ಪಿರಿಯಾಪಟ್ಟಣ: ನಿವೇಶನ ಕೊಟ್ಟ ಜಾಗದಲ್ಲಿ ಶಾಲಾ ಕಟ್ಟಡ ಪೂರ್ಣವಾಗಿಲ್ಲ, ಬೀಳುತ್ತಿರುವ ಖಾಸಗಿ ಮನೆಯಲ್ಲಿ ವಿದ್ಯಾರ್ಥಿಗಳ ಕಲಿಕೆ ಸರ್ಕಾರದಿಂದ ಸೌಲಭ್ಯ ದೊರಕುವುದು ಯಾವಾಗ ಎಂಬ ಸ್ಥಿತಿಯಲ್ಲಿದೆ ಎಂಬಂತಿದೆ. ಬೂದಿತಿಟ್ಟು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆ.ಎಸ್.ಕೆ.ನಗರ ಪುಟ್ಟಗ್ರಾಮದ ಶಾಲೆಯ ಸ್ಥಿತಿ.
2005-06 ನೇ ಸಾಲಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1 ರಿಂದ 5 ನೇ ತರಗತಿಯವರೆಗೆ ಸರ್ಕಾರಿ ಶಾಲೆಯನ್ನು ಇಲ್ಲಿನ ಅಪ್ಪಯ್ಯಸ್ವಾಮಿ ಎಂಬುವರ ಆಶ್ರಯ ಮನೆಯಲ್ಲಿ ಆರಂಭಿಸಲಾಯಿತು. ನಂತರ 2006-07 ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ ಶಾಲಾಕಟ್ಟಡಕ್ಕೆ ಹಣ ಮಂಜೂರು ಆದ ಪರಿಣಾಮ ಜಾಗವನ್ನು ಅಣ್ಣಾಮಲೈ, ಬೆಳ್ಳಿಯಮ್ಮ ದಂಪತಿಗಳು ತಮಗಿರುವ 2 ಎಕರೆ ಜಮೀನಿನ ಪೈಕಿ 2 ಗುಂಟೆ ಜಾಗವನ್ನು ಬಡಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಚಿತವಾಗಿ ನೀಡಿದರು.
ಕೆಲಸ ಹಾಗೇ ಉಳಿಯಿತು: ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ದಂಪತಿಗಳಿಗೆ ಸರ್ಕಾರದಿಂದ ಸಿಗಬಹುದಾದ ಸವಲತ್ತು ಕೊಡಿಸುವ ಭರವಸೆಯನ್ನು ನೀಡಿದರು. ಶಾಲಾ ಕಟ್ಟಡಕ್ಕೆ 6 ಲಕ್ಷ ರೂ.ಮಂಜೂರು ಆಗಿದ್ದರಿಂದ ಅಂದಿನ ಜಿಪಂ ಸದಸ್ಯ ಗೋಪಾಲ್ ಪಾಯ, ಕಿಟಕಿ, ಬಾಗಿಲು. ಗೋಡೆ ಕಾಮಗಾರಿ ಮಾತ್ರ ಮುಗಿಯಿತು. ಸರ್ಕಾರದ ಹಣ ಖಾಲಿಯಾದ ಪರಿಣಾಮ ಮಿಕ್ಕ ಕೆಲಸ ಹಾಗೇ ಉಳಿಯಿತು. ಇದೇ ವೇಳೆ ಶಾಲೆ ಬಿದ್ದು ಹೋದ ಪರಿಣಾಮ ಬೂದಿತಿಟ್ಟು ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲಾಯಿತು.
ಕೆ.ಎಸ್.ಕೆ.ನಗರಕ್ಕೂ ಬೂದಿತಿಟ್ಟಿಗೂ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದ ಕಾರಣ ವರ್ಷದಿಂದ ಕೆ.ಎಸ್.ಕೆ.ನಗರದಲ್ಲೇ ಬೇರೆಯೊಬ್ಬರ ಮನೆಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ನಡೆಸಲಾಗುತ್ತಿದೆ. ಶಾಲೆಯಲ್ಲಿ 14 ವಿದ್ಯಾರ್ಥಿಗಳು ಮತ್ತು ಅಂಗನವಾಡಿಯಲ್ಲಿ 10 ಮಕ್ಕಳಿದ್ದು ಈ ಎರಡೂ ಕಟ್ಟಡಗಳೂ ಸಹ ಯೋಗ್ಯವಿಲ್ಲವಾಗಿದೆ. ಕಳೆದ 7 ವರ್ಷಗಳಿಂದ ಬಿಸಿಲು ಮತ್ತು ಮಳೆಗೆ ಸಿಲುಕಿ ಶಾಲಾ ಕಟ್ಟಡ ಮತ್ತು ಗೋಡೆಗಳು ನೆಲಕ್ಕೆ ಬೀಳುವಂತಾಗಿದೆ ಅದರ ಅಭಿವೃದ್ಧಿ ಮರೀಚಿಕೆಯಾಗಿದೆ.
ಗ್ರಾಮದ ಸ್ಥಿತಿ: ತಾಲ್ಲೂಕಿನ ಬೂದಿತಿಟ್ಟು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕೆ.ಎಸ್.ಕೆ.ನಗರ, ಆನೆಚೌಕೂರು ಅರಣ್ಯದ ಅಂಚಿನಲ್ಲಿದೆ. ಇಲ್ಲಿ ಬೋವಿ ಜನಾಂಗ ಸುಮಾರು 40 ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿರುವ ಪೈಕಿ 15 ಮಂದಿಗೆ ಅಲ್ಪ ಸ್ವಲ್ಪ ಜಮೀನು ಹೊಂದಿದ್ದಾರೆ, ಉಳಿದವರು ಕೇವಲ ಕೂಲಿಯನ್ನೇ ಅವಲಂಬಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಯಾವುದೇ ಮೂಲಭೂತ ಸೌಲಭ್ಯವಿಲ್ಲದೆ ಬಹಳಷ್ಟು ವರ್ಷಗಳ ಹಿಂದೆ ನಿರ್ಮಿಸಿಕೊಂಡಿರುವ ಮನೆಗಳಲ್ಲಿ ಜನಜೀವನ ನಡೆಯುತ್ತಿದೆ.
ನನ್ನ ಅಧಿಕಾರಾವಧಿಗೂ ಮುನ್ನ ಶಾಲಾ ಕಟ್ಟಡದ ಹಣ ದುರುಪಯೋಗ ಹಾಗೂ ಅವ್ಯವಸ್ಥೆಯಾಗಿದ್ದು ಸರಿಪಡಿಸಲು ಇಲಾಖೆಯಿಂದ ಯಾವುದೇ ಹಣ ತರುವ ಮಾರ್ಗಗಳಿಲ್ಲ ಎಂದು ಹಿರಿಯ ಅಧಿಕಾರಿಗಳು ಈಗಾಗಲೇ ತಿಳಿಸಿರುವುದರಿಂದ ಸಂಘ ಸಂಸ್ಥೆಗಳ ಮನವೊಲಿಸಿ ಅವರ ನೆರವಿನಿಂದ ಶಾಲಾ ಕಟ್ಟಡದ ಅಭಿವೃದ್ದಿ ಮಾಡಬೇಕಾಗಿದೆ
-ಆರ್.ಕರೀಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ
ಶಾಲೆಯ ಬ್ಯಾಂಕ್ ಖಾತೆಯಲ್ಲಿ 4 ಲಕ್ಷ ರೂ.ಇದ್ದು ಈ ಹಣದಲ್ಲಿ ಯಾವುದೇ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ಪೂರ್ಣವಾಗಿ ತೆಗೆದು ಹೊಸದಾಗಿ ಕಾಮಗಾರಿಯನ್ನು ಮಾಡಬೇಕು, 2 ಶಾಲಾ ಕೊಠಡಿ ಮತ್ತು 1 ಕಚೇರಿ ಇರುವುದರಿಂದ ಕನಿಷ್ಟ 13 ಲಕ್ಷ ರೂ.ಗಳಾದರೂ ಬೇಕು.
-ಗಣೇಶ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ
* ರಾ.ಶ.ವೀರೇಶ್‌ಕುಮಾರ್