ಚೊಚ್ಚಲ ಬಸುರಿಯಲ್ಲಿ ಸೀರೆ ಕೊಡಿಸುವ ಮಾತಿರಲಿ, ತಿನ್ನಲು ಸೀಬೆಕಾಯಿ ಬೇಕೆನಿಸಿದರೂ ಆತ ಕೊಡಿಸಲಿಲ್ಲ. ಬಾಣಂತನಕ್ಕೆ ತವರಿಗೆ ಹೋಗಿಬರುವಷ್ಟರಲ್ಲಿ ಮನೆಯಲ್ಲಿದ್ದ ಗಾಡ್ರೇಜ್ ಬೀರು ಮಾಯವಾಗಿತ್ತು. ಎರಡನೇ ಮಗುವಾಗುವ ಹೊತ್ತಿಗೆ ತವರಿನವರು, ಆಕೆಯನ್ನು ಗಂಡನ ಮನೆಗೆ ತಿರುಗಿ ಕಳಿಸಲಿಲ್ಲ. ಮಕ್ಕಳು ಕೂಡಾ ತವರಿನಲ್ಲಿಯೇ ಬೆಳೆದರು.
ಆಕೆಗೆ ಇತ್ತೀಚೆಗೆ ಗೀಳು ಚಟ ಎಂಬ ಮಾನಸಿಕ ಕಾಯಿಲೆ ಶುರುವಾಗಿದೆ. ಪದೇ ಪದೆ ಕೈ ತೊಳೆಯುತ್ತಾರೆ. ದೇವರಿಗೆ ಅಪವಿತ್ರವಾಗುತ್ತದೆ ಎಂಬ ಭಯದಲ್ಲಿ ದೇವರ ವಿಗ್ರಹಗಳನ್ನೂ, ಪೂಜಾ ಸಾಮಗ್ರಿಗಳನ್ನೂ ದಿನವೂ ಶುಚಿ ಮಾಡುತ್ತಲೇ ಇರುತ್ತಾರೆ. ಯಾರೊಂದಿಗೂ ಮಾತು ಬೇಕಿಲ್ಲ. ಆಕೆಯ ಇಬ್ಬರು ಮಕ್ಕಳಿಗೂ ಮದುವೆಯಾಗಿ, ಅವರವರ ಸಂಸಾರದಲ್ಲಿ ಹಾಯಾಗಿದ್ದಾರೆ. ಆದರೆ, ಆಕೆಗೆ ಮಾತ್ರ ನೆಮ್ಮದಿಯಿಲ್ಲ. ಮನೋವೈದ್ಯರು ಮಾತ್ರೆಗಳನ್ನು ಬರೆದುಕೊಟ್ಟು, ನನ್ನ ಬಳಿ ಸಮಾಲೋಚನೆಗೆ ಕಳಿಸಿದ್ದರು.
ಹದಿನೆಂಟನೇ ವರ್ಷಕ್ಕೆ ಆಕೆ ಮದುವೆಯಾದಾಗ, ಸಂಸಾರದ ಬಗ್ಗೆ ಕಣ್ಣು ತುಂಬಾ ಬಣ್ಣಬಣ್ಣದ ಕನಸುಗಳಿದ್ದವು. ವಾಸ್ತವದಲ್ಲಿ ಆಕೆಗೆ ಸಿಕ್ಕಿದ್ದು ಕುಡುಕ ಗಂಡ. ತಂದೆಯ ಮನೆಯಲ್ಲಿ ತೃಪ್ತಿಯಿಂದ ಬದುಕಿದ್ದ ಹುಡುಗಿಗೆ ವಠಾರದ ಬದುಕು ಕಷ್ಟವಾಗುತ್ತಿತ್ತು. ಹತ್ತು ಮನೆಗಳಿಗೆ ಇದ್ದ ಒಂದೇ ಪಾಯಿಖಾನೆಗೆ ಹೋಗಿ-ಬರುವಾಗ ಗಲೀಜು ಎನಿಸುತ್ತಿತ್ತು. ಜೊತೆಗೆ ಹೆದರಿಕೆಯೂ ಆಗುತ್ತಿತ್ತು. ಗಂಡನ ಜೊತೆಗೆ ಸ್ನೇಹವಿದ್ದಿದ್ದರೆ, ವಠಾರದ ಕಷ್ಟದ ಬದುಕಿಗೆ ಹೊಂದಿಕೊಳ್ಳುತ್ತಿದ್ದರೇನೋ. ಆದರೆ, ಇಸ್ಪೀಟು-ಕುಡಿತದ ಚಟಕ್ಕೆ ಬಿದ್ದವನು, ಮೂರು ಸಲ ಮಾಂಗಲ್ಯದ ಸರವನ್ನೇ ಅಡವಿಟ್ಟವನು, ಆಕೆಯ ಸ್ನೇಹವನ್ನು ಉಳಿಸುತ್ತಾನೆಯೇ? ಚೊಚ್ಚಲ ಬಸುರಿಯಲ್ಲಿ ಸೀರೆ ಕೊಡಿಸುವ ಮಾತಿರಲಿ, ತಿನ್ನಲು ಸೀಬೆಕಾಯಿ ಬೇಕೆನಿಸಿದರೂ ಆತ ಕೊಡಿಸಲಿಲ್ಲ. ಬಾಣಂತನಕ್ಕೆ ತವರಿಗೆ ಹೋಗಿಬರುವಷ್ಟರಲ್ಲಿ ಮನೆಯಲ್ಲಿದ್ದ ಗಾಡ್ರೇಜ್ ಬೀರು ಮಾಯವಾಗಿತ್ತು. ಎರಡನೇ ಮಗುವಾಗುವ ಹೊತ್ತಿಗೆ ತವರಿನವರು, ಆಕೆಯನ್ನು ಗಂಡನ ಮನೆಗೆ ತಿರುಗಿ ಕಳಿಸಲಿಲ್ಲ. ಮಕ್ಕಳು ಕೂಡಾ ತವರಿನಲ್ಲಿಯೇ ಬೆಳೆದರು.
ವ್ಯಕ್ತಿಯೊಬ್ಬ ಗೀಳು ಚಟಕ್ಕೆ ಬೀಳಲು ಮುಖ್ಯ ಕಾರಣ ಖನ್ನತೆ ಮತ್ತು ಉದ್ವಿಘ್ನತೆ. ಸಂಬಂಧಿಕರ ಮಕ್ಕಳ ಮದುವೆಗಳಲ್ಲಿ ಹಾಲು ತುಪ್ಪ ಬಿಡುವಾಗ, ಗಂಡನಿದ್ದರೂ ವಿಧವೆಯಂತೆ ಬದುಕಿದೆನಲ್ಲಾ ಎಂಬುದೇ ಆಕೆಗೆ ಖನ್ನತೆಯಾಗಿ ಬೆಳೆಯಿತು. ಪಾರ್ಕ್‌ನಲ್ಲಿ ವೃದ್ಧ ದಂಪತಿಗಳನ್ನು ನೋಡಿದಾಗ ಅವ್ಯಕ್ತ ನೋವು. ಸಂಗಾತಿಯಿಲ್ಲದೆ, ಬದುಕು ಸಹ್ಯವಾಗುವುದಿಲ್ಲ. ದೇವರಿಗೆ ತಾನೇನೋ ಅಪಚಾರ ಮಾಡಿದ್ದರಿಂದಲೇ ತನಗೆ ಒಂಟಿತನದ ಶಾಪ ತಟ್ಟಿದೆ ಎಂದು ಆಕೆ ದೃಢವಾಗಿ ನಂಬಿದ್ದರು. ಆ ರೀತಿ ಮನಸ್ಸು ಮಾಡಿಕೊಳ್ಳುವ pairing ಅನ್ನು ಆಪ್ತ ಸಮಾಲೋಚನೆಯಲ್ಲಿ ಬದಲಾಯಿಸಬೇಕು. ಆಗ ದೇವರ ಕೋಣೆಯನ್ನು ಶುಚಿಯಾಗಿಡುವ ಹುಚ್ಚು/ಗೀಳು ಕಡಿಮೆಯಾಗುತ್ತದೆ. ಕೈ ತೊಳೆಯುವ ಚಟಕ್ಕೆ ಮುಕ್ತಿ ದೊರಕುತ್ತದೆ.
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸ್ವಂತ ತಂದೆಯಿಂದ ತೊಂದರೆಯಾಯಿತು. ಬೆಳೆದ ಮೇಲೆ, ಅಮ್ಮನ ವೃದ್ಧಾಪ್ಯದಿಂದ ಮತ್ತೆ ಆ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ಆಕೆಯ ಒಳ ಮನಸ್ಸಿನ ನೋವನ್ನು ಕೌನ್ಸೆಲಿಂಗ್ ಹಂತದಲ್ಲಿ ಗುರುತಿಸಲಾಯಿತು. ವೃದ್ಧಾಶ್ರಮ ಎಂದರೆ, ಮಕ್ಕಳಿಂದ ತಿರಸ್ಕರಿಸಲಾದವರು ಇರುವ ಜಾಗವಲ್ಲ, ಬದಲಿಗೆ ಒಂಟಿಯಾಗಿರುವವರಿಗೆ ಸ್ನೇಹದ ಸೌಭಾಗ್ಯವನ್ನು ಕೊಡುವ ಜಾಗ ಎಂಬುದು ಆಕೆಯ ನಿಲುವು. ವೃದ್ಧಾಶ್ರಮ ಸೇರುವ ಆಕೆಯ ಮನದಾಳದ ಇಂಗಿತವನ್ನು ಕೌಟುಂಬಿಕಾ ಸಲಹೆಯಲ್ಲಿ, ಆಕೆಯ ಮಕ್ಕಳಿಗೆ ತಿಳಿಸಿ ಹೇಳಲಾಯ್ತು. ಆನಂತರ ಆಕೆಯ ಮನಸ್ಸು ಕೂಡಾ ನಿರಾಳವಾಯಿತು.
ದುಃಖಭರಿತವಾದ ಆಲೋಚನೆಗಳು ಪುನರಾವರ್ತಿತವಾಗುವುದನ್ನು ಕಡಿಮೆ ಮಾಡಲು ನಿಧಾನಗತಿಯ ಕ್ರಮಬದ್ಧ ಉಸಿರಾಟ ಸಹಕಾರಿ. ದಿನಕ್ಕೆ ನಾಲ್ಕು ಸಲ ಅಭ್ಯಾಸ ಮಾಡಬೇಕು. ಮನೋವೈದ್ಯರ ಮದ್ದು ಮತ್ತು ಕೌನ್ಸೆಲಿಂಗ್ ಮೂಲಕ ಗೀಳು-ಚಟವನ್ನು ಹೋಗಲಾಡಿಸಬಹುದು.
ಕೊನೆಯ ಮಾತು: ಕುಡಿತ ಮತ್ತು ಇಸ್ಪೀಟು ಕೇವಲ ಒಬ್ಬ ವ್ಯಕ್ತಿಯನ್ನು ಹಾಳುಮಾಡುವುದಿಲ್ಲ. ಆ ಚಟಗಳು ಕೌಟುಂಬಿಕ ಸ್ವಾಸ್ಥ್ಯವನ್ನೇ ಹಾಳುಮಾಡುತ್ತಿವೆ.
ಡಾ. ಶುಭಾ ಮಧುಸೂದನ್
ಚಿಕಿತ್ಸಾ ಮನೋವಿಜ್ಞಾನಿ