Advertisement

ಎಳ್ಳು ಬೀರುವ ಸುಗ್ಗಿಹಬ್ಬ ಸಂಕ್ರಾಂತಿ ಸಂಭ್ರಮ

06:58 AM Jan 16, 2019 | |

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಮೈಸೂರು ಹಾಗೂ ಚಾಮರಾಜನಗರದಲ್ಲಿ ಎಳ್ಳು ಬಿರುವ ಮೂಲಕ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮಾಂತರ ಪ್ರದೇಶಗಳಲ್ಲಿ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ, ಪೂಜಿಸಿ, ಕಿಚ್ಚು ಹಾಯಿಸಿ ಸುಗ್ಗಿ ಹಬ್ಬ ಸಂಕ್ರಾಂತಿ ಆಚರಿಸಿದರೆ,  ನಗರ, ಪಟ್ಟಣಗಳಲ್ಲಿ ಹೆಣ್ಣು ಮಕ್ಕಳು ಮನೆ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು. ಅನ್ನದಾತರು ತಾವು ಬೆಳೆದಿದ್ದ ಧಾನ್ಯಗಳನ್ನು ರಾಶಿ ಹಾಕಿ, ರಂಗೋಲಿಯಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಸಿದ್ದಲಿಂಗಪುರದಲ್ಲಿ ಕಿಚ್ಚು ಹಾಯಿಸಿದ್ದನ್ನು ವಿದೇಶಿಯರು ಸೇರಿದಂತೆ ಸಹಸ್ರಾರು ಮಂದಿ ಕಣ್ತುಂಬಿಕೊಂಡರು.

Advertisement

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಗೋವುಗಳಿಗೆ ಪೂಜೆ ಸಲ್ಲಿಸಿ, ಎಳ್ಳು ಬಿರುವ ಮೂಲಕ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ನಗರದಲ್ಲಿ ಸಂಕ್ರಾಂತಿಯ ಸಡಗರ ಮನೆಮಾಡಿತ್ತು. ಮಹಿಳೆಯರು, ಹೆಣ್ಣು ಮಕ್ಕಳು ಮನೆಯಲ್ಲಿ ಹೊಸ ಬಟ್ಟೆ ಧರಿಸಿ, ದೇವರಿಗೆ ಪೂಜೆ ಸಲ್ಲಿಸಿ ನೆರೆಹೊರೆಯವರು, ಸ್ನೇಹಿತರು, ಬಂಧುಮಿತ್ರರಿಗೆ ಎಳ್ಳುಬೀರಿ, ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಮೈಸೂರಿನ ಅಗ್ರಹಾರ, ಸುಣ್ಣದಕೇರಿ, ದೇವರಾಜ ಮೊಹಲ್ಲಾ, ಕುರುಬಗೇರಿ, ಬಂಡಿಕೇರಿ, ವಿದ್ಯಾರಣ್ಯಪುರಂ, ಕೆ.ಜಿ.ಕೊಪ್ಪಲು, ಕನಕಗಿರಿ, ಗುಂಡೂರಾವ್‌ನಗರ, ಪಡುವಾರಹಳ್ಳಿ, ಒಂಟಿಕೊಪ್ಪಲು, ನಜರ್‌ಬಾದ್‌, ವೀರನಗೆರೆ, ಕ್ಯಾತಮಾರನಹಳ್ಳಿ, ಇಟ್ಟಿಗೆಗೂಡು ಮೊದಲಾದ ಕಡೆಗಳಲ್ಲಿ ಪುರುಷರು ಮನೆಯಲ್ಲಿನ ಗೋವುಗಳ ಮೈ ತೊಳೆದು ಅರಿಶಿಣ-ಕುಂಕುಮ ಹಚ್ಚಿ, ಕೊಂಬುಗಳಿಗೆ ಬಣ್ಣ ಹಚ್ಚಿ, ಬಲೂನ್‌ಗಳನ್ನು ಕಟ್ಟಿ ಸಿಂಗರಿಸಿದ ನಂತರ ಪೂಜೆ ಸಲ್ಲಿಸಿ, ಪೊಂಗಲ್‌, ಬೆಲ್ಲ, ಕಬ್ಬನ್ನು ಗೋವುಗಳಿಗೆ ತಿನ್ನಿಸಿ ಧನ್ಯತೆ ಮೆರೆದರು.

ನಗರದ ನಂಜರಾಜ ಬಹದ್ದೂರ್‌ ಛತ್ರದ ಎದುರು ವಿನೋಬಾ ರಸ್ತೆಯಲ್ಲಿ ಸಾಮೂಹಿಕ ಗೋ ಪೂಜೆ ಆಯೋಜಿಸಲಾಗಿತ್ತು. ಜನರು ತಾವು ಸಾಕಿರುವ ಹಸುಗಳ ಮೈತೊಳೆದು, ಸಿಂಗರಿಸಿ ಇಲ್ಲಿಗೆ ಕರೆತಂದು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ನಾಡದೇವತೆ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನ, ಅರಮನೆ ಕೋಟೆ ಆಂಜನೇಯಸ್ವಾಮಿ, ನೂರೊಂದು ಗಣಪತಿ, ಯೋಗಾನರಸಿಂಹಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲಿನ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಹಬ್ಬದ ಪ್ರಯುಕ್ತ ಶೇಷ ಪೂಜೆ ನಡೆಯಿತು.

ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಕ್ಯಾಥೋಲಿಕ್‌ ತಮಿಳು ಟ್ರಸ್ಟ್‌ವತಿಯಿಂದ ನಾಯ್ಡು ನಗರದ ಪುಷ್ಪಾಶ್ರಮದ ಇನ್‌ಫ್ಯಾಂಟ್‌ ಜೀಸಸ್‌ ಶೆರಿನ್‌ನಲ್ಲಿ ಪೊಂಗಲ್‌ ಹಬ್ಬ ಆಚರಿಸಲಾಯಿತು. ಬಿಷಪ್‌ ಡಾ.ಕೆ.ಎ.ವಿಲಿಯಂ ಬಲಿ ಪೂಜೆ ನೇರವೇರಿಸುವ ಮೂಲಕ 7ನೇ ವರ್ಷದ ಪೊಂಗಲ್‌ ಹಬ್ಬಕ್ಕೆ ಚಾಲನೆ ನೀಡಿದರು. 

Advertisement

ಮುಸ್ಲಿಮರಿಗೆ ಎಳ್ಳು ಬೆಲ್ಲ: ಮಹಾ ನಗರಪಾಲಿಕೆ 23ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಪ್ರಮೀಳ ಭರತ್‌, ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಪೌರ ಕಾರ್ಮಿಕರು ಮತ್ತು ಮುಸಲ್ಮಾನರಿಗೆ  ಎಳ್ಳು ಬೀರುವ ಮೂಲಕ ಸಂಕ್ರಾತಿ ಹಬ್ಬ ಆಚರಿಸಿದರು. ಭಾರತೀಯ ಗೋ ಪರಿವಾರದ ವತಿಯಿಂದ ಸಂಕ್ರಾತಿ ಹಬ್ಬದ ಪ್ರಯುಕ್ತ ನಗರದಲ್ಲಿ ಗೋ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ನಂಜುಮಳಿಗೆ ವೃತ್ತದ ಬಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಗೋವುಗಳಿಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಎಳ್ಳು ಬೀರಲಾಯಿತು. ಮೈಸೂರಿನಲ್ಲಿ ಯೋಗ ಕಲಿಯಲು ಆಗಮಿಸಿರುವ 20ಕ್ಕೂ ಹೆಚ್ಚು ವಿದೇಶಿಯರು ಸಹ ಗೋಪೂಜೆಯಲ್ಲಿ ಭಾಗಿಯಾಗಿ ಎಳ್ಳು-ಬೆಲ್ಲ ಸವಿದು ಸಂಭ್ರಮಿಸಿದರು. 

ಸುಗ್ಗಿಯ ಸಂಭ್ರಮ: ನಗರದ ಹೊರ ವಲಯದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಪೂಜೆ ಸಲ್ಲಿಸುವ ಜತೆಗೆ ಜಾನುವಾರುಗಳಿಗೆ ಪೂಜೆ ಸಲ್ಲಿಸಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಆಚರಿಸಿದರು. ಸಂಜೆ ಗೋಧೂಳಿ ಸಮಯದಲ್ಲಿ ಗೋವುಗಳಿಗೆ ಕಿಚ್ಚು ಹಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next