Advertisement

ನಿಮ್ಮ ಮಗು ಪ್ರಯಾಣಿಸುವ ಶಾಲಾ ವಾಹನ ಅಸುರಕ್ಷಿತ!

12:14 PM Sep 03, 2018 | |

ಸೂರ್ಯನಿಗಿಂತ ಮೊದಲೇ ಎದ್ದು, ಮಕ್ಕಳನ್ನು ರೆಡಿ ಮಾಡಿ, ಮುಖ್ಯ ರಸ್ತೆವರೆಗೂ ಕೈ ಹಿಡಿದು ಕರೆದೊಯ್ಯುವ ಪೋಷಕರು, ಮಕ್ಕಳನ್ನು ಶಾಲಾ ವಾಹನ ಹತ್ತಿಸಿ, “ಮಗು ಸುರಕ್ಷಿತವಾಗಿ ಶಾಲೆ ಸೇರುತ್ತದೆ’ ಎಂಬ ಸಮಾಧಾನದಿಂದ ಮನೆಗೆ ಮರಳುತ್ತಾರೆ. ಆದರೆ, ತಮ್ಮ ಮಗು ಕುರಿ ಸಾಗಿಸುವ ವಾಹನದಲ್ಲಿದ್ದಾನೆ, ಅಲ್ಲಿ ಆತ ಕಿಂಚಿತ್ತೂ ಸುರಕ್ಷಿತವಲ್ಲ ಎಂಬ ಅರಿವೇ ಅವರಿಗೆ ಇರುವುದಿಲ್ಲ. ಏಕೆಂದರೆ, ನಗರದಲ್ಲಿ ಸಂಚರಿಸುವ ಬಹುತೇಕ ಶಾಲಾ ವಾಹನಗಳಲ್ಲಿ ಸುರಕ್ಷತಾ ನಿಯಮ ಪಾಲನೆಯಾಗುತ್ತಿಲ್ಲ. ಚಾಲನೆ ಅನುಭವವಿಲ್ಲದ, ಹಗಲಲ್ಲೇ ಕುಡಿದು ವಾಹನ ಓಡಿಸುವ ಚಾಲಕರ ಕೈಗಳಲ್ಲಿ ನಾಡಿನ ಭವಿಷ್ಯದ ಕುಡಿಗಳು ನರಳುತ್ತಿದ್ದಾರೆ.

Advertisement

ಬೆಂಗಳೂರು: ಕುರಿಗಳನ್ನು ಹಿಡಿದು ತುಂಬಿದಂತಿರುವ ವಾಹನಗಳು, ಅವುಗಳ ದ್ವಾರಗಳಲ್ಲಿ ಮೂಟೆಗಳಂತೆ ಜೋತುಬಿದ್ದ ಬ್ಯಾಗ್‌ಗಳು, ಒಳಗೆ ಉಸಿರುಗಟ್ಟಿತೆಂದು ಕಿಟಕಿಗಳಲ್ಲಿ ಇಣುಕಿರುವ ಮುಖಗಳು, ತಿರುವಿನಲ್ಲಿ ಹೊರಟರೆ ವಾಹನವೇ ಪಲ್ಟಿ ಹೊಡೆಯುತ್ತಿದೆಯೇನೋ ಎಂಬ ಆತಂಕ…

-ಇದು ಯಾವುದೋ ಕುಗ್ರಾಮಕ್ಕೆ ಜನರನ್ನು ಹೊತ್ತೂಯ್ಯುತ್ತಿರುವ ಕೊನೆಯ ಬಸ್‌ ಅಲ್ಲ. ರಾಜ್ಯ ರಾಜಧಾನಿಯಲ್ಲಿ ದೇಶದ ಭವಿಷ್ಯವನ್ನು ನಿತ್ಯ ಹೊತ್ತೂಯ್ಯುವ ಶಾಲಾ ವಾಹನಗಳ ಚಿತ್ರಣ. ಇದು ಒಂದೆರಡು ವಾಹನಗಳ ಕಥೆಯಲ್ಲ, ನಗರದಲ್ಲಿನ ಸಾವಿರಾರು ಸ್ಕೂಲ್‌ ಬಸ್‌ಗಳ ಅಪಾಯಕಾರಿ ಸ್ಥಿತಿ.
ಮಕ್ಕಳು ದೇಶದ ಆಸ್ತಿ.

ಅವರ ಸುರಕ್ಷತೆ ದೃಷ್ಟಿಯಿಂದ ಸ್ವತಃ ಸುಪ್ರೀಂ ಕೋರ್ಟ್‌ ಮತ್ತು ರಾಜ್ಯ ಸರ್ಕಾರ ವಾಹನದ ಮೆಟ್ಟಿಲುಗಳ ಎತ್ತರದಿಂದ ಹಿಡಿದು ಹೆಜ್ಜೆ-ಹೆಜ್ಜೆಗೂ ನಿಯಮಗಳನ್ನು ರೂಪಿಸಿವೆ. ವಾಹನದಲ್ಲಿ ಇಂತಿಷ್ಟೇ ಮಕ್ಕಳನ್ನು ಕೊಂಡೊಯ್ಯಬೇಕು ಎಂಬ ಮಾರ್ಗಸೂಚಿ ಇದೆ. ಶಾಲಾ ವಾಹನಗಳಿಗೆ ಶೇ.50ರಷ್ಟು ರಸ್ತೆ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿದೆ. ಆದರೆ, ನಿಯಮಗಳನ್ನು ಪಾಲಿಸುತ್ತಿರುವುದು ಮಾತ್ರ ಸಾವಿರಕ್ಕೊಂದು ಶಾಲೆಗಳು.

ಮಕ್ಕಳೆಂದರೆ ಈ ವಾಹನಗಳ ಚಾಲಕರು ಮತ್ತು ಮಾಲೀಕರ ಪಾಲಿಗೆ ಕುರಿ ಹಿಂಡಿನಂತೆ. ವಾಹನದ ಸಾಮರ್ಥ್ಯಕ್ಕಿಂತ ಎರಡು, ಮೂರು ಪಟ್ಟು ಮಕ್ಕಳನ್ನು ತುಂಬಲಾಗುತ್ತದೆ. ಬೆಳಗಾದರೆ ಉಸಿರುಗಟ್ಟುವ ವಾತಾವರಣದಲ್ಲಿ ಗಂಟೆಗಟ್ಟಲೆ ಕುಳಿತುಕೊಂಡು ಪ್ರಯಾಣ ಮಾಡುವ ಸ್ಥಿತಿ ಇದೆ. 25 ವರ್ಷಗಳ ಹಿಂದಿನ ಮೆಟಡೋರ್‌ಗಳನ್ನು ಈಗಲೂ ಶಾಲಾ ಮಕ್ಕಳನ್ನು ಕರೆದೊಯ್ಯಲು ಬಳಸಲಾಗುತ್ತಿದೆ.

Advertisement

ಓಮ್ನಿ ಒಂದರಲ್ಲೇ 15ಕ್ಕೂ ಹೆಚ್ಚು ಮಕ್ಕಳನ್ನು ತುಂಬಲಾಗುತ್ತಿದೆ. ಒಮ್ಮೆಲೆ ಹೆಚ್ಚು ಮಕ್ಕಳನ್ನು ಕೊಂಡೊಯ್ಯಲು ವಾಹನಗಳ ವಿನ್ಯಾಸಗಳನ್ನೇ ಬದಲಾಯಿಸಿ, ಸ್ಟೂಲುಗಳನ್ನು ಅಳವಡಿಸಲಾಗುತ್ತದೆ. ಕಣ್ಮುಂದೆಯೇ ಈ ನಿಯಮಗಳ ಉಲ್ಲಂಘನೆ ಆಗುತ್ತಿದೆ. ಆದರೆ, ಇವುಗಳ ವಿರುದ್ಧದ ಕಾರ್ಯಾಚರಣೆ ಸಾರಿಗೆ ಇಲಾಖೆ ಅಧಿಕಾರಿಗಳ “ಮೂಡ್‌’ ಅವಲಂಬಿಸಿದೆ ಎಂಬ ಆರೋಪ ಪೋಷಕರಿಂದ ಕೇಳಿಬರುತ್ತದೆ.

ಶಾಲೆಗಳೇ ನೇರವಾಗಿ ನೋಂದಾಯಿಸಿಕೊಂಡು, ಗುತ್ತಿಗೆ ನೀಡುವ ವಾಹನಗಳಲ್ಲಿ ಇಂಥ ಅವ್ಯವಸ್ಥೆ ಅಷ್ಟಾಗಿ ಕಾಣುವುದಿಲ್ಲ. ಆದರೆ, ಆಯಾ ಪ್ರದೇಶದಲ್ಲೇ ಸ್ಥಳೀಯವಾಗಿ ಪೋಷಕರು ಚೌಕಾಸಿ ಮಾಡಿ, ಬಾಡಿಗೆ ನಿಗದಿಪಡಿಸಿರುವ ವಾಹನಗಳಲ್ಲಿ ಇದು ಹೆಚ್ಚಾಗಿದೆ. ಈ ಮಾದರಿಯ ವಾಹನಗಳಿಗೆ ಶಾಲಾ ಆಡಳಿತ ಮಂಡಳಿ ಭಯವಿಲ್ಲ, ಅಧಿಕಾರಿಗಳ ಭಯವಂತೂ ಮೊದಲೇ ಇಲ್ಲ ಎಂದು ಸಾರಿಗೆ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಪೋಷಕರ ಹೊಣೆಯೂ ಇದೆ: ಲಕ್ಷಾಂತರ ರೂಪಾಯಿ ಕೊಟ್ಟು ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರು, ಬರೀ ನೂರು, ಇನ್ನೂರು ರೂ. ಉಳಿಸುವ ಭರದಲ್ಲಿ ಮಗುವಿನ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಮಕ್ಕಳನ್ನು ಸುರಕ್ಷಿತವಾಗಿ ಶಾಲೆ ತಲುಪಿಸುವ ಕಾರ್ಯದಲ್ಲಿ ಪೋಷಕರ ಹೊಣೆ ಕೂಡ ಸಾಕಷ್ಟಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಬಹುತೇಕ ವಾಹನಗಳಿಗೆ ಪರ್ಮಿಟ್‌ ಇರುವುದಿಲ್ಲ. ಇದ್ದರೂ ನವೀಕರಣಗೊಂಡಿರುವುದಿಲ್ಲ. ನಿಗದಿತ ಸೀಟುಗಳಿಗಿಂತ ದುಪ್ಪಟ್ಟು ಮಕ್ಕಳನ್ನು ತುಂಬಲಾಗುತ್ತದೆ. ದೂರುಗಳನ್ನು ಆಧರಿಸಿ ನಿಯಮಿತವಾಗಿ ಸಾರಿಗೆ ಇಲಾಖೆಯಿಂದ ವಿವಿಧೆಡೆ ಈ ರೀತಿಯ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಆಡಳಿತ) ನರೇಂದ್ರ ಹೋಳ್ಕರ್‌ ತಿಳಿಸುತ್ತಾರೆ.

79 ವಾಹನಗಳ ವಿರುದ್ಧ ಪ್ರಕರಣ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕ (ಏಪ್ರಿಲ್‌-ಜೂನ್‌)ದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 481 ವಾಹನಗಳನ್ನು ತಪಾಸಣೆ ನಡೆಸಿ, 79 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 20 ವಾಹನಗಳನ್ನು ಜಪ್ತಿ ಮಾಡಿ, ತೆರಿಗೆ ಮತ್ತು ದಂಡದ ರೂಪದಲ್ಲಿ 3.69 ಲಕ್ಷ ರೂ. ವಸೂಲಿ ಮಾಡಲಾಗಿದೆ.

ಅಲ್ಲದೆ, ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯುವುದು, ದೋಷಪೂರಿತ ನೋಂದಣಿ ಫ‌ಲಕ, ವಾಹನಗಳು ಸುಸ್ಥಿತಿಯಲ್ಲಿ ಇಲ್ಲದಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ 500ಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಿ 150 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಹೇಳುತ್ತಾರೆ. 

ವಾಹನಗಳ ಲೆಕ್ಕವೇ ಇಲ್ಲ!: ಶಾಲಾ ಮಕ್ಕಳ ಸುರಕ್ಷತೆಗಾಗಿ ವಾಹನಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. ಆದರೆ, ನಗರದಲ್ಲಿ ಮಕ್ಕಳನ್ನು ಕೊಂಡೊಯ್ಯುವ ವಾಹನಗಳ ಲೆಕ್ಕ ಮಾತ್ರ ಇಲ್ಲ! ಶಿಕ್ಷಣ ಸಂಸ್ಥೆಯ ವಾಹನಗಳು ಎಂದು ನೋಂದಣಿಯಾದ ಬಸ್‌ಗಳ ಸಂಖ್ಯೆ 11,801 (ಜೂನ್‌ ಅಂತ್ಯಕ್ಕೆ).

ಆದರೆ, ಇವುಗಳನ್ನು ಹೊರತುಪಡಿಸಿ, ನೇರವಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಾಹನಗಳು ಎಷ್ಟಿವೆ ಎಂಬ ನಿಖರ ಮಾಹಿತಿ ಸಾರಿಗೆ ಇಲಾಖೆ ಬಳಿ ಇಲ್ಲ. ಈ ವಾಹನಗಳು ಸಾಮಾನ್ಯವಾಗಿ ಇತರೆ ವಾಹನಗಳಂತೆಯೇ ಪರ್ಮಿಟ್‌ ಹೊಂದಿರುತ್ತವೆ.ಆಟೋ, ವ್ಯಾನ್‌, ಮ್ಯಾಕ್ಸಿಕ್ಯಾಬ್‌, ಟೆಂಪೋ ಟ್ರಾವೆಲರ್‌, ಮಿನಿ ಬಸ್‌ಗಳಲ್ಲೂ ಮಕ್ಕಳನ್ನು ಕರೆದೊಯ್ಯಲಾಗುತ್ತದೆ. ಇವೆಲ್ಲವೂ ಲಘು ಮೋಟಾರು ವಾಹನಗಳ ವ್ಯಾಪ್ತಿಗೆ ಬರುತ್ತವೆ.

ಸಾರಿಗೆ ಇಲಾಖೆ ಅಂಕಿ-ಅಂಶಗಳ ಪ್ರಕಾರ ಇವುಗಳ ಸಂಖ್ಯೆ 70 ಸಾವಿರಕ್ಕೂ ಅಧಿಕ ಎನ್ನಲಾಗಿದೆ. ಇದರಲ್ಲಿ ಮ್ಯಾಕ್ಸಿಕ್ಯಾಬ್‌ಗಳ ಸಂಖ್ಯೆಯೇ 38,382. ನಗರ ಮತ್ತು ಗ್ರಾಮಾಂತರ ಸೇರಿ 1ರಿಂದ 10ನೇ ತರಗತಿವರೆಗಿನ 8,765 ಶಾಲೆಗಳಿದ್ದು, ಈ ಪೈಕಿ 5 ಸಾವಿರ ಖಾಸಗಿ ಮತ್ತು 800 ಅನುದಾನಿತ ಶಾಲೆಗಳಿವೆ ಎಂದು ಶಿಕ್ಷಣ ಇಲಾಖೆ ಹೇಳುತ್ತದೆ.

ಡ್ರಾಪ್‌ ಕೊಡೋಕೂ ಹಣ!: ಸ್ವಂತ ಓಮ್ನಿ ವಾಹನ ಹೊಂದಿರುವ ಕೆಲ ಪೋಷಕರು, ಅದರಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಾರೆ. ಹೀಗೆ ಹೋಗುವಾಗ ಅಕ್ಕ-ಪಕ್ಕದ ಮಕ್ಕಳನ್ನೂ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು, ಆ ಮಗುವಿನ ಪೋಷಕರಿಂದ ಇಂತಿಷ್ಟು ಎಂದು ಹಣ ಪಡೆಯುತ್ತಾರೆ.ಇದು ನಿಯಮಬಾಹಿರ. ಇಂತಹ ಪ್ರಕರಣಗಳೂ ಕಾರ್ಯಾಚರಣೆ ವೇಳೆ ಕಂಡುಬಂದಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ನಿಗದಿಗಿಂತ ಹೆಚ್ಚು ಮಕ್ಕಳಿದ್ದರೆ ಸಮಸ್ಯೆ ಏನು?: ಒಂದು ವಾಹನದ ತೂಕಕ್ಕೆ ತಕ್ಕಂತೆ ಸೀಟುಗಳು, ಬ್ರೇಕ್‌, ಗೇರ್‌, ಎಕ್ಸಲರೇಟರ್‌ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲಾಗಿರುತ್ತದೆ. ಆದರೆ, ನಿಗದಿಗಿಂತಲೂ ಹೆಚ್ಚು ತೂಕ ಅಥವಾ ಸೀಟುಗಳನ್ನು ಹಾಕಿದಾಗ ವಾಹನದ ಕ್ಷಮತೆ ಕಡಿಮೆಯಾಗುತ್ತದೆ. ಸಂಚಾರದ ವೇಳೆ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಅಪಘಾತಗಳಿಗೂ ಕಾರಣವಾಗುವ ಸಾಧ್ಯತೆ ಇರುತ್ತದೆ. 

ತಂತ್ರಜ್ಞಾನ ಆಧಾರಿತ ಸೇವೆಯೂ ಇದೆ: ಕೆಲವು ಪ್ರತಿಷ್ಠಿತ ಶಾಲೆಗಳು ಮಕ್ಕಳ ಸುರಕ್ಷತೆಗಾಗಿ ಮುಂದುವರಿದ ತಂತ್ರಜ್ಞಾನ ಅಳವಡಿಸಿಕೊಂಡು ಅತ್ಯುತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿವೆ. ಮಗು ವಾಹನ ಏರಿದ ತಕ್ಷಣ ಪೋಷಕರ ಮೊಬೈಲ್‌ಗೆ ಸಂದೇಶ ಹೋಗುತ್ತದೆ. ಜಿಪಿಎಸ್‌ ವ್ಯವಸ್ಥೆ ಅಳವಡಿಕೆಯಿಂದ ವಾಹನದ ಚಲನವಲನ ಗೊತ್ತಾಗುತ್ತದೆ.

ಶಾಲಾ ಆಡಳಿತಕ್ಕೂ ಈ ಮಾಹಿತಿ ತಲುಪುತ್ತದೆ. ನಗರದ ಹಲವು ಪ್ರತಿಷ್ಠಿತ ಶಾಲೆಗಳು ಇಂತಹ ಅತ್ಯಾಧುನಿಕ ವ್ಯವಸ್ಥೆ ಹೊಂದಿವೆ. ವಾಹನ ಖರೀದಿಸಿ ನೋಂದಣಿ ಮಾಡಿಸುವ ಶಾಲೆಗಳು ನಿರ್ವಹಣೆಗಾಗಿ ಅವುಗಳನ್ನು ನಮಗೆ ನೀಡುತ್ತವೆ. ಮಕ್ಕಳ ಸುರಕ್ಷತೆಗೆಂದೇ ನಾವು ಆ್ಯಪ್‌ ಅಭಿವೃದ್ಧಿಪಡಿಸಿದ್ದೇವೆ. ಮಗು ಬಸ್‌ ಏರಿದ ತಕ್ಷಣ ಆ ಆ್ಯಪ್‌ ಮೂಲಕ ಸಂಬಂಧಪಟ್ಟವರಿಗೆ ಸಂದೇಶ ಹೋಗುತ್ತದೆ.

ಬಸ್‌ ಎಷ್ಟು ವೇಗದಲ್ಲಿ ಹೋಗುತ್ತಿದೆ? ಅದರಲ್ಲಿ ಇರುವ ಮಕ್ಕಳ ಸಂಖ್ಯೆ ಎಷ್ಟು? ಎಷ್ಟು ಗಂಟೆಗೆ ಶಾಲೆ ತಲುಪಿತು? ಎಂಬೆಲ್ಲ ಮಾಹಿತಿ ಮೊಬೈಲ್‌ನಲ್ಲೇ ದೊರೆಯುತ್ತದೆ. ನಿಗದಿತ ಸೀಟುಗಳಿಗಿಂತ ಒಂದೇ ಒಂದು ಹೆಚ್ಚುವರಿ ಸೀಟು ಹಾಕಲೂ ಇಲ್ಲಿ ಅವಕಾಶ ಇರುವುದಿಲ್ಲ ಎಂದು ಭಾಗೀರಥಿ ಸ್ಕೂಲ್‌ ಫ್ಲೀಟ್‌ ಸಂಸ್ಥೆ ನಿರ್ದೇಶಕ ನೀಲ್‌ ಜೋಸೆಫ್ ತಿಳಿಸುತ್ತಾರೆ.

ಕನಿಷ್ಠ 16 ಸಾವಿರ; ಗರಿಷ್ಠ 45 ಸಾವಿರ ಶುಲ್ಕ: ಸಾಮಾನ್ಯವಾಗಿ ಶಾಲಾ ವಾಹನಗಳ ಸಾರಿಗೆ ಸೇವೆ ಶುಲ್ಕ ವಾರ್ಷಿಕ ಕನಿಷ್ಠ 16 ಸಾವಿರ ರೂ.ನಿಂದ ಗರಿಷ್ಠ 40-45 ಸಾವಿರ ರೂ.ವರೆಗೂ ಇರುತ್ತದೆ. ಹೀಗೆ ವಿಧಿಸುವ ಶುಲ್ಕ ಆಯಾ ಶಾಲೆ ಮತ್ತು ಪ್ರದೇಶ ಹಾಗೂ ವಾಹನ ಕ್ರಮಿಸುವ ದೂರವನ್ನು ಅವಲಂಬಿಸಿರುತ್ತದೆ.

ನಿಯಮ ಏನು ಹೇಳುತ್ತದೆ?
* “ಸ್ಕೂಲ್‌ ಬಸ್‌’ ಎಂದು ವಾಹನದ ಹಿಂಬದಿ ಮತ್ತು ಮುಂಬದಿಯಲ್ಲಿ ಬರೆದಿರಬೇಕು
* ಬಾಡಿಗೆ ಪಡೆದಿದ್ದರೆ, ಶಾಲಾ ಕರ್ತವ್ಯದ ಮೇಲೆ ಎಂದು ಫ‌ಲಕ ಹಾಕಿರಬೇಕು
* ನಿಗದಿತ ಆಸನಗಳಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವಂತಿಲ್ಲ
* ವಾಹನದ ವೇಗ ಮಿತಿ ಗಂಟೆಗೆ 40 ಕಿ.ಮೀ. ಮೀರುವಂತಿಲ್ಲ
* ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಅದರಲ್ಲಿ ಅಗತ್ಯ ಔಷಧ ಸಾಮಗ್ರಿ ಇರಬೇಕು
* ಕಿಟಕಿಗಳಿಗೆ ಕಬ್ಬಿಣದ ಗ್ರಿಲ್‌ ಅಳವಡಿಸಿರಬೇಕು
* ವಾಹನದಲ್ಲಿ ಎದ್ದುಕಾಣುವಂತೆ ಶಾಲೆಯ ಹೆಸರು, ದೂರವಾಣಿ ಸಂಖ್ಯೆ ನಮೂದಿಸಿರಬೇಕು
* ಮೂರು ಅಗ್ನಿನಂದಕ ಉಪಕರಣಗಳು ವಾಹನದಲ್ಲಿರಬೇಕು
* ಚಾಲಕನಿಗೆ ಕನಿಷ್ಠ ಐದು ವರ್ಷ ವಾಹನ ಚಾಲನೆ ಅನುಭವ ಇರಬೇಕು
* ಭಾರಿ ವಾಹನ ಚಾಲನೆ ಪರವಾನಗಿಯನ್ನು ಚಾಲಕ ಹೊಂದಿರಬೇಕು
* ಸಂಚಾರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಆತನ ಮೇಲೆ ಇರಬಾರದು
* ವಾಹನ ಚಾಲನೆ ಮಾಡಬಲ್ಲ ಮತ್ತೂಬ್ಬ ಅನುಭವಿ ವ್ಯಕ್ತಿ ಬಸ್‌ನಲ್ಲಿ ಇರಲೇಬೇ
* ಮಕ್ಕಳ ಬ್ಯಾಗ್‌ಗಳನ್ನು ಇರಿಸಲು ವಾಹನದಲ್ಲಿ ವ್ಯವಸ್ಥೆ ಇರಬೇಕು
* ಚಾಲಕ ಸಮವಸ್ತ್ರದಲ್ಲಿದ್ದು, ಆತನ ಹೆಸರಿನ ಲೇಬಲ್‌ ಶರ್ಟ್‌ನ ಎದೆಯ ಮೇಲಿರಬೇಕು

-70,000+ ನೋಂದಣಿಯಾಗದೆ ಸಂಚರಿಸುತ್ತಿರುವ ಶಾಲಾ ವಾಹನಗಳು.
-38,382 ನೋಂದಣಿ ಆಗದೇ ಇರುವ ಸ್ಕೂಲ್‌ ಮ್ಯಾಕ್ಸಿಕ್ಯಾಬ್‌ಗಳು.
-11,801 ಜೂನ್‌ ಅಂತ್ಯಕ್ಕೆ ನೋಂದಣಿಯಾದ ಸ್ಕೂಲ್‌ ಬಸ್‌ಗಳು.
-8,765 ನಗರದಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆಗಳು.
-5000 ನಗರದಲ್ಲಿನ ಖಾಸಗಿ ಪ್ರೈಮರಿ ಮತ್ತು ಹೈಸ್ಕೂಲ್‌.
-800 ಬೆಂಗಳೂರಿನಲ್ಲಿರುವ ಅನುದಾನಿತ ಶಾಲೆಗಳು.

* ವಿಜಯ್‌ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next