ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಸೌರವ್ಯೂಹದ ವಿಸ್ಮಯಗಳ ದರ್ಶನ ಮಾಡಿಸುವ “ಶಾಲೆಯ ಅಂಗಳದಲ್ಲೇ ತಾರಾಲಯ’ ಯೋಜನೆಗೆ ಆ.23ರಂದು ಚಾಲನೆ ದೊರೆಯಲಿದೆ. ದೇಶದಲ್ಲೇ ಮೊದಲ ಪ್ರಯೋಗ ಎನಿಸಿದ “ಸಂಚಾರಿ ಡಿಜಿಟಲ್ ತಾರಾಲಯ’ದ ಮೂಲಕ ಶಾಲಾ ಅಂಗಳಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಸೌರವ್ಯೂಹ ಮತ್ತು ಆಕಾಶ ಕಾಯಗಳ ಬಗ್ಗೆ ವಿವರ ನೀಡುವ ಕಾರ್ಯ ಇದಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಚಲಿತ ಖಗೋಳ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು “ಶಾಲಾ ಅಂಗಳದಲ್ಲೇ ತಾರಾಲಯ’ ಯೋಜನೆ ರೂಪಿಸಲಾಗಿದೆ. ಬುಧವಾರ ವಿಧಾನಸೌಧ ಬಾಂಕ್ವೆಂಟ್ ಸಭಾಂಗಣದಲ್ಲಿ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.
6 ಕೋಟಿ ರೂ. ವೆಚ್ಚದಲ್ಲಿ 5 ಸಂಚಾರಿ ತಾರಾಲಯಗಳನ್ನು ಖರೀದಿಸಲಾಗಿದ್ದು, ಸೆ. 4 ರಿಂದ ತಾರಾಲಯಗಳು ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರಗಿ ವಿಭಾಗಕ್ಕೆ ತೆರಳಲಿವೆ. ಬಳಿಕ ಹಂತ ಹಂತವಾಗಿ ಗ್ರಾಮೀಣ ಭಾಗದ ಅನುದಾನಿತ ಶಾಲೆಗಳಿಗೂ ಸಂಚರಿಸಲಿವೆ. ಪ್ರತಿ ಜಿಲ್ಲೆಯಲ್ಲಿ ಎರಡು ತಿಂಗಳ ಅವಧಿಯವರಗೆ ಸಂಚರಿಸುವ ತಾರಾಲಯ, ಎಲ್ಲ ಪ್ರೌಢಶಾಲೆಗಳಿಗೆ ಭೇಟಿ ನೀಡಲಿವೆ ಎಂದರು.
ಮೊದಲಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಪ್ರೌಢಶಾಲೆಗಳಿಗೆ ತೆರಳಿ ಪ್ರೊಜೆಕ್ಟರ್ ಸಹಾಯದಿಂದ ಕಾಲ್ಪನಿಕ ಆಕಾಶವನ್ನು ಸೃಷ್ಟಿಸಿ, ವಿದ್ಯಾರ್ಥಿಗಳಿಗೆ ಮನೋರಂಜನೆ ಮೂಲಕ ಖಗೋಳ ವಿಜ್ಞಾನ ಮತ್ತು ಇತರೆ ವೈಜ್ಞಾನಿಕ ವಿಷಯಗಳ ತಿಳಿವಳಿಕೆ ಮೂಡಿಸಲಾಗುವುದು. ಪ್ರತಿ ಪ್ರದರ್ಶನವು 25- 30 ನಿಮಿಷಗಳ ಅವಧಿಯಿದ್ದು, 30- 40 ವಿದ್ಯಾರ್ಥಿಗಳು ಏಕಕಾಲದಲ್ಲಿ ವೀಕ್ಷಣೆ ಮಾಡಬಹುದಾಗಿದೆ ಎಂದರು. ಮುಂದಿನ ವರ್ಷ ಮಾರ್ಚ್ ನಂತರ ತಾರಾಲಯ ಜನಸಾಮಾನ್ಯರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ಮಂಗಳೂರಿನ ಪಿಲಿಕುಳ ನಿಸರ್ಗ ಧಾಮದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುತ್ತಿರುವ 3ಡಿ ಡಿಜಿಟಲ್ ತಾರಾಲಯವನ್ನು ನವೆಂಬರ್ ಮೊದಲ ವಾರ ಲೋಕಾರ್ಪಣೆ ಮಾಡಲಾಗುವುದು. ಇದೇ ಮಾದರಿಯಲ್ಲಿ ಹುಬ್ಬಳ್ಳಿ, ಬೆಳಗಾವಿ ಸೇರಿ ಇತರ ಜಿಲ್ಲೆಗಳಲ್ಲೂ ತಾರಾಲಯ ಸ್ಥಾಪಿಸಲು ಚಿಂತಿಸಲಾಗಿದೆ.
-ಎಂ.ಆರ್.ಸೀತಾರಾಂ, ಸಚಿವ