ಕಲಬುರಗಿ: ಜ್ಞಾನದ ಜತೆ ಕೌಶಲ್ಯಗಳು, ಬದುಕು ಕಲಿಸಿಕೊಡುವ ನೂತನ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ರಾಷ್ಟ್ರದ್ಯಾಂತ ಜಾರಿಗೊಳ್ಳಬೇಕಾದರೆ ಶಿಕ್ಷಕರು ಹೊಸ ವಿಷಯಗಳನ್ನು ತಿಳಿದುಕೊಂಡು ಸೃಜನಶೀಲತೆಯೊಂದಿಗೆ ಗುಣಾತ್ಮಕ ಬೋಧನೆ ಮಾಡಬೇಕು ಎಂದು ಎಬಿಆರ್‌ಎಸ್‌ಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನೂತನ ಶಿಕ್ಷಣ ನೀತಿಯ ಕಾರ್ಯಕಾರಿ ಸದಸ್ಯ ಶಿವಾನಂದ ಸಿಂಧನಕೇರಾ ಹೇಳಿದರು.
ನಗರದ ಆಳಂದ ರಸ್ತೆಯ ಇಂಡೋ-ಕಿಡ್ಜ್ ಶಾಲೆ ಸಭಾಂಗಣದಲ್ಲಿ ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
ಎನ್‌ಇಪಿ ವಿದ್ಯಾರ್ಥಿಗಳಿಗೆ ಸ್ವಾವಲಂಬನೆ ಜೀವನ ರೂಪಿಸುವ ಈ ನೀತಿಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅಖೀಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘವು ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘವು ಗುಣಾತ್ಮಕ ಶಿಕ್ಷಣಕ್ಕಾಗಿ ಒತ್ತು ನೀಡಿ ಕೆಲಸ ಮಾಡುತ್ತಿದೆ. ತಮಗೆ ಎರಡನೇ ಬಾರಿ ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಇದನ್ನೂ ಓದಿ: ಪೂರ್ವಿಕಾ ದೀಪಾವಳಿ ಮೆಗಾ ಡೀಲ್
ಕಲ್ಯಾಣ ಕರ್ನಾಟಕ ಭಾಗದ ಜನರು ಕೀಳರಿಮೆ ತೊರೆದು, ಇನ್ನೂ ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ. ನಮ್ಮ ಸಾಧನೆಯೇ ಉತ್ತರವಾಗಬೇಕು. ಶರಣರ, ಸಂತರ ಪುಣ್ಯಭೂಮಿ ಇದಾಗಿದ್ದು, ಸಾಧನೆ ಮಾಡಲು ನಿಂತರೆ ಎಲ್ಲವೂ ಸಾಧ್ಯ ಎಂದು ಹೇಳಿದರು.
ಎಚ್.ಬಿ.ಪಾಟೀಲ, ಚಂದ್ರಶೇಖರ ಪಾಟೀಲ, ಕೆ.ಬಸವರಾಜ, ಚಂದ್ರಕಾಂತ ಬಿರಾದಾರ, ಸಂಜೀವಕುಮಾರ ಪಾಟೀಲ, ಶಿವಶರಣ ಉದನೂರ, ವಿಲಾಸರಾವ ಸಿನ್ನೂರಕರ್, ಶ್ರೀಪಾಲ ಭೋಗಾರ, ನಾನಾಗೌಡ ಪಾಟೀಲ, ಪ್ರಭುಲಿಂಗ ಮೂಲಗೆ, ಅಂಬಾರಾಯ ಬನ್ನೂರ್, ಶಿವಪುತ್ರಪ್ಪ ಬಿರಾದಾರ, ನಾಗರಾಜ ಆರ್., ವಿಠuಲ ಕುಂಬಾರ, ಅನಿಲ ಧೋತ್ರೆ ಮತ್ತಿತರರು ಭಾಗವಹಿಸಿದ್ದರು.