ಆಳಂದ: ಕರ್ನಾಟಕದ ಕೃಷಿ ಭಾಗ್ಯ ಯೋಜನೆ ಸೌಲಭ್ಯವನ್ನು ತಾಲೂಕಿನ ಕೃಷಿ ಇಲಾಖೆ ಮೂಲಕ ಮಹಾರಾಷ್ಟ್ರಕ್ಕೆ ಮಾರಿಕೊಳ್ಳಲಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಪಟ್ಟಣದ ಗುರುಭವನ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆ ಆಶ್ರಯದಲ್ಲಿ ಸೋಮವಾರ ನಡೆದ ತಾಲೂಕು ಕೃಷಿ ವಸ್ತು ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಭಾಗ್ಯದಡಿ ಡ್ರಿಫ್, ಸ್ಪಿಂಕ್ಲರ್ ಮತ್ತು ಬೀಜ ಸೇರಿ ಮತ್ತಿತರ ಸಾಮಗ್ರಿ ಎಲ್ಲವನ್ನು ಮಹಾರಾಷ್ಟ್ರಕ್ಕೆ ಮಾರಿಕೊಳ್ಳಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ನೀರು ಇಂಗಿಸುವ ಸಲುವಾಗಿ ಕೃಷಿ ಹೊಂಡ ನಿರ್ಮಿಸಲು ಸಾಕಷ್ಟು ಪ್ರಮಾಣದಲ್ಲಿ ಅನುದಾನ ಬಂದಿದೆ. ಆದರೆ ಅಧಿಕಾರಿಗಳು ಮಾತ್ರ ನೀರು ನಿಲ್ಲದ ಜಾಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಹೀಗಾದರೆ ಹೇಗೆ? ಇಂಥದಕ್ಕೆ ರೈತರು ಅವಕಾಶ ನೀಡಬಾರದು ಎಂದು ಹೇಳಿದರು.
ರೈತರು ಮಾನಸಿಕ ದಾರಿದ್ರದಿಂದ ಹೊರ ಬಂದರೆ ನಮ್ಮ ಉದ್ಧಾರವಾಗುತ್ತದೆ. ಸಾವಯವ ಗೊಬ್ಬರ ಉತ್ಪಾದನೆಗೆ ಒತ್ತು ನೀಡಬೇಕು. ಮುಂದಿನ ದಿನಗಳಲ್ಲಿ ಸಾವಯವ ಗೊಬ್ಬರ ಮತ್ತು ಆಹಾರಕ್ಕೆ ಭಾರೀ ಬೇಡಿಕೆ ಬರಲಿದೆ. ಮಹಾರಾಷ್ಟ್ರದ ಶಿರಪುರ ಮಾದರಿಯಲ್ಲಿ ಸರಸಂಬಾದಲ್ಲಿ ನೀರು ನಿಲ್ಲಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಒಂದು ಕೋಟಿ ರೂ. ಕೊಟ್ಟಿದ್ದರಿಂದ ಕಾಮಗಾರಿ ಜಾರಿಯಲ್ಲಿದೆ.
ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಪಶು ಇಲಾಖೆ ಅಧಿಕಾರಿಗಲು ಹೊಸ ರೈತರನ್ನು ಸಂಪರ್ಕಿಸಿ ಕೃಷಿಗೆ ಪೂರಕವಾದ ಕಾರ್ಯ ಸಾಧನೆ ಮಾಡಬೇಕು ಎಂದು ಹೇಳಿದರು.ಕಲಬುರಗಿ ಕೆ.ವಿ.ಕೆ ಮಣ್ಣು ಶಾಸ್ತ್ರಜ್ಞ, ಕೃಷಿ ವಿಜ್ಞಾನಿ ಡಾ| ಎಂ.ಎ. ಬೆಳ್ಳಕ್ಕಿ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ನಾಗಮ್ಮ ಎ. ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ, ತಾಪಂ ಇಒ ಡಾ| ಸಂಜಯ ಡ್ಡಿ, ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಬಿ. ಭೂಸನೂರ, ಕೃಷಿ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ತಾಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಜಿಪಂ ನರೋಣಾ ಕ್ಷೇತ್ರದ ಸದಸ್ಯೆ ವಿಜಯಲಕ್ಷಿ ರಾಗಿ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಭು ಸರಸಂಬಿ, ಸದಸ್ಯ ಚಾಂದಸಾಬ ಮುಲ್ಲಾ, ಸಿದ್ದರಾಮ ವಾಘೊàರೆ ಇದ್ದರು. ರೇವಣಸಿದ್ದ ತಾವರಖೇಡ ಕಾರ್ಯಕ್ರಮ ನಿರೂಪಿಸಿದರು.