ಮಾನವನ ವಾಸವಿರುವ ಈ ಭೂಮಿಯು ಅತ್ಯಾಕರ್ಷಕ ಪ್ರಕೃತಿಯನ್ನು ಹೊಂದಿದೆ. ಅದರಂತೆ ಪ್ರಕೃತಿಯು ಅದೆಷ್ಟೊ ಅಗಾಧವಾದ ವಿಸ್ಮಯಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಜಗತ್ತಿನೆಲ್ಲೆಡೆ ಕಂಡುಬರುವಂತೆ ಭಾರತದಲ್ಲೂ ಸಹ ಕೆಲವು ನಯನ ಮನೋಹರವಾದ ಪ್ರಾಕೃತಿಕ ವಿಸ್ಮಯ ತಾಣಗಳಿವೆ. ಅಂಥ ಕೆಲ ನಿಸರ್ಗ ನಿರ್ಮಿತ ಆಕರ್ಷಣೆಗಳಲ್ಲಿ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಮಹಾಬಲಿಪುರಂ ಅಥವಾ ಮಾಮಲ್ಲಪುರಂನ ಕೃಷ್ಣನ ಬೆಣ್ಣೆಯ ಚೆಂಡು ಎಂಬ ಬೃಹತ್ ಬಂಡೆಯೂ ಒಂದು. ರಾಜಧಾನಿ ಚೆನ್ನೆಗೆ ಹತ್ತಿರವಿರುವ ಸಮುದ್ರ ತಟದ ಮಾಮಲ್ಲಪುರಂ ಅಥವಾ ಮಹಾಬಲಿಪುರಂ ತನ್ನಲ್ಲಿರುವ ಕಡಲ ತೀರ ತಟದ ದೇವಾಲಯಕ್ಕಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ತಾಣ. ಆದರೆ ಇಲ್ಲಿ ಒಂದು ವಿಶೇಷವಿದೆ. ಅದುವೇ ಸಮತೋಲನದ ಬಂಡೆ. ಇದಕ್ಕೆ “ಕೃಷ್ಣನ ಬೆಣ್ಣೆಯ ಚೆಂಡು’ ಎಂದು ಕರೆಯುತ್ತಾರೆ. ಈ ಬಂಡೆಯು ಸುಮಾರು 1200 ವರ್ಷಗಳ ಇತಿಹಾಸವನ್ನು ಹೊಂದಿದ್ದು ಇಳಿಜಾರಿನ ಕಲ್ಲು ಹಾಸಿಗೆಯ ಮೇಲೆ ಉರುಳದೆ ಚಿಕ್ಕದಾದ ಸ್ಥಳದಲ್ಲಿ ಹಾಗೆ ತನ್ನ ಸಮತೋಲನವನ್ನು ಕಾಯ್ದುಕೊಂಡು ನಿಂತಿರುವುದನ್ನು ನೋಡಿದಾಗ ಅಚ್ಚರಿಯಾಗದೆ ಇರಲಾರದು. ಸುಮಾರು 20 ಅಡಿ ಎತ್ತರ, 5 ಮೀಟರ್ ಅಗಲವಿರುವ ಈ ಬಂಡೆಯು 250 ಟನ್ ತೂಕವಿದೆಯೆಂದು ಅಂದಾಜಿಸಲಾಗಿದೆ. ಈ ಬಂಡೆ ಕೇವಲ 4 ಅಡಿಗಿಂತ ಕಡಿಮೆ ಜಾಗದಲ್ಲಿ ಇಳಿಜಾರಿನ ಪ್ರದೇಶದಲ್ಲಿ ಭದ್ರವಾಗಿ ನಿಂತಿರುವುದು ಎಲ್ಲರ ಅಚ್ಚರಿಗೆ ಕಾರಣ. 1908ರಲ್ಲಿ ಬ್ರಿಟಿಷ್ ಅಧಿಕಾರಿಯೊಬ್ಬರು ಈ ಬಂಡೆಯನ್ನು ಅಲ್ಲಿಂದ ತೆಗೆದುಹಾಕಲು ನಿರ್ಧರಿಸಿ ಸುಮಾರು 7 ಆನೆಗಳನ್ನು ಬಳಸಿ ಈ ಬೃಹತ್ ಬಂಡೆಯನ್ನು ಉರುಳಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಬಂಡೆ ಒಂದು ಇಂಚೂ ಕದಲಲಿಲ್ಲವಂತೆ. ಹಾಗಾಗಿ ತಮ್ಮ ಪ್ರಯತ್ನವನ್ನು ಅಲ್ಲಿಗೇ ನಿಲ್ಲಿಸುತ್ತಾರೆ. ಇತಿಹಾಸದಲ್ಲಿ ಎಷ್ಟೋ ಜನರು ಈ ಬಂಡೆಯನ್ನು ಕದಲಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ, ಆದರೆ ಆಗಿಲ್ಲ. ಈ ಬಂಡೆಯು ಪ್ರವಾಸಿಗರ ಮೆಚ್ಚಿನ ತಾಣಗಳಲ್ಲಿ ಒಂದಾಗಿದೆ.
ಪುರುಷೋತ್ತಮ್