Advertisement
ಸರಕಾರಿ,ಅನುದಾನಿತ ಕಾಲೇಜುಗಳ ಈಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರುಗಳು ಶೈಕ್ಷಣಿಕ ಉದ್ದೇಶದ ವಿದೇಶ ಪ್ರವಾಸ ಕೈಗೊಳ್ಳುವುದಕ್ಕೆ ಇರುವ ಕಾನೂನು-ಕಟ್ಟಳೆಗಳನ್ನ ಮತ್ತಷ್ಟು ಕಠಿಣಗೊಳಿಸಿ ರಾಜ್ಯ ಸರಕಾರ ಮೂಗುದಾರ ಹಾಕಿದೆ.
Related Articles
ವಿದೇಶದಲ್ಲಿ ನಡೆಯುವ ಶೈಕ್ಷಣಿಕ ಸಂಬಂಧಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಅಥವಾ ಆಹ್ವಾನಿಸಿರುವ ಬಗ್ಗೆ ಸಂಬಂಧಪಟ್ಟ ಸಂಸ್ಥೆಯ ಅಧಿಸೂಚನೆ, ಆದೇಶದ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಯಾವ ದೇಶಕ್ಕೆ ಪ್ರಯಾಣ, ಹೊರಡುವ ದಿನಾಂಕ, ನಿರ್ಧಿಷ್ಟ ಸ್ಥಳ ಹಾಗೂ ಹಿಂದಿರುಗುವ ದಿನಾಂಕ ಸೇರಿದಂತೆ ಎಷ್ಟು ದಿನದ ಪ್ರವಾಸ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖೀಸಬೇಕು. ವಿದೇಶಕ್ಕೆ ಹೊರಡುವ ಬೋಧಕ ಸಿಬ್ಬಂದಿ ಯಾವ ರಜೆಯನ್ನು ಬಳಸಿಕೊಂಡಿದ್ದಾರೆ ಮತ್ತು ಅವರ ಹಕ್ಕಿನಲ್ಲಿರುವ ರಜೆಯ ವಿವರ ಕಡ್ಡಾಯವಾಗಿ ನೀಡಲು ಸೂಚಿಸಿದೆ.
Advertisement
ಖಾತೆಯ ವಿವರ :ಪ್ರಾಧ್ಯಾಪಕರು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಹಿಸಲು ತಗಲುವ ಒಟ್ಟು ವೆಚ್ಚ ಹಾಗೂ ಈ ವೆಚ್ಚ ಭರಿಸುವ ವಿಧಾನದ ಬಗ್ಗೆ ಮಾಹಿತಿ ಒದಗಿಸಿ, ಸ್ವಂತ ಖರ್ಚಿನಲ್ಲಿ ವಿದೇಶಿ ಪ್ರಯಾಣ ಕೈಗೊಂಡಿದ್ದಲ್ಲಿ ಉಳಿತಾಯ ಖಾತೆಯ ವಿವರ ಹಾಗೂ ಮೂರು ವರ್ಷದ ಆಸ್ತಿ ಹೊಣೆಗಾರಿಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ನಂತರವೇ ಪ್ರವಾಸ ಮುಂದುವರಿಸಬೇಕು ಎಂಬ ಕಟ್ಟಪ್ಪಣೆ ಮಾಡಿದೆ. ವಿದೇಶಕ್ಕೆ ತೆರಳಿದ ಪ್ರಾಧ್ಯಾಪಕರ ವಿದೇಶಿ ವಾಸ್ತವ್ಯದ ವಿಳಾಸ, ಪಾಸ್‌ಪೋರ್ಟ್ ದೃಢೀಕೃತ ಪ್ರತಿ, ಸೇವಾ ಪೂರ್ವ ಅವಧಿ ಘೋಷಣಾ ಆದೇಶ ಪ್ರತಿಯ ಜತೆಗೆ ಪ್ರಾಧ್ಯಾಪಕ ವಿದೇಶದಲ್ಲಿ ಮಂಡಿಸಿದ ಪ್ರಬಂಧದ ವಿಷಯ ಹಾಗೂ ಆ ಪ್ರಬಂಧ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅನುಕೂಲವಾಗಿದೆಯೇ ಎಂಬ ಬಗ್ಗೆ ಪ್ರಾಂಶುಪಾಲರಿಂದ ಅಧಿಕೃತ ಶಿಫಾರಸ್ಸು ಪಡೆಯಲೇ ಬೇಕು. ಪರ್ಯಾಯ ವ್ಯವಸ್ಥೆ ಅಗತ್ಯ :
ವಿದೇಶ ಪ್ರವಾಸ ಮಾಡುವ ಸಂದರ್ಭದಲ್ಲಿ ಕಾಲೇಜಿನ ದೈನಂದಿನ ಚಟುವಟಿಕೆ, ಪಾಠಪ್ರವಚನ, ಪರೀಕ್ಷಾ ಹಾಗೂ ಕಚೇರಿ ಕೆಲಸ ಇತ್ಯಾದಿಗೆ ಕುಂದುಂಟಾಗದಂತೆ ಪರ್ಯಾಯ ವ್ಯವಸ್ಥೆಯಾಗಿರುವ ಬಗ್ಗೆ ಪ್ರಾಂಶುಪಾಲರು ಷರಾ ನೀಡಬೇಕು. ಸಂಬಂಧಪಟ್ಟ ಪ್ರಾಧ್ಯಾಪಕರಿಂದಲೂ ಸ್ವಯಂ ದೃಢೀಕರಣ ಇರಬೇಕು. ವಿಶ್ವವಿದ್ಯಾಲಯದಿಂದಲೂ ವಿನಾಯತಿ ಪತ್ರ ಪಡೆಯುವುದರ ಜತೆಗೆ ವಿದೇಶಕ್ಕೆ ಹೋದ ಸಂದರ್ಭದಲ್ಲಿ ರಾಜೀನಾಮೆ ನೀಡುವುದಿಲ್ಲ, ಅನುಮತಿ ಪಡೆದ ಅವಧಿಗಿಂತ ಅಧಿಕಾಲ ಅಲ್ಲಿಯೇ ಉಳಿಯುವುದಿಲ್ಲ ಹಾಗೂ ರಜೆಯನ್ನು ಮುಂದುವರಿಸುವುದಿಲ್ಲ ಎಂಬ ಬಗ್ಗೆಯೂ ಸ್ವಯಂ ದೃಢೀಕರಣ ನೀಡಲೇ ಬೇಕು ಎಂಬ ನಿಯಮ ಸರ್ಕಾರ ರೂಪಿಸಿದೆ. ವಿದೇಶಕ್ಕೆ ಹೊರಡುವ ಪ್ರಾಧ್ಯಾಪಕರ ಮೇಲೆ ಯಾವುದೇ ಪೇಬಾಕಿ ಅಥವಾ ಇಲಾಖೆ ವಿಚಾರಣೆ, ನ್ಯಾಯಾಂಗ ತನಿಖೆ, ಕ್ರಿಮಿನಲ್ ಮೊಕದ್ದಮೆ ಇರುವುದಿಲ್ಲ ಎಂಬ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರು ದೃಢೀಕರಿಸಿದ ನಂತರವೇ ವಿದೇಶಕ್ಕೆ ಹಾರಲು ಅನುಮತಿ ನೀಡಲಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು, ಪ್ರಾಧ್ಯಾಪಕರು ಯಾವ ಉದ್ದೇಶಕ್ಕಾಗಿ ವಿದೇಶ ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಅದರ ಖರ್ಚು, ವೆಚ್ಚದ ಬಗ್ಗೆ ಇಲಾಖೆ ಅಥವಾ ಸರ್ಕಾರಕ್ಕೆ ಅಪೂರ್ಣ ಮಾಹಿತಿ ಬರುತ್ತಿದ್ದು, ಪ್ರಾಧ್ಯಾಪಕರ ಪ್ರವಾಸದ ಸ್ಪಷ್ಟ ಮಾಹಿತಿಯ ಜತೆಗೆ ಯಾವುದೇ ಗೊಂದಲಕ್ಕೂ ಅವಕಾಶ ನೀಡದ ರೀತಿಯಲ್ಲಿ ನಿಯಮ ರೂಪಿಸಲಾಗಿದೆ.
– ಎಂ.ಶಿಲ್ಪ, ಪ್ರಭಾರ ನಿರ್ದೇಶಕಿ, ಕಾಲೇಜು ಶಿಕ್ಷಣ ಇಲಾಖೆ