ಮುದ್ದೇಬಿಹಾಳ: ನಮ್ಮ ಸೈನಿಕರನ್ನು, ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದ ನಿವೃತ್ತ ಸೈನಿಕರನ್ನು ಸತ್ಕಾರ ಮಾಡುವುದು, ರಕ್ಷಣೆ ಮಾಡುವುದು ಮಠಾಧಿಶರ ಕರ್ತವ್ಯ. ಪಾಕಿಸ್ತಾನ ಯುದ್ಧದ ಸವಿ ನೆನಪಿನಲ್ಲಿ ದೇಶದೆಲ್ಲೆಡೆ ವಿಜಯ್ ದಿವಸ್ ಆಚರಿಸುತ್ತಿರುವ ಸಂಭ್ರಮದ ನಡುವೆ ಇಂಥ ಕಾರ್ಯ ದೇಶಭಕ್ತರಿಗೆ ಪ್ರೇರಕ ಶಕ್ತಿಯಾಗಬಹುದಾಗಿದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ದೇವರು ಹೇಳಿದರು.
ಮುದೂರ ಗ್ರಾಮದಲ್ಲಿ ವಾಸವಾಗಿರುವ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡು ಮಡಿದ ಯೋಧ ಮಲ್ಲಪ್ಪನ ಪತ್ನಿ ಶಿವಗಂಗವ್ವ ಮಾದರ, ಸೇನೆಯಿಂದ ನಿವೃತ್ತರಾದ ಮುದ್ದೇಬಿಹಾಳ ಪಟ್ಟಣದಲ್ಲಿ ವಾಸವಾಗಿರುವ ಎಸ್‌ಬಿಐಬ್ಯಾಂಕ್‌ನ ನಿವೃತ್ತ ಅಧಿಕಾರಿ ಎಸ್.ಆರ್.ಕುಲಕರ್ಣಿ ಮತ್ತು ಎಸ್.ಎಸ್.ಹಿರೇಮಠ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಿ ಮಾತನಾಡಿದ ಅವರು, ಸೈನಿಕರ ತ್ಯಾಗ ಸ್ಮರಣೀಯ ಎಂದರು.
ಪತಿಯೊಂದಿಗೆ ಕೇವಲ 8 ತಿಂಗಳು ಸಂಸಾರ ನಡೆಸಿ, ಆತ ವೀರಮರಣವನ್ನಪ್ಪಿದ ಮೇಲೆ ಕಳೆದ 50 ವರ್ಷಗಳಿಂದ ಪತಿಯ ಸ್ಮರಣೆಯಲ್ಲೇ ಜೀವಿಸುತ್ತಿರುವ ಶಿವಗಂಗಮ್ಮ ಸೈನಿಕರ ಪತ್ನಿಯರಿಗೆ ಮಾದರಿಯಾಗಿದ್ದಾರೆ. ಸರ್ಕಾರದಿಂದ ಬರುವ ಅತ್ಯಲ್ಪ ಮಾಸಾಶನದಲ್ಲೇ ಜೀವನ ನಡೆಸುತ್ತಿರುವ ಇವರಂಥ ಅನೇಕ ವಿಧವೆಯರನ್ನು ಸರ್ಕಾರ ಗುರುತಿಸಿ ಈಗ ದೊರೆಯುವ ಸೌಲಭ್ಯಗಳನ್ನು ನೀಡಿ ಅವರ ಸೇವೆಯನ್ನು ಎತ್ತಿ ಹಿಡಿಯುವ ಅವಶ್ಯಕತೆ ಇದೆ ಎಂದರು. ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖಂಡರೂ ಆಗಿರುವ ಪತ್ರಕರ್ತ ಪುಂಡಲೀಕ ಮುರಾಳ ಮಾತನಾಡಿ, ಡಾ| ಚನ್ನವೀರ ದೇವರು ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಒಬ್ಬ ಮಠಾಧೀಶರಾಗಿ ಮಾಜಿ ಸೈನಿಕರ ಮನೆಗೇ ಹೋಗಿ ಅವರನ್ನು ಸತ್ಕರಿಸಿ ನಿಮ್ಮ ಜೊತೆ ಶ್ರೀಮಠ ಸದಾಕಾಲ ಇರುತ್ತದೆ ಎಂದು ಆಶೀರ್ವದಿಸಿ ಅವರಿಗೆ ಧೈರ್ಯ ತುಂಬಿರುವುದು ಶ್ಲಾಘನೀಯ. ಶ್ರೀಮಠದ ಈ ಸಮಾಜಮುಖೀ ಕಾರ್ಯಕ್ಕೆ ನಮ್ಮಂಥವರು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಆರ್ .ಐ.ಹಿರೇಮಠ ಮಾತನಾಡಿ, ಡಾ| ಚನ್ನವೀರ ದೇವರು ಅತ್ಯಂತ ಸ್ತುತ್ಯರ್ಹ ಕಾರ್ಯ ಮಾಡಿದ್ದಾರೆ. ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರ ಮನೆಗೆ ತೆರಳಿ ಅವರಿಗೆ ಸತ್ಕರಿಸಿದ್ದು ಇಡಿ ಸೈನ್ಯವಲಯಕ್ಕೆ ಸಂದಗೌರವವಾಗಿದೆ.ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ಎಂದಿಗೂ ಮರೆಯಲಾಗದಂಥದ್ದು. ಮಾಜಿ ಸೈನಿಕರ ಸಂಘವು ಸದಾ ಶ್ರೀಮಠದ ಜೊತೆಗಿದೆ ಎಂದರು.
ಸನ್ಮಾನಿತರ ಪರವಾಗಿ ಮಾತನಾಡಿದ ಎಸ್.ಆರ್.ಕುಲಕರ್ಣಿ, ನಮ್ಮಕುಲಕರ್ಣಿ ಮನೆತನಕ್ಕೂ ಕುಂಟೋಜಿ ಬಸವಣ್ಣನಿಗೂ ಅವಿನಾಭಾವ ಸಂಬಂಧ ಇದೆ. ಬಿದರಕುಂದಿ ಕುಲಕರ್ಣಿಯವರ ಮನೆಗೆ 16ನೇ ಶತಮಾನದಿಂದಲೂ ಕುಂಟೋಜಿ ಬಸವಣ್ಣ ಆರಾಧ್ಯದೈವವಾಗಿದ್ದಾರೆ. ನಮ್ಮ ಪೂರ್ವಜರೆಲ್ಲರೂ ಕುಂಟೋಜಿ ಬಸವಣ್ಣನಿಗೆ ನಡೆದುಕೊಳ್ಳುತ್ತಿದ್ದರು. ನಮ್ಮ ಮನೆಯ ದೇವರ ಕೋಣೆಯಲ್ಲೂ ಕುಂಟೋಜಿ ಬಸವಣ್ಣ ಇದ್ದಾನೆ. ನಮ್ಮ ಆರಾಧ್ಯದೈವದ ಸ್ಥಾನದಿಂದ ಬಂದು
ನಮ್ಮನ್ನು ಸತ್ಕರಿಸಿರುವ ಡಾ| ಚನ್ನವೀರ ದೇವರು 15-20 ವರ್ಷಗಳಿಂದ ಸದಾ ನಮ್ಮ ಹೃದಯದಲ್ಲಿ ಕುಳಿತು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದರು.
ಎಸ್.ಆರ್.ಕುಲಕರ್ಣಿ ಮತ್ತು ಎಸ್.ಎಸ್ .ಹಿರೇಮಠರನ್ನು ದಂಪತಿ ಸಮೇತ, ಮುದೂರಿನ ಶಿವಗಂಗಮ್ಮ ಅವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಶ್ರೀಮಠದ ಭಕ್ತರು, ಡಾ| ಚನ್ನವೀರ ದೇವರ ಅನುಯಾಯಿಗಳು, ಪುರಸಭೆ ಮಾಜಿ ಸದಸ್ಯ ಸತೀಶ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.