Advertisement

ಅನುಷ್ಠಾನವಾಗಲಿಲ್ಲ ಮಂಜೂರಾಗಿದ್ದ ಯೋಜನೆ

02:43 PM Jun 01, 2023 | Team Udayavani |

ಮುಳಬಾಗಿಲು: ತಾಲೂಕಿನ ಹಲವಾರು ಹಳ್ಳಿಗಳಿಂದ ಮಹಿಳೆಯರು ಸೇರಿದಂತೆ ಸಾವಿರಾರು ಜನರು ನೆರೆಯ ಆಂಧ್ರದ ನಾಲ್ಕು ರಸ್ತೆಯಲ್ಲಿರುವ ಹಲವು ಕಾರ್ಖಾನೆಗಳಿಗೆ ಪ್ರತಿನಿತ್ಯ ಹೋಗುತ್ತಿದ್ದಾರೆ. ಕ್ಷೇತ್ರದಲ್ಲಿ ಜನರಿಂದ ಮತ ಪಡೆದು ಎಷ್ಟೋ ಜನಪ್ರತಿನಿಧಿಗಳು ಆಡಳಿತ ನಡೆಸಿ ಹೋಗಿದ್ದರೂ, ಯಾರೊಬ್ಬರಿಗೂ ಇಲ್ಲಿ ಕೈಗಾರಿಕೆಗಳ ಸ್ಥಾಪಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪ ಕ್ಷೇತ್ರದಲ್ಲಿದೆ.

Advertisement

2013-14ರಲ್ಲಿ ಕೇಂದ್ರ ಸರ್ಕಾರದಿಂದ 12,500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಮಂಜೂರಾಗಿದ್ದ ಕೈಗಾರಿಕಾ ಯೋಜನೆಯೊಂದು ಅನುಷ್ಠಾನಗೊಳಿಸಲು (ಎನ್‌ಐಎಂಜೆಡ್‌) ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಹೇಳ ಹೆಸರಿಲ್ಲದಂತೆ ಹೋಗಿದೆ. ನೂತನವಾಗಿ ಆಯ್ಕೆಯಾದ ಶಾಸಕರು ಇತ್ತ ಗಮನ ಹರಿಸಲಿ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಯೋಜನೆಗೆ ಜಮೀನು ಮಾಹಿತಿ ನಕ್ಷೆ ಸಿದ್ಧವಾಗಿತ್ತು: 2013ರಲ್ಲಿ ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ನ್ಯಾಷನಲ್‌ ಇನ್ವೆಸ್ಟ್‌ಮೆಂಟ್‌ ಅಂಡ್‌ ಮ್ಯಾನುಫ್ಯಾಕ್ಚರಿಂಗ್‌ ಜೋನ್‌ (ಎನ್‌.ಐ.ಎಂ. ಜೆಡ್‌) ಸ್ಥಾಪಿಸಲು ಉದ್ದೇಶಿಸಿತ್ತು. ಅದಕ್ಕಾಗಿ 12,500 ಎಕರೆ ಜಮೀನುಗಳ ಅವಶ್ಯಕತೆಯಿದ್ದು, ಆ ಜಮೀನುಗಳ ಸರ್ಕಾರಿ ಹಾಗೂ ಖಾಸಗಿ (ಬಂಜರು) ವಿವರ ನೀಡಲು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಲಾಗಿತ್ತು. ಅಂತೆಯೇ ಅಂದಿನ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್‌ 2013 ಜೂನ್‌ 5 ರಂದು ಕೋಲಾರ ಜಿಲ್ಲಾಧಿಕಾರಿ ಡಿಎಸ್‌.ವಿಶ್ವನಾಥ್‌ಗೆ ಪತ್ರ ಬರೆದಿದ್ದರು. ತುರ್ತಾಗಿ ಕ್ರಮಕೈಗೊಳ್ಳಲು ಮುಳಬಾಗಿಲು ತಾಲೂಕು ತಹಶೀಲ್ದಾರ್‌ಗೆ ಸೂಚಿಸಿದ್ದರು, ನಂತರ ಜಿಲ್ಲಾಧಿಕಾರಿಗಳು ವರ್ಗಾವಣೆಯಾ ಗಿದ್ದು, ಅನಂತರ ಬಂದ ಜಿಲ್ಲಾಧಿಕಾರಿ ಡಿ.ಕೆ.ರವಿ ಈ ಕುರಿತು ಸಾಕಷ್ಟು ಆಸಕ್ತಿ ವಹಿಸಿ ಕೋಲಾರ ಉಪವಿಭಾಗದ ಸಹಾಯಕ ಕಮೀಷನರಿಂದ ವರದಿ ಪಡೆದುಕೊಂಡಿದ್ದರು.

ಯೋಜನೆಯ ಉದ್ದೇಶಕ್ಕಾಗಿ ತಾಲ್ಲೂಕಿನ ದುಗ್ಗ ಸಂದ್ರ ಹೋಬಳಿಯಲ್ಲಿ 17 ಗ್ರಾಮಗಳನ್ನು ಗುರ್ತಿಸಿ ಒಟ್ಟಾರೆ ಖರಾಬು 5872 ಹಾಗೂ ಸಾಗುವಳಿ 11,293 ಎಕರೆ ಸೇರಿದಂತೆ 17,165 ಎಕರೆ ಜಮೀನು ಸೇರಿದಂತೆ ಈ ಗ್ರಾಮಗಳಲ್ಲಿರುವ ಲಭ್ಯ ಸರ್ಕಾರಿ ಮತ್ತು ಖಾಸಗೀ ಜಮೀನುಗಳ ಮಾಹಿತಿ ನಕ್ಷೆ ಸಮೇತ ಸಿದ್ದಪಡಿಸಿದ್ದರು.

ಜಮೀನುಗಳಿಗೆ ಸಂಪರ್ಕದ ಸಮಸ್ಯೆಯೂ ಇರಲಿಲ್ಲ: ದುಗ್ಗಸಂದ್ರ ಸರ್ಕಾರಿ ಖರಾಬು ಜಮೀನಿನ 20 ಸರ್ವೆ ನಂಬರ್‌ಗಳಿದ್ದು 1044 ಸಾಗುವಳಿ ಸರ್ವೆ ನಂಬರ್‌ಗಳಿರುತ್ತವೆ. ಎಲ್ಲ ಸರ್ವೆ ನಂಬರಗಳನ್ನು ಸಹಾಯಕ ಕಮೀಷನರ್‌ ಸ್ಥೂಲವಾಗಿ ಪರಿಶೀಲಿಸಿ ನಿಗದಿಪಡಿಸಲಾಗಿತ್ತು. ಗ್ರಾಮಗಳಲ್ಲಿ ತಹಶೀಲ್ದಾರ್‌ ಮಾಹಿತಿಯಂತೆ ಸುಮಾರು 5,872 ಸರ್ಕಾರಿ ಜಮೀನಿದ್ದು, ಈ ಗ್ರಾಮಗಳಿಗೆ ಮುಳಬಾಗಿಲಿನಿಂದ ಉತ್ತಮ ಡಾಂಬರು ಕಂಡಿರುವ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪರ್ಕ ಕಲ್ಪಿಸುತ್ತದೆ. ಮುಳ ಬಾಗಿಲು ನಗರಕ್ಕೆ ರಾ.ಹೆ. ನಂ.75ರಿಂದ ಉತ್ತಮ ರಸ್ತೆ ಸಂಪರ್ಕವನ್ನು ಕಲ್ಪಿಸುತ್ತದೆ. ಮುಳಬಾಗಿಲನಿಂದ ಎಲ್ಲಾ ಗ್ರಾಮಗಳು 10-15 ಕಿ.ಮೀ. ಪರಿಮಿತಿಯೊಳಗೆ ಬರುವುದರಿಂದ ರಸ್ತೆ ಸಂಪರ್ಕದ ಸಮಸ್ಯೆ ಇರಲಿಲ್ಲ. ಈ ಜಮೀನುಗಳ ಒಣ ಭೂಮಿಗಳಾಗಿದ್ದು ಯಾವುದೇ ನೀರಾವರಿ ಮೂಲದ ವ್ಯವಸ್ಥೆ ಇರುವುದಿಲ್ಲ. ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿಯ ಮಾಹಿತಿಯಂತೆ ಅಂತರ್ಜಲ ಪರಿಸ್ಥಿತಿ ಉತ್ತಮವಾಗಿದೆ. ಈ ಭಾಗದಲ್ಲಿರುವ ಕೆರೆಗಳನ್ನು ಪುನರುಜ್ಜೀವನ ಗೊಳಿಸುವುದರಿಂದ ಅಂತರ್ಜಲದ ಮಟ್ಟವನ್ನು ಮತ್ತಷ್ಟು ಸುಧಾರಿಸಬಹುದಾಗಿತ್ತು. ಈ ಗ್ರಾಮಗಳು ಆರ್ಥಿಕವಾಗಿ ತೀರಾ ಹಿಂದುಳಿದಿವೆ ಹಾಗಾಗಿ ಎನ್‌ ಐಎಂಝಡ್‌ ಯೋಜನೆ ಇಲ್ಲಿ ಸ್ಥಾಪಿಸಿರುವುದರಿಂದ ಈ ಪ್ರದೇಶದಲ್ಲಿ ಉಂಟಾಗಿರುವ ಆರ್ಥಿಕ ಹಿನ್ನಡೆ ಸರಿಪಡಿಸಬಹುದಾಗಿದೆ ಎಂದು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು 2013 ರ ನವಂಬರ್‌ 18 ರಂದು ಅಂದಿನ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದರು.

Advertisement

ಹಿಂದಿನ ಶಾಸಕರು ಗಮನ ಹರಿಸದಿರುವುದೇ ಬೇಸರ: 2014ರ ಮಾರ್ಚ್‌ 3 ರಂದು ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ಅದೀನ ಕಾರ್ಯದರ್ಶಿ ಪಿಎಲ್‌ ಎನ್‌.ಮೂರ್ತಿ ಎನ್‌.ಐ.ಎಂ.ಜೆಡ್‌ ಸ್ಥಾಪಿಸಲು ಅನುಮತಿ ನೀಡಿ ಆದೇಶಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಈ ಕೈಗಾರಿಕಾ ವಲಯವು, ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಮರಳಿ ಹೋಗಿದ್ದು, ಈ ಯೋಜನೆಯ ಮರು ಮಂಜೂರಾತಿ ಮತ್ತು ಅನುಷ್ಠಾನಕ್ಕೆ ಹಿಂದಿನ ಶಾಸಕ ಎಚ್‌.ನಾಗೇಶ್‌ ಮನಸ್ಸು ಮಾಡದೇ ಕೈ ಬಿಟ್ಟಿದ್ದು ವಿಪರ್ಯಾಸವೇ ಸರಿ. ಪ್ರಸ್ತುತ ಶಾಸಕ ಸಮೃದ್ದಿ ಮಂಜುನಾಥ್‌ ಆದರೂ ಇತ್ತ ಕಡೆ ಗಮನಹರಿಸಿ, ಯೋಜನೆಯ ಅನುಷ್ಠಾನ ಕುರಿತಂತೆ ಗಮನಹರಿಸಿ ಮತ ಹಾಕಿದ ಜನತೆಗೆ ಆಸರೆಯಾಗುವರೇ? ಅಥವಾ ಹಿಂದಿನ ಶಾಸಕರಂತೆ ಯೋಜನೆ ಅನುಷ್ಠಾನದ ಬಗ್ಗೆ ನಿರಾಸಕ್ತಿ ವಹಿಸುವರೇ ಕಾದು ನೋಡಬೇಕಾಗಿದೆ.

2014ರಲ್ಲಿಯೇ ಕೇಂದ್ರ ಸರ್ಕಾರ ದಿಂದ ಮುಳಬಾಗಿಲು ತಾಲೂಕಿನಲ್ಲಿ ಎನ್‌.ಐ.ಎಂ.ಜೆಡ್‌ ಸ್ಥಾಪಿಸಲು ಅನುಮತಿ ನೀಡಲಾಗಿದ್ದರೂ, ಇದುವರೆಗೂ ಅನುಷ್ಠಾನವಾಗದ ಕುರಿತು ತಮಗೆ ಮಾಹಿತಿ ಇಲ್ಲ, ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು. ● ವೆಂಕಟ್‌ ರಾಜಾ, ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ 

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next