ಕನಕಪುರ: ಸೈನಿಕರು ಚಳಿ, ಮಳೆ, ಗಾಳಿ, ಬಿಸಿಲನ್ನು ಲೆಕ್ಕಿಸದೇ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು ದೇಶವನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಯೋಧರ ತ್ಯಾಗ, ಬಲಿದಾನದಿಂದ ದೇಶದಲ್ಲಿ ನೆಮ್ಮದಿ ಇದೆ. ಇವರ ಕುಟುಂಬದ ಜೊತೆ ನಾವಿರಬೇಕು ಎಂದು ಶಿಕ್ಷಕಿ ನಾಗರತ್ನ ತಿಳಿಸಿದರು.
ತಾಲೂಕಿನ ಹಾರೋಹಳ್ಳಿಯ ಬಸ್ ನಿಲ್ದಾಣದ ವೃತ್ತದ ಬಳಿ ಶ್ರೀನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗ ಮತ್ತು ಹಾರೋಹಳ್ಳಿ ಗಂಗಾ ಮತಸ್ಥ ಸಂಘ, ಹಾರೋಹಳ್ಳಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಯೋಧರ ಕುಟುಂಬಕ್ಕೆ ನೆರಳಾಗಬೇಕು: ನಮ್ಮ ದೇಶಕ್ಕೆ ಅಪಾಯವನ್ನು ತಂದೊಡ್ಡುತ್ತಿರುವ ನಮ್ಮ ಶತುೃಗಳ ವಿರುದ್ಧ ಹಗಲಿರುಳೆನ್ನದೇ ಹೋರಾಡಿ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಯೋಧರ ಕುಟುಂಬಗಳಿಗೆ ನಾವು ನೆರಳಾಗಿ ನಿಲ್ಲಬೇಕು. ಇಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ದೇಶಪ್ರೇಮದ ಶಿಕ್ಷಣವನ್ನು ನೀಡುವ ಅನಿವಾರ್ಯವಿದೆ. ದೇಶದ ಬಗ್ಗೆ ಗೌರವವನ್ನು ನೀಡುವ ಶಿಕ್ಷಣ ಸಿಗುವಂತಾದಾಗ ಮಾತ್ರ ಮುಂದಿನ ಪೀಳಿಗೆ ದೇಶದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸೈನಿಕರನ್ನು ಮೊದಲು ಗೌರವಿಸಿ: ಬಾಪು ಶಾಲೆಯ ಮುಖ್ಯ ಶಿಕ್ಷಕ ಮಹಮೊದ್ ಯಾಕೂಬ್‌ಪಾಶ ಮಾತನಾಡಿ, ನಾವು ದೇಶದಲ್ಲಿ ಸ್ವತಂತ್ರವಾಗಿ ಇರಲು ಹೋರಾಡುತ್ತಿರುವ ನಮ್ಮ ಸೈನಿಕರಿಗೆ ಮೊದಲು ಗೌರವವನ್ನು ಕೊಡಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಸೇನಾನಿಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದರು.
ಯೋಧರ ಕುಟುಂಬಕ್ಕೆ ಬೆಂಬಲ: ಹಾರೋಹಳ್ಳಿ ಅರುಣಾಚಲೇಶ್ವರ ದೇವಾಲಯದ ಧರ್ಮದರ್ಶಿ ಎಂ.ಮಲ್ಲಪ್ಪ ಮಾತನಾಡಿ, ನಮ್ಮ ಸೈನಿಕರನ್ನು ಹತ್ಯೆ ಮಾಡಿದ ಪಾಪಿ ಪಾಕಿಸ್ಥಾನದವರು ಎಂದಿಗೂ ನಮ್ಮ ಶತುೃಗಳು. ಹತ್ಯಾಕಾಂಡದಲ್ಲಿ ಮಡಿದ ವೀರ ಯೋಧರ ಕುಟುಂಬದ ಹಿಂದೆ ನಾವಿದ್ದೇವೆ. ಅವರಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದರು.
ಉಗ್ರವಾದ ಅಳಿಯಲಿ: ಹಾರೋಹಳ್ಳಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜ್ಞಾನೇಶ್ ಮಾತನಾಡಿ, ಪುಲ್ವಾಮ ಜಿಲ್ಲೆಯ ಅವಂತಿಪೊರ ದಾಳಿಯಿಂದ ನಮ್ಮ ನೆತ್ತರು ಕುದಿಯುತ್ತಿದ್ದು, ವೀರ ಯೋಧರ ಜೀವ ಕಳೆದ ಆ ರಣಹೇಡಿಗಳ ಕೃತ್ಯವು ಅಕ್ಷಮ್ಯವಾಗಿದೆ. ಇಂತಹ ಅಮಾನವೀಯ ಮತ್ತು ಹೇಯ ಕೃತ್ಯವನ್ನು ಖಂಡಿಸುತ್ತಿದ್ದು ಉಗ್ರವಾದ ಅಳಿಯಬೇಕು ಎಂದು ಹೇಳಿದರು.
ಮುಖಂಡರಾದ ಚಂದ್ರು, ಮಹಮದ್‌ಏಜಾಸ್, ಮೋಹನಹೊಳ್ಳ, ಬಾಲಾಜಿಸಿಂಗ್, ನಾಗರಾಜು, ದೊಡ್ಡಣ್ಣ, ಹಾರೋಹಳ್ಳಿಯ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿ ಮೇಣದಬತ್ತಿಯನ್ನು ಹಚ್ಚಿ ಹೂ ಹಾಕಿ ಸಂತಾಪವನ್ನು ಸೂಚಿಸಿದರು.