ಉಡುಪಿ: “ಧರ್ಮಸಂಸದ್’ಗೆ ಕ್ಷಣಗಣನೆ ಆರಂಭವಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ನೂರಾರು ಸಂತರು ಶ್ರೀಕೃಷ್ಣನ ನಾಡು ಉಡುಪಿಗೆ ಆಗಮಿಸುತ್ತಿದ್ದಾರೆ. ಬುಧವಾರದವರೆಗೆ ಸುಮಾರು 200 ಮಂದಿ ಸಾಧುಸಂತರು ಉಡುಪಿ ಪ್ರವೇಶಿಸಿದ್ದಾರೆ.
ಹರಿದ್ವಾರ, ಸೌರಾಷ್ಟ್ರ, ತಮಿಳುನಾಡು, ಉತ್ತರಾಖಂಡ, ಛತ್ತೀಸ್‌ಗಢ, ಅಮೃತ್‌ಸರ ಸೇರಿದಂತೆ ವಿವಿಧೆಡೆಯ ಸಂತರು ಆಗಮಿಸಿದ್ದಾರೆ. ಹಲವು ಮಂದಿ ಈಗಾಗಲೇ ಶ್ರೀಕೃಷ್ಣ ಮಠ, ಧರ್ಮಸಂಸದ್ ಸಭಾಂಗಣಕ್ಕೂ ಭೇಟಿ ನೀಡಿದ್ದಾರೆ. ಛತ್ತೀಸ್‌ಗಢದ ಬಜರಂಗ ಪ್ರಸಾದ್ ನೇತೃತ್ವದಲ್ಲಿ ಇಬ್ಬರು ಸಾಧ್ವಿಗಳು ಸೇರಿದಂತೆ 20 ಮಂದಿ ಸಂತರು ಆಗಮಿಸಿದ್ದಾರೆ. ಪಂಜಾಬ್‌ನ ಶ್ರೀ ಸದ್ಗುರು ದಲೀಪ್‌ಸಿಂಗ್ ಮಹಾರಾಜ್ ಅವರ 23 ಮಂದಿ ಶಿಷ್ಯರು ತಯೇಂದ್ರಸಿಂಗ್ ನಾಮಧಾರಿ ಅವರ ನೇತೃತ್ವದಲ್ಲಿ ಆಗಮಿಸಿದ್ದು ದಲೀಪ್‌ಸಿಂಗ್ ಮಹಾರಾಜ್ ಅವರು ಗುರುವಾರ ಆಗಮಿಸಲಿದ್ದಾರೆ.
ಹರಿದ್ವಾರದ ಸಂತರು ಮಂಗಳವಾರದಂದು ವಿಮಾನದ ಮೂಲಕ ಆಗಮಿಸಿದ್ದಾರೆ. ರೈಲಿನಲ್ಲಿ ಹೊರಟ ಸಂತರು ಗುರುವಾರ ಮಧ್ಯಾಹ್ನದ ಒಳಗೆ ಉಡುಪಿ ತಲುಪಲಿದ್ದಾರೆ. ವಿಮಾನದ ಮೂಲಕವೂ ಮತ್ತಷ್ಟು ಸಂತರು ಆಗಮಿಸಲಿದ್ದಾರೆ. ಕರ್ನಾಟಕದ ಹೆಚ್ಚಿನ ಸ್ವಾಮೀಜಿಗಳು ನ. 24ರಂದೇ ಉಡುಪಿ ತಲುಪಲಿದ್ದಾರೆ ಎಂದು ಸಂತರನ್ನು ಕರೆತರುವ ಜವಾಬ್ದಾರಿ ನಿರ್ವಹಿಸುತ್ತಿರುವ ಸುಮಿತ್ ಕೌಡೂರು ತಿಳಿಸಿದ್ದಾರೆ. ಉಡುಪಿಗೆ ಆಗಮಿಸಿರುವ ಸಂತರು ಇಲ್ಲಿನ ವಾಸ್ತವ, ಆತಿಥ್ಯ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಿ ಸಿದ್ಧಪಡಿಸಿಕೊಂಡು ವ್ಯವಸ್ಥಿತ ಸೇವೆ ಯಾರು? ಎಲ್ಲಿಂದ? ಯಾವ ನಿಲ್ದಾಣವಾಗಿ ಬರುತ್ತಾರೆ ಎನ್ನುವ ಬಗ್ಗೆ ಸರಿಯಾಗಿ ಗೊತ್ತಾಗದೆ ವ್ಯವಸ್ಥೆಯಲ್ಲಿ ಗೊಂದಲಗಳಾಗುವುದಿಲ್ಲವೇ? ಎಂದು ಸುಮಿತ್ ಶೆಟ್ಟಿ ಅವರನ್ನು ಪ್ರಶ್ನಿಸಿದಾಗ, ಅವ್ಯವಸ್ಥೆಯಾಗ ಕೂಡದು ಎನ್ನುವ ನೆಲೆಯಲ್ಲಿಯೇ ರಾಜ್ಯದೊಳಗಿನ ಹಾಗೂ ಅನ್ಯರಾಜ್ಯ ಸಂತರು ಯಾರೆಲ್ಲ? ಎಲ್ಲಿಂದ? ಹೇಗೆ? ಯಾವ ಸಮಯಕ್ಕೆ? ಎಲ್ಲಿಗೆ ಬರುತ್ತಾರೆ ಎನ್ನುವ ನಿಖರವಾದ ಚಾರ್ಟ್ ತಯಾರಿಸಿ ಇಟ್ಟುಕೊಂಡಿದ್ದೇವೆ. ಅದರಂತೆ ಸಂತರ ಪ್ರಯಾಣಕ್ಕೆ ನಿಖರ ಸೇವೆ ಒದಗಿಸಲಿದ್ದೇವೆ. ಎಲ್ಲಿಯೂ ದೋಷವಾಗದಂತೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪೇಜಾವರ ಶ್ರೀ ಭೇಟಿ
ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬುಧವಾರ ರಾತ್ರಿ ಧರ್ಮಸಂಸತ್ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಧರ್ಮಸಂಸದ್‌ನ ಪ್ರಧಾನ ವೇದಿಕೆ ಹಾಗೂ ಭೋಜನ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು. ಮಠದಿಂದ ಧರ್ಮಸಂಸದ್ ನಡೆಯುವ ರೋಯಲ್‌ಗಾರ್ಡನ್ ವರೆಗೂ ಶ್ರೀಗಳು ವೀಲ್‌ಚೇರ್‌ನಲ್ಲಿಯೇ ಆಗಮಿಸಿದ್ದರು.