Advertisement

2ನೇ ಹಂತದಲ್ಲೂ ಅದೇ ರಾಗ, ಅದೇ ಹಾಡು

11:59 AM Oct 29, 2017 | Team Udayavani |

ಹಲವು ವಿವಾದಗಳ ಜತೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದ ಪರಿಹಾರ ವಿತರಣೆ ಕುರಿತಂತೆ ಸಾರ್ವಜನಿಕರ ವಿರೋಧದ ನಡುವೆ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದ ಕಾಮಗಾರಿಯಲ್ಲಾದ ಅನುಭವ ಈ ಬಾರಿ ಕೆಲಸಕ್ಕೆ ಬರಲಿದ್ದು, ತಪ್ಪುಗಳು ಮರುಕಳಿಸುವುದಿಲ್ಲ ಎಂದು ಹೇಳಿದ್ದ ಮೆಟ್ರೋ ನಿಗಮ, ಮೊದಲ ಹಂತದಲ್ಲಾದ ತಪ್ಪುಗಳಿಂದ ಪಾಠ ಕಲಿತಿಲ್ಲ ಎಂಬುದಕ್ಕೆ ಕಾಮಗಾರಿ ವಿಳಂಬ ಸಾಕ್ಷಿಯಾಗಿದೆ.

Advertisement

ಇದರೊಂದಿಗೆ ಚರ್ಚ್‌ ಸ್ಟ್ರೀಟ್‌ನಲ್ಲಿನ ಟೆಂಡರ್‌ ಶ್ಯೂರ್‌ ಕಾಮಗಾರಿ, ಮುತ್ತುರಾಜ ಜಂಕ್ಷನ್‌ನಲ್ಲಿನ ಅಂಡರ್‌ಪಾಸ್‌ ಕೆಲಸ ಹಾಗೂ ಓಕಳಿಪುರ ಜಂಕ್ಷನ್‌ನಲ್ಲಿ ಅಷ್ಟಪಥ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಎರಡು ತಿಂಗಳು ಸತತವಾಗಿ ಸುರಿದ ಮಳೆಯಿಂದಾಗಿ ಕಾಮಗಾರಿಗೆಗಳ ಪ್ರಗತಿಗೆ ತೊಡಕಾಗಿದೆ. ಇದರೊಂದಿಗೆ ಎಂದಿನಂತೆ ಇಲಾಖೆಗಳ ನಡುವಿನ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ.

***
ವಿಸ್ತರಣೆ-ವಿವಾದ-ವಿಳಂಬ
ವಸ್ತುಸ್ಥಿತಿ:
ಮೆಟ್ರೋ ಮೊದಲ ಹಂತದಲ್ಲಿನ ಅನುಭವವನ್ನು ಎರಡನೇ ಹಂತದ ಯೋಜನೆಯಲ್ಲಿ ಬಳಸಿಕೊಳ್ಳುತ್ತೇವೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ಹೇಳಿಕೊಂಡಿದ್ದರು. ಆದರೆ, ವಾಸ್ತವವಾಗಿ ಮತ್ತದೇ ತಪ್ಪು ಪುನರಾವರ್ತನೆ ಆಗುತ್ತಿದೆ. 2014ರಲ್ಲೇ ಎರಡನೇ ಹಂತದ ಯೋಜನೆಗೆ ಅನುಮೋದನೆ ದೊರಕಿದ್ದರೂ, ಇನ್ನೂ ಟೆಂಡರ್‌ ಅವಾರ್ಡ್‌ ಮಾಡುವಲ್ಲೇ ನಿಗಮ ನಿರತವಾಗಿದೆ.

2ನೇ ಹಂತದ ರೀಚ್‌-2ರ ಕಾಮಗಾರಿ ಟೆಂಡರ್‌ ಅವಾರ್ಡ್‌ ಮಾಡಿದ್ದು 2015ರ ಫೆಬ್ರವರಿಯಲ್ಲಿ. 27 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಹೇಳಿಕೊಂಡಿದ್ದರು. ಆದರೆ, ಇನ್ನೂ ಕಾಮಗಾರಿ ಸಾಕಷ್ಟು ಬಾಕಿ ಇದೆ. ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ ನಿಲ್ದಾಣಗಳಲ್ಲಿ ಈಗಷ್ಟೇ ಪೈಲಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. 

ಅದೇ ರೀತಿ, ರೀಚ್‌-1ರ ಕಾಮಗಾರಿಗೆ ಟೆಂಡರ್‌ ಅವಾರ್ಡ್‌ ಮಾಡಿ ಈಗಷ್ಟೇ ನಾಲ್ಕು ತಿಂಗಳಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಮಣ್ಣಿನ ಪರೀಕ್ಷೆ ಮುಗಿದಿದ್ದು, ಕಾಮಗಾರಿಗೆ ರಸ್ತೆಗಳ ವಿಸ್ತರಣೆ ಮತ್ತೂಂದೆಡೆ ಪೈಲ್‌ಗ‌ಳ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಕಾಮಗಾರಿ ಇನ್ನೂ ಆರಂಭಿಕ ಹಂತದಲ್ಲಿದೆ. ಆಗಲೇ ಇದರ ಬಿಸಿ ಆ ಮಾರ್ಗಗಳ ಜನರಿಗೆ ಸಂಚಾರದಟ್ಟಣೆ, ವಾಯುಮಾಲಿನ್ಯದ ರೂಪದಲ್ಲಿ ತಟ್ಟುತ್ತಿದೆ. 

Advertisement

ವಿಳಂಬಕ್ಕೆ ಕಾರಣ: ಟೆಂಡರ್‌ ಕರೆಯುವಲ್ಲಾದ ವಿಳಂಬವೇ ಕಾಮಗಾರಿ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೆ, ರೀಚ್‌-1ರಲ್ಲಿ ಬರುವ ಮಹದೇವಪುರ ಬಳಿ ಭೂಸ್ವಾಧೀನಕ್ಕೆ ಪ್ರತಿಯಾಗಿ ನೀಡುವ ಪರಿಹಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಇದು ತಿಂಗಳ ಹಿಂದಷ್ಟೇ ಬಗೆಹರಿದಿದೆ. ಈ ಮಧ್ಯೆ ನಕ್ಷೆ ಪರಿಷ್ಕರಣೆ ವಿವಾದ, ಏರ್‌ಪೋರ್ಟ್‌ಗೆ ವಿಸ್ತರಣೆಗೆ ಹೆಚ್ಚು ಒತ್ತುಕೊಡುವಲ್ಲಿ ನಿಗಮ ಆಸಕ್ತಿ ತೋರುತ್ತಿದೆ. ಇತ್ತ ಅಧಿಕಾರಿಗಳ ಉದಾಸೀನವೂ ಇದೆ ಎಂಬ ಆರೋಪ ಕೇಳಿಬರುತ್ತಿದೆ. 

***
ಚೇಂಬರ್‌ ನಿರ್ಮಾಣ ಬಾಕಿ
ಯೋಜನೆ:
ಚರ್ಚ್‌ಸ್ಟ್ರೀಟ್‌ ರಸ್ತೆಯನ್ನು ವಿಶ್ವದರ್ಜೆಗೇರಿಸುವುದು ಹಾಗೂ ರಸ್ತೆ ಮತ್ತೆ ಮತ್ತೆ ಅಗೆಯದಂತೆ ವಿವಿಧ ಸೇವೆಗಳನ್ನು ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಡಕ್ಟ್ಗಳ ಅಳವಡಿಕೆ ಮಾಡಲಾಗುವುದು. 

ಗುತ್ತಿಗೆದಾರ: ಕುದ್ರೋಳಿ ಬಿಲ್ಡರ್ ಅಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ರಸ್ತೆಯ ಎರಡೂ ಕಡೆಗಳಲ್ಲಿ ಜಲಮಂಡಳಿ, ಒಎಫ್ಸಿ ಹಾಗೂ ಬೆಸ್ಕಾಂ ಸೇವಾಜಾಲಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದ್ದು, ಎರಡು ಕಡೆಗಳಲ್ಲಿ ಚೇಂಬರ್‌ ನಿರ್ಮಾಣ ಕಾರ್ಯ ಬಾಕಿಯಿದೆ. ಕ್ಯಾರೇಜ್‌ ವೇ ಹಾಗೂ ಪಾದಚಾರಿ ಕಾಮಗಾರಿ ಮುಗಿದರೆ ಕಾಮಗಾರಿ ಪೂರ್ಣಗೊಳ್ಳಲಿದೆ.
ವಸ್ತುಸ್ಥಿತಿ: ಮೊದಲ ಹಂತದ 400 ಮೀಟರ್‌ ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು 20 ಮೀಟರ್‌ ವಿಶಿಷ್ಟ ಶೈಲಿಯ ಕಾಬ್‌ ಸ್ಟೋನ್‌ ಅಳಡಿಸಲಾಗಿದೆ. ಎರಡು ಕಡೆಗಳಲ್ಲಿ ಚೇಂಬರ್‌ ನಿರ್ಮಿಸಿದರೆ ಸೇವಾಜಾಲಗಳ ಸ್ಥಳಾಂತರ ಕಾರ್ಯ ಪೂರ್ಣಗೊಳ್ಳಲಿದೆ.

ರಸ್ತೆಯ ಎರಡೂ ಬದಿಗಳಲ್ಲಿ ವಿವಿಧ ಸೇವಾಜಾಲಗಳಿಗಾಗಿ ಡಕ್ಟ್ ಗಳ ನಿರ್ಮಾಣ ಕಾಮಗಾರಿ ಪೂರ್ಣ ಗೊಳಿಸಲಾಗಿದ್ದು, ಶೇ.20ರಷ್ಟು ಸೇವಾಜಾಲಗಳ ಸ್ಥಳಾಂತರ ಹಾಗೂ ಶೇ.30ರಷ್ಟು ರಸ್ತೆ ಹಾಗೂ ಪಾದಚಾರಿ ಮಾರ್ಗ ಕಾಮಗಾರಿ ಬಾಕಿಯಿದೆ.
-ಪಾಲಿಕೆ ಸಹಾಯಕ ಎಂಜಿನಿಯರ್‌

***
ಕಾಡಿದೆ “ಜಲ’ ಕಂಟಕ

ಯೋಜನೆ: ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆವರೆಗೆ ಸಿಗ್ನಲ್‌ ಮುಕ್ತಗೊಳಿಸಲು ಮುತ್ತುರಾಜ ಜಂಕ್ಷನ್‌, ಫ‌ುಡ್‌ ವರ್ಲ್ಡ್ ಜಂಕ್ಷನ್‌ ಹಾಗೂ ಜೇಡಿಮರ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ ಮತ್ತು ಡಾಲರ್ ಕಾಲೋನಿ, ಕೆಇಬಿ ಜಂಕ್ಷನ್‌ಗಳಲ್ಲಿನ ಮೇಲ್ಸೇತುವೆ ಕಾಮಗಾರಿಯಿಂದಾಗಿ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗಿನ ರಸ್ತೆ ಸಿಗ್ನಲ್‌ ಮುಕ್ತವಾಗಲಿದೆ.

ಗುತ್ತಿಗೆದಾರ: ಎಂವಿಆರ್‌ ಇನಾ ಪ್ರಾಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಮಳೆಯಿಂದಾಗಿ ಹೆಚ್ಚಿನ ಕಾಮಗಾರಿಯೇನು ನಡೆಸಲು ಸಾಧ್ಯವಾಗಿಲ್ಲ. ಈ ಭಾಗದಲ್ಲಿರುವ ಜಲಮಂಡಳಿಯ ಪೈಪ್‌ಗ್ಳ ಸ್ಥಳಾಂತರ ಕಾರ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿರುವ 300 ಡಯಾ ಪೈಪ್‌ಗ್ಳ ಬದಲಿಗೆ 600 ಡಯಾ ಪೈಪ್‌ಗ್ಳನ್ನು ಅಳವಡಿಸಲು ಮುಂದಾಗಿದ್ದು, ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಪಾಲಿಕೆಯ ಎಂಜಿನಿಯರ್‌ ತಿಳಿಸಿದ್ದಾರೆ.

ವಸ್ತುಸ್ಥಿತಿ: ಮುತ್ತುರಾಜ ಜಂಕ್ಷನ್‌ ಅಂಡರ್‌ ಪಾಸ್‌ ಕಾಮಗಾರಿ ಆರಂಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದರೂ, ಯಾವುದೇ ಕಾಮಗಾರಿ ಸದ್ಯಕ್ಕೆ ಪ್ರಗತಿಯಲ್ಲಿಲ್ಲ. ಕಾಮಗಾರಿಗಾಗಿ ರಸ್ತೆ ಅಗೆದು ಕಾಮಗಾರಿ ಸ್ಥಗಿತಗೊಳಿಸಿದ ಪರಿಣಾಮ ಈ ಭಾಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕುಡಿಯುವ ನೀರು ಹಾಗೂ ಒಳಚರಂಡಿ ಪೈಪ್‌ ಸ್ಥಳಾಂತರ ಕಾರ್ಯ ನಡೆಸುವುದು ಸವಾಲಾಗಿದ್ದು, ತಿಂಗಳೊಳಗೆ ಅದು ಪೂರ್ಣಗೊಳ್ಳಲಿದ್ದು, ಆನಂತರ ಕಾಮಗಾರಿ ವೇಗ ಪಡೆದುಕೊಳ್ಳಲಿದೆ.
-ಪಾಲಿಕೆ ಎಂಜಿನಿಯರ್‌ 

***

ಕಾಮಗಾರಿಗೆ ಬಂಡೆ ಅಡ್ಡಿ
ಯೋಜನೆ:
ದೇವರಾಜ ಅರಸು ವೃತ್ತದಿಂದ ಓಕಳಿಪುರ ವೃತ್ತದವರೆಗಿನ ಎಂಟು ಪಥದ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆ. ಈ ಯೋಜನೆಯಿಂದ ಗುಬ್ಬಿ ತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳಲ್ಲಿನ ಸಂಚಾರ ಸಿಗ್ನಲ್‌ ಮುಕ್ತವಾಗಲಿದೆ. 

ಗುತ್ತಿಗೆದಾರ: ಸಿಂಪ್ಲೆಕ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌

ಈ ತಿಂಗಳ ಪ್ರಗತಿ: ಮಲ್ಲೇಶ್ವರದ ಕಡೆಯಿಂದ ರಾಜಾಜಿನಗರವನ್ನು ಸಂಪರ್ಕಿಸುವ ಅಂಡರ್‌ ಪಾಸ್‌ಗೆ ಅಡ್ಡಲಾಗಿರುವ ಬಂಡೆ ತೆರವುಗೊಳಿಸಲು ಸಂಚಾರ ಮಾರ್ಗ ಬದಲಾವಣೆ ಮಾಡುವಂತೆ ಸಂಚಾರ ಪೊಲೀಸರನ್ನು ಕೋರಲಾಗಿದ್ದು, ಆ ಹಿನ್ನೆಲೆಯಲ್ಲಿ ಶುಕ್ರವಾರ ಸಂಚಾರ ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಭಾನುವಾರದಿಂದ ಸಂಚಾರ ಬದಲಿಸುವ ಭರವಸೆ ನೀಡಿದ್ದಾರೆ. ಉಳಿದಂತೆ ಈ ತಿಂಗಳಲ್ಲಿ ಅಂಡರ್‌ ಪಾಸ್‌ ತಡೆಗೋಡೆ ಹಾಗೂ ರೈಲ್ವೆ ನಿಲ್ದಾಣದಿಂದ ನಗರದ ಕಡೆಗೆ ಹೋಗಲು ಲೂಪ್‌ ಅಳವಡಿಕೆ ಕಾರ್ಯ ನಡೆದಿದೆ ಎಂದು ಸಹಾಯಕ ಎಂಜಿನಿಯರ್‌ತಿಳಿಸಿದರು.

ವಸ್ತುಸ್ಥಿತಿ: ಮಳೆಯಿಂದಾಗಿ ಅಂಡರ್‌ ಪಾಸ್‌ ನಲ್ಲಿ ಸಂಗ್ರಹವಾಗಿದ್ದ ನೀರನ್ನು ಹೊರಹಾಕಿರುವ ಸಿಬ್ಬಂದಿ ಅಂಡರ್‌ ಪಾಸ್‌ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸಂಚಾರ ಬದಲಾವಣೆಗೆ ಡಿಸಿಪಿ ಒಪ್ಪಿಗೆ ಸೂಚಿಸಿರುವ ಹಿನ್ನೆಲೆ ಭಾನುವಾರದಿಂದಲೇ ಬಂಡೆ ಹೊಡೆಯುವ ಕಾಮಗಾರಿ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಮಳೆಯಿಂದ ಅಡ್ಡಿಯಾಗಿದ್ದ ಅಂಡರ್‌ ಪಾಸ್‌ ನಿರ್ಮಿಸುವ ಕಾಮಗಾರಿ ಆರಂಭಿಸಲು ವಾಹನಗಳ ಸಂಚಾರ ಮಾರ್ಗ ಬದಲಿಸಲು ಅಧಿಕಾರಿಗಳು ಅನುಮತಿ ನೀಡಿದ್ದು, ಭಾನುವಾರದಿಂದ ಕೆಲಸ ಆರಂಭಿಸಲಾಗುವುದು.
-ಸಹಾಯಕ ಎಂಜಿನಿಯರ್‌ 

ಮಾಹಿತಿ: ವೆಂ. ಸುನೀಲ್‌ ಕುಮಾರ್‌, ವಿಜಯ್‌ಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next