Advertisement

ಮಕ್ಕಳ ಬೌದ್ಧಿಕ ವೃದ್ಧಿಯಲ್ಲಿ ತಾಯಂದಿರ ಪಾತ್ರ ಹಿರಿದು

04:17 PM Jun 10, 2017 | |

ದಾವಣಗೆರೆ: ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಶಿಕ್ಷಕರಿಗಿಂತ ತಾಯಂದಿರ ಪಾತ್ರ ಪ್ರಮುಖವಾದುದು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಶುಕ್ರವಾರ ರಾಷೋತ್ಥಾನ ವಿದ್ಯಾ ಕೇಂದ್ರದ ಸಿಬಿಎಸ್‌ಸಿ ವಿಭಾಗದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಮಾತನಾಡಿದರು.

Advertisement

ಯಾವುದೇ ಮಗು ಬೌದ್ಧಿಕ ಬೆಳವಣಿಗೆಗೆ ತಾಯಿ ಪಾತ್ರ ಹಿರಿದಾಗಿರುತ್ತದೆ. ಶಿಕ್ಷಕರು ಎಷ್ಟೇ ಕಲಿಸಿದರೂ ತಾಯಂದಿರು ಮಾರ್ಗದರ್ಶನ ನೀಡದ ಹೊರತು ಮಕ್ಕಳ ಬೌದ್ಧಿಕ ಪ್ರಗತಿ ಹೊಂದದು ಎಂದು ಉದಾಹರಣೆಸಹಿತ ಪ್ರತಿಪಾದಿಸಿದರು. ಬಲ್ಬ್ ಕಂಡು ಹಿಡಿದ ಥಾಮಸ್‌ ಅಲ್ವಾ ಎಡಿಸನ್‌ ಬಾಲಕನಾಗಿದ್ದಾಗ ಶಾಲೆ ಶಿಕ್ಷಕರು ನಿಮ್ಮ ಮಗ ದಡ್ಡ ಎಂಬುದಾಗಿ ಪತ್ರ ಬರೆದರೆ ತಾಯಿ ಅದನ್ನು ತಿರುಚಿ ಹೇಳಿದ್ದರು.

ನೀನೊಬ್ಬ ಅತೀ ಬುದ್ಧಿವಂತ ಮಗುವಾಗಿದ್ದು, ಅವರ ಶಾಲೆಯಲ್ಲಿ ನಿನಗೆ ಕಲಿಸುವಂತಹ ಶಿಕ್ಷಕರಿಲ್ಲವಂತೆ ಎಂದು ಹೇಳಿದ್ದರು. ಆತ ಅದರಿಂದ ಸ್ಫೂರ್ತಿಯಿಂದ ಭಾರೀ ಸಾಧನೆ ಮಾಡಿದ. ಒಂದು ವೇಳೆ ತಾಯಿ ಆಗ ಶಿಕ್ಷಕರು ಪತ್ರದಲ್ಲಿ ಬರೆದಿದ್ದನ್ನ ಮಗನಿಗೆ ತಿಳಿಸಿದ್ದರೆ ಆತ ಖನ್ನತೆಗೊಳಗಾಗಿ ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು. 

ಮಕ್ಕಳ ಶಿಕ್ಷಣದ ಮೊದಲ ಹಂತ ಅಕ್ಷರ ಜ್ಞಾನ ಕಲಿಸುವುದಾಗಿದೆ. ಅಕ್ಷರ ಜ್ಞಾನ ಕಲಿಕೆ ಅಂದರೆ ಶಬ್ದಗಳನ್ನು ಓದುವ ಸಾಮರ್ಥ್ಯ ಕಲಿಸುವುದು. ಈ ಹಂತದಲ್ಲಿ ಮಕ್ಕಳ ಕೌತುಕವನ್ನು ನಾವು ಪ್ರೋತ್ಸಾಹಿಸಬೇಕು. ತಾಯಂದಿರು ಮಕ್ಕಳು ಏನೇನೋ ಪ್ರಶ್ನೆ ಮಾಡುತ್ತಾರೆ ಎಂದು ಗೊಣಗಿಕೊಳ್ಳುವ, ಗದರಿಸುವ ಕೆಲಸ ಮಾಡಬಾರದು. ವೇದ, ಉಪನಿಷತ್ತುಗಳಲ್ಲಿ ಹೇಳಿದಂತೆ ಪ್ರಶ್ನೆಮಾಡುವುದು ಜ್ಞಾನ ಗಳಿಕೆಯ ಮೂಲ.

ಹಾಗಾಗಿ ಮಕ್ಕಳ ಪ್ರಶ್ನೆಗೆ ಸಾಧ್ಯವಾದರೆ ಉತ್ತರ ನೀಡಬೇಕು. ಇಲ್ಲವೇ ತಿಳಿದುಕೊಂಡು ಹೇಳುವುದಾಗಿ ತಿಳಿಸಬೇಕು ಎಂದು ಅವರು ಹೇಳಿದರು. ನಮ್ಮ ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶದ ಸಾಲಿನಲ್ಲಿ ಇಲ್ಲದೇ ಇರಬಹುದು. ಆದರೆ, ಬೌದ್ಧಿಕವಾಗಿ ಬಹು ಶ್ರೀಮಂತ ದೇಶ. ಅಮೇರಿಕಾ ಸೇರಿದಂತೆ ವಿವಿಧ ದೇಶದ ಮಕ್ಕಳ ಜೊತೆ ನಮ್ಮ ಮಕ್ಕಳನ್ನು ಹೋಲಿಕೆ ಮಾಡಿ ನೋಡಿದರೆ ಜ್ಞಾನಾರ್ಜನೆ, ಪ್ರತಿಭೆ ವಿಷಯದಲ್ಲಿ ನಮ್ಮ ಮಕ್ಕಳು ಬಹು ಮುಂದಿದ್ದಾರೆ.

Advertisement

ಇದಕ್ಕೆ ಈ ದೇಶದ ಮಣ್ಣಿನ ಗುಣ, ನಮ್ಮ ಪೂರ್ವಿಕರು ಬಿಟ್ಟುಹೋದ ಬೌದ್ಧಿಕ ಸಂಪತ್ತು ಕಾರಣ ಎಂದು ಅವರು ತಿಳಿಸಿದರು. ಉಪನಿಷತ್‌ ಕಾಲದಿಂದಲೂ ವಿಜ್ಞಾನದ ಕುರಿತು ಪ್ರಸ್ತಾಪ ಇದೆ. ಆದರೆ, ವಿಜ್ಞಾನ ಎಂಬ ಪದಕ್ಕೆ ಬೇರೆ ಅರ್ಥ ಇದೆ. ವಿಜ್ಞಾನ ಅಂದರೆ ಮೋಕ್ಷಕ್ಕೆ ಗಳಿಸುವ ವಿಶೇಷ ಜ್ಞಾನವಾಗಿದೆ. ಜ್ಞಾನ ಎಂಬುದನ್ನು ನಮ್ಮವರು ಸಾಧಾರಣ ಜ್ಞಾನ, ಲೋಕ ಜ್ಞಾನ, ವಿಜ್ಞಾನ ಎಂಬುದಾಗಿ ಮೂರು ವಿಭಾಗ ಮಾಡಿದ್ದರು.

ಅಂದಿನ ಅನೇಕ ಸಾಮಾನ್ಯ ವಿಷಯಗಳು ಇಂದು ವಿಜ್ಞಾನ ಅಂದರೆ ವಿಶೇಷ ಜ್ಞಾನ ಆಗಿವೆ ಎಂದು ಅವರು ವಿಶ್ಲೇಷಿಸಿದರು. ಮೊಬೈಲ್‌ ಬಳಕೆ ಇಂದು ಅತಿಯಾಗುತ್ತಿದೆ. ಸಣ್ಣ ಮಕ್ಕಳು ಸಹ ಮೊಬೈಲ್‌ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಂಸ್ಕೃತೀಕರಿಸಿ, ಕರ್ಣ ಪಿಶಾಚಿ ಎಂಬುದಾಗಿ ಕರೆಯಬಹುದು. ಅಷ್ಟರಮಟ್ಟಿಗೆ ಮೊಬೈಲ್‌ನಿಂದ ಕಿರಿಕಿರಿ ಆಗುತ್ತಿದೆ. ಆದರೆ, ಇದರಿಂದ ಸದ್ಬಳಕೆ ಸಹ ಇದೆ.

ಯಾವುದೇ ಒಂದು ವಸ್ತುವನ್ನು ಸದ್ಬಳಕೆ, ದುರ್ಬಳಕೆ ಬಳಸುವವನ ಮನಸ್ಥಿತಿ ಆಧರಿಸಿ ಇರಲಿದೆ. ಮೊಬೈಲ್‌ ಸಹ ಹಾಗೆಯೇ. ಒಂದು ಜ್ಞಾನ ಭಂಡಾರವಾಗಿ ಮೊಬೈಲ್‌ ಬಳಕೆ ಮಾಡಬಹುದು ಎಂದು ಅವರು ತಿಳಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖೀಲ ಭಾರತೀಯ ಸಹ ಬೌದ್ಧಿಕ್‌ ಪ್ರಮುಖ್‌ ಮುಕುಂದ್‌ ಮಾತನಾಡಿ, ದೇಶವು ಪ್ರಸ್ತುತ ಅನೇಕ ಸಮಸ್ಯೆ ಎದುರಿಸುತ್ತಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ.

ದೇಶಕ್ಕೆ ಎದುರಾಗಿರುವ ಸವಾಲು ಪರಿಹರಿಸುವ ವ್ಯಕ್ತಿಗಳು ರೂಪುಗೊಳ್ಳಬೇಕು. ಸಮಾಜದ ನೇತೃತ್ವ ವಹಿಸಬಲ್ಲ, ಉನ್ನತ ಮೌಲ್ಯಗಳನ್ನು ಭದ್ರವಾಗಿ ಬೇರೂರಿಸಬಲ್ಲ ಅದಮ್ಯ ಚೇತನಗಳು ಮೈದಾಳಬೇಕು ಎಂದರು. ರಾಷೋrÅತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ ಹೆಗ್ಡೆ ಮಾತನಾಡಿ, ಕಳೆದ  51 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ಪರಿಷತ್ತು ನಿರಂತರವಾಗಿ ಜನಸೇವೆ, ಜನಜಾಗೃತಿ, ಜನಶಿಕ್ಷಣದ ಮೂಲಕ ಸಮಾಜದಲ್ಲಿ ರಾಷ್ಟ್ರಪ್ರಜ್ಞೆ ಮೂಡಿಸುತ್ತಿದೆ.

ಸಾಹಿತ್ಯ ಕೃತಿಗಳ ಪ್ರಕಟಣೆ, ಸಮಾಜಸೇವೆ, ಯೋಗ ತರಬೇತಿ, ರಕ್ತ ಭಂಡಾರ ಹೀಗೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂದರು. ಪರಿಷತ್‌ ಅಧ್ಯಕ್ಷ ನಾಡೋಜ ಎಸ್‌.ಆರ್‌. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲನಾ ಸಮಿತಿಯ ಕಾರ್ಯದರ್ಶಿ ಜಯಣ್ಣ, ಸಂಚಾಲಕ ಶಂಭುಲಿಂಗಪ್ಪ, ವಿನಾಯಕ ರಾನಡೆ, ಗಿರೀಶ, ಭಾರತಿ ಹೆಗಡೆ, ಗಣಪತಿ ಹೆಗಡೆ, ಸತೀಶ್‌ ಜೀ, ದ್ವಾರಕನಾಥ್‌, ರವಿಕುಮಾರ್‌, ಕೆ.ಎಸ್‌. ನಾರಾಯಣ್‌, ಎಜಿಕೆ ನಾಯ್ಕ ವೇದಿಕೆಯಲ್ಲಿದ್ದರು. ಹೊಸದಾಗಿ ದಾಖಲಾದ ಪೂರ್ವ ಪ್ರಾಥಮಿಕ ಮಕ್ಕಳಿಗೆ ತಟ್ಟೆಯಲ್ಲಿದ್ದ ಅಕ್ಕಿಯಲ್ಲಿ ಅರಿಷಿಣದ ಕೊಂಬಿನಿಂದ ಶ್ರೀಗಳು ಓಂಕಾರ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next