ್ಲ.

Advertisement

ತುಂಗಭದ್ರಾ ಜಲಾಶಯ ಕರ್ನಾಟಕ-ಆಂಧ್ರ-ತೆಲಂಗಾಣ ರಾಜ್ಯಗಳ 6 ಜಿಲ್ಲೆಗಳ ಒಟ್ಟು 12 ಲಕ್ಷ ಹೆಕ್ಟೇರ್‌ ಕೃಷಿ ಜಮೀನಿಗೆ ಹಾಗೂ ಈ ಭಾಗದ ಜನ-ಜಾನುವಾರುಗಳಿಗೆ ನೀರಿನ ಮೂಲ. ಆದರೆ, ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ನೀರಿನ ಸಂಗ್ರಹ ಸಾಮರ್ಥ್ಯ ದಿನೇದಿನೆ ಕುಸಿಯುತ್ತಿದೆ. ಪರಿಣಾಮ, ಮುಂಗಾರು ಬೆಳೆಗೆ ನೀರು ಸಿಕ್ಕರೂ, ಜಲಾಶಯದ ನೀರು ನಂಬಿ ಹಿಂಗಾರು ಬೆಳೆ ಬೆಳೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. 2002, 2003, 2004, 2015, 2016, 2017, 2018 ಹೀಗೆ ಬಹುತೇಕ ವರ್ಷಗಳಲ್ಲಿ ಹಿಂಗಾರು ಬೆಳೆಗೆ ನೀರು ಹರಿಸಲಾಗಿಲ್ಲ.

ಕಳೆದ ವರ್ಷ ಜೂನ್‌ ಮೊದಲ ವಾರದಲ್ಲೇ ಮುಂಗಾರು ಆರಂಭವಾಗಿ ಜಲಾಶಯಕ್ಕೆ 360 ಟಿಎಂಸಿ ನೀರು ಹರಿದು ಬಂದಿತ್ತು. ಅವಧಿ ಗೆ ಮುನ್ನವೇ ಜಲಾಶಯ ಭರ್ತಿಯಾಗಿತ್ತು. ಆದರೆ, ಹೂಳಿನ ಸಮಸ್ಯೆಯಿಂದಾಗಿ 240 ಟಿಎಂಸಿಯಷ್ಟು ನೀರನ್ನು ನದಿಗೆ ಹರಿಸಲಾಯಿತು. ಜತೆಗೆ, ನಿಗದಿತ ಅವ ಧಿಯಲ್ಲಿ ಎಡ, ಬಲದಂಡೆ, ವಿಜಯನಗರ ಕಾಲುವೆಗಳಿಗೆ ನೀರು ಹರಿಸಲಾಯಿತು.

ಇದರಿಂದ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಯಿತು. ಆದರೆ, ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಜಲಾಶಯದಲ್ಲೂ ನೀರಿನ ಸಂಗ್ರಹ ಸಾಮರ್ಥ್ಯ ಕುಸಿಯಿತು. ಎರಡನೇ ಬೆಳೆಗೆ ನೀರು ಸಿಗಲಿಲ್ಲ. ರೈತರ ಒತ್ತಡದ ಮೇರೆಗೆ ಕೇವಲ ಬೆಳೆದು ನಿಂತಿದ್ದ ಭತ್ತ ಹಾಗೂ ಇತರ ಬೆಳೆಗಳಿಗಷ್ಟೇ ನೀರು ಪೂರೈಸಲಾಯಿತು.

ತುಂಗಭದ್ರಾ ಜಲಾಶಯ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ 9 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸಲಿದೆ. ನಿಯಮದ ಪ್ರಕಾರ ಕೇವಲ 50 ರಿಂದ 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಷ್ಟೇ ಭತ್ತ ಬೆಳೆಯಲು ಅವಕಾಶವಿದ್ದು, ಇನ್ನುಳಿದ ಪ್ರದೇಶದಲ್ಲಿ ಕಡಿಮೆ ನೀರು ಬೇಡುವ ಬೆಳೆ ಬೆಳೆಯಬೇಕು. ಆದರೆ, ಮೂರೂ ಜಿಲ್ಲೆಗಳ ರೈತರು ಭತ್ತವನ್ನೇ ನೆಚ್ಚಿಕೊಂಡಿದ್ದು, ಭತ್ತ ಬೆಳೆಯುವ ವ್ಯಾಪ್ತಿ ಆರೇಳು ಪಟ್ಟು ಹೆಚ್ಚಾಗಿದೆ. ಹೀಗಾಗಿ, ಎರಡನೇ ಬೆಳೆ ಬೆಳೆಯಲು ಜಲಾಶಯದಿಂದ ನೀರು ದೊರಕುತ್ತಿಲ್ಲ.

Advertisement

ರಾಯಚೂರಿಗೆ ಸಂಕಷ್ಟ ತಪ್ಪಿದ್ದಲ್ಲ: ಈ ಮಧ್ಯೆ, ಈ ಮೂರೂ ಜಿಲ್ಲೆಗಳ ಜನರಿಗೆ ಕುಡಿಯುವ ಸಲುವಾಗಿ ನೀರು ಹರಿಸಿ, ಸಂಬಂಧಪಟ್ಟ ಕೆರೆಗಳಲ್ಲಿ ತುಂಬಿಸಿಡಲಾಗಿದೆ. ಅಗತ್ಯ ಬಿದ್ದರೆ ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಗೆ ಕುಡಿವ ನೀರಿನ ಸಲುವಾಗಿ ತಲಾ 200 ಕ್ಯೂಸೆಕ್‌ ನೀರು ಹರಿಸಬಹುದು. ಆದರೆ, ರಾಯಚೂರು ಜಿಲ್ಲೆಗೆ ತೊಂದರೆಯಾಗಲಿದೆ. ಕಾಲುವೆಗೆ ನೀರು ಹರಿಸಿದರೂ ರಾಯಚೂರು ಜಿಲ್ಲೆಗೆ ತಲುಪುವುದು ಕಷ್ಟ. ಜೂನ್‌ ತಿಂಗಳಲ್ಲಿ ಮಳೆಯಾಗದಿದ್ದರೆ ಮೂರೂ ಜಿಲ್ಲೆಗಳಲ್ಲೂ ಕುಡಿವ ನೀರಿಗೆ ಸಮಸ್ಯೆ ತಲೆದೋರಲಿದೆ.

3.44 ಟಿಎಂಸಿ ನೀರು ಸಂಗ್ರಹ: ಜಲಾಶಯದಲ್ಲಿ ಸದ್ಯ 3.44 ಟಿಎಂಸಿ ನೀರಿನ ಸಂಗ್ರಹವಿದೆ. 212 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದ್ದು, ನೀರಿನ ಮಟ್ಟ 1577.95 ಅಡಿಗಳಷ್ಟಿದೆ. ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 3.14 ಟಿಎಂಸಿ ನೀರಿನ ಸಂಗ್ರಹವಿತ್ತು. 1,600 ಕ್ಯೂಸೆಕ್‌ ಹೊರಹರಿವು ಇತ್ತು. ನೀರಿನ ಮಟ್ಟ 1577.95 ಅಡಿಗಳಷ್ಟಿತ್ತು. ಕಳೆದ ವರ್ಷವೂ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸದ್ಯ ಜಲಾಶಯದಲ್ಲಿ ಬಹುತೇಕ ಕಳೆದ ಬಾರಿಯಷ್ಟೇ ನೀರಿನ ಸಂಗ್ರಹವಿದೆ. ಮೇ ಕೊನೆಯವರೆಗೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಿದರೂ, ಅರ್ಧ ಟಿಎಂಸಿಯಷ್ಟು ನೀರು ಖಾಲಿಯಾಗಲಿದೆ.

ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜಿಲ್ಲಾ ಧಿಕಾರಿಗಳ ಆದೇಶದ ಮೇರೆಗೆ ಮೂರೂ ಜಿಲ್ಲೆಗಳ ಕುಡಿಯುವ ನೀರಿಗಾಗಿ ಜಲಾಶಯದಿಂದ ಈಗಾಗಲೇ ನೀರು ಹರಿಸಲಾಗಿದೆ. ಆಯಾ ಜಿಲ್ಲೆಗಳ ಕೆರೆಗಳು ಭರ್ತಿಯಾಗಿವೆ. ಮೇ ಕೊನೆಯವರೆಗೆ ಕುಡಿಯುವ ನೀರಿಗೆ ಸಮಸ್ಯೆಯಿಲ್ಲ. ಮಳೆ ಬರುವ ನಿರೀಕ್ಷೆಯೂ ಇದೆ.
-ಮಂಜಪ್ಪ, ಮುಖ್ಯ ಎಂಜಿನಿಯರ್‌, ಮುನಿರಾಬಾದ್‌ ನೀರಾವರಿ ನಿಗಮ, ತುಂಗಭದ್ರಾ ಜಲಾಶಯ.

* ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next